ಮುಂಬೈ: ಪ್ರಸ್ತುತ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ಇಂದು (ಗುರುವಾರ, ಅಕ್ಟೋಬರ್ 30) ನಡೆಯಲಿದೆ. ಭಾರತ ( Team India ) ಮತ್ತು ಆಸ್ಟ್ರೇಲಿಯಾ, ನವಿ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ಹರ್ಮನ್‌ಪ್ರೀತ್ ಸಿಂಗ್ ಪಡೆ, ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ಆಸೀಸ್ ಒಂದೇ ಒಂದು ಪಂದ್ಯವನ್ನು ಸೋಲದೆ ಅಜೇಯವಾಗಿ ಸೆಮಿಫೈನಲ್ ಹಂತವನ್ನು ತಲುಪಿದೆ. ಈ ಮಧ್ಯೆ, ಟೀಮ್ ಇಂಡಿಯಾದ ವಿಶ್ವಕಪ್ ಭರವಸೆ ಜೀವಂತವಾಗಿಡಲು ಭಾರತ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕು.
ಹೌದು, ಲೀಗ್ ಹಂತದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವು ಸಮಬಲದ ಹೋರಾಟದಿಂದ ಕೂಡಿತ್ತು. ಈ ಪಂದ್ಯದಲ್ಲಿ ಭಾರತ 330 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಆದಾಗ್ಯೂ, ಕಳಪೆ ಬೌಲಿಂಗ್‌ನಿಂದಾಗಿ, 331 ರನ್‌ಗಳ ಗುರಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಸೆಮಿಫೈನಲ್‌ನಲ್ಲಿಯೂ ಎರಡೂ ತಂಡಗಳು ತೀವ್ರ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಆದಾಗ್ಯೂ, ಈ ಪಂದ್ಯಕ್ಕೆ ಮಳೆ ಬೆದರಿಕೆ ಇದೆ. ಇದರಿಂದಾಗಿ, ಭಾರತೀಯ ಆಟಗಾರರು ಹಾಗೂ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.
ಸದ್ಯ ಮುಂಬೈನಲ್ಲಿ ಹವಾಮಾನ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದೆ. ಮುಂಬೈನಲ್ಲಿ ಈಗಾಗಲೇ ಹಳದಿ ಎಚ್ಚರಿಕೆ ನೀಡಲಾಗಿದೆ. ಇಂದು, ಮೋಡ ಕವಿದ ವಾತಾವರಣ ಇದ್ದು, ತಾಪಮಾನವು 25 ಡಿಗ್ರಿ ಸೆಲ್ಸಿಯಸ್ ಮತ್ತು 32 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ಅಕ್ಯೂವೆದರ್ ವರದಿ ಮಾಡಿದೆ. ಸದ್ಯದ ಸಮಯದಲ್ಲಿ ಮಳೆ ಇಲ್ಲದಿದ್ದರೂ, ಪಂದ್ಯ ಆರಂಭವಾದಾಗ ಅಥವಾ ಪಂದ್ಯದ ನಡುವೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈ ಪಂದ್ಯಕ್ಕೆ ಮೀಸಲು ದಿನ ಶುಕ್ರವಾರ (ಅ.31). ಇಂದು ಪಂದ್ಯವಾಡಲು ಪರಿಸ್ಥಿತಿ ಸರಿಯಾಗಿಲ್ಲದಿದ್ದರೆ, ನಾಳೆ ಪಂದ್ಯ ನಡೆಯಲಿದೆ. ಆದರ, ನಾಳೆಯೂ ಸಹ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು ಕನಿಷ್ಠ 20 ಓವರ್‌ಗಳನ್ನು ಆಡಲು ಸಾಧ್ಯವಾಗದಿದ್ದರೆ. ಮೀಸಲು ದಿನದಂದು ನಿಲ್ಲಿಸಿದ ಓವರ್‌ಗಳಿಂದ ಆಟವನ್ನು ಮುಂದುವರಿಸಲಾಗುತ್ತದೆ. ದುರಾದೃಷ್ಟವಶಾತ್ ಮಳೆ ಬಂದು ಪಂದ್ಯವೇನಾದರೂ ರದ್ದಾದರೆ ಭಾರತದ ಪಾಲಿಗೆ ಅದೊಂದು ಶಾಪವಾಗಲಿದೆ.
ಇಂದು ಮತ್ತು ನಾಳೆಯ ಪಂದ್ಯಗಳನ್ನು ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ರದ್ದುಗೊಳಿಸಿದರೆ, ಗ್ರೂಪ್ ಹಂತದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಫೈನಲ್‌ಗೆ ತಲುಪುತ್ತದೆ. ಹಾಗೆ ಸಂಭವಿಸಿದಲ್ಲಿ, ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಭಾರತದ ಆಸೆ ಮತ್ತೊಮ್ಮೆ ಭಗ್ನಗೊಳ್ಳುತ್ತದೆ.
ಈ ಮಧ್ಯೆ ಬುಧವಾರ (ಅ.29) ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ. ಭಾರತ-ಆಸ್ಟ್ರೇಲಿಯಾ ನಡುವೆ ಪಂದ್ಯದಲ್ಲಿ ಯಾರು ವಿಜೇತರಾಗುತ್ತಾರೋ ಅವರು ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. (ಏಜೆನ್ಸೀಸ್)