ಕ್ರೀಡೆ

ಆತ ತಂಡದಲ್ಲಿ ಇರದೇ ಹೋಗಿದ್ದರೆ ಬಾರ್ಡರ್​ ಗವಾಸ್ಕರ್​ ಟ್ರೋಫಿ ನಮ್ಮದಾಗ್ತಿತ್ತು: ಅಚ್ಚರಿ ಹೇಳಿಕೆ ನೀಡಿದ ಅಶ್ವಿನ್! Ravichandran Ashwin ​

Ravichandran Ashwin : ಟೀಮ್​ ಇಂಡಿಯಾದ ಲೆಜೆಂಡರಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇತ್ತೀಚೆಗಷ್ಟೇ ಮುಗಿದ ಬಾರ್ಡರ್​ ಗವಾಸ್ಕರ್​ ಟ್ರೋಫಿ (ಬಿಜಿಟಿ)ಯ ಬಗ್ಗೆ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 'ಗೇಮ್ ಚೇಂಜರ್' ಯಾರು ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಅಶ್ವಿನ್​, ಸ್ಟಾರ್ ವೇಗಿಯೊಬ್ಬರ ಹೆಸರನ್ನು ಹೇಳಿದ್ದಾರೆ. ಆತ ಆಸ್ಟ್ರೇಲಿಯಾ ತಂಡದಲ್ಲಿ ಇರದೇ ಹೋಗಿದ್ದರೆ ಭಾರತ ಈ ಪ್ರತಿಷ್ಠಿತ ಟ್ರೋಫಿಯನ್ನು ಗೆಲ್ಲುತ್ತಿತ್ತು ಎಂದು ಅಶ್ವಿನ್​ ಹೇಳಿದ್ದಾರೆ.

ಟೀಮ್​ ಇಂಡಿಯಾ ಇತ್ತೀಚೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾಗವಾಗಿ ಆಸ್ಟ್ರೇಲಿಯಾ ನೆಲದಲ್ಲಿ ಐದು ಟೆಸ್ಟ್​ ಪಂದ್ಯಗಳನ್ನು ಆಡಿದ್ದು ಎಲ್ಲರಿಗೂ ಗೊತ್ತೇ ಇದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಗೆಲುವಿನೊಂದಿಗೆ ಉತ್ತಮ ಆರಂಭ ಪಡೆದ ಟೀಮ್ ಇಂಡಿಯಾ, ಆ ನಂತರ ಅದೇ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತ ಸೋತಿತು ಮತ್ತು ನಂತರ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಡ್ರಾ ಸಾಧಿಸಿತು. ಆದರೆ, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಸೋತಿತು. ಪ್ಯಾಟ್​ ಕಮ್ಮಿನ್ಸ್ ನೇತೃತ್ವದ ಆಸಿಸ್​ ತಂಡವು ರೋಹಿತ್ ಶರ್ಮ ಪಡೆಯನ್ನು 3-1 ಅಂತರದಿಂದ ಸೋಲಿಸಿ ಹತ್ತು ವರ್ಷಗಳ ನಂತರ ಬಿಜಿಟಿಯನ್ನು ಗೆದ್ದುಕೊಂಡಿತು. ನಾಯಕ ರೋಹಿತ್ ಶರ್ಮ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ವೈಫಲ್ಯವು ಟೀಮ್ ಇಂಡಿಯಾದ ಅವಮಾನಕರ ಸೋಲಿಗೆ ಪ್ರಮುಖ ಕಾರಣವಾಯಿತು.

ಬ್ರಿಸ್ಬೇನ್ ಟೆಸ್ಟ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಅಶ್ವಿನ್, ಇತ್ತೀಚೆಗೆ ಈ ಸರಣಿಯ ಬಗ್ಗೆ ಮಾತನಾಡುತ್ತಾ ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೋಲ್ಯಾಂಡ್ ಅವರನ್ನು ಹೊಗಳಿದರು. ಪ್ಯಾಟ್ ಕಮ್ಮಿನ್ಸ್‌ಗೆ ಇದು ಉತ್ತಮ ಸರಣಿಯಾಗಿತ್ತು ಎಂದು ಹಲವರು ಹೇಳುತ್ತಾರೆ. ಆದರೆ, ವಾಸ್ತವವಾಗಿ ಕಮಿನ್ಸ್​ ಅವರು ಎಡಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ ಪರದಾಡುತ್ತಿದ್ದರು. ಆದರೆ, ಸ್ಕಾಟ್ ಬೋಲ್ಯಾಂಡ್ ತಂಡಕ್ಕೆ ಪ್ರವೇಶ ಮಾಡಿದ್ದು, ಆಸ್ಟ್ರೇಲಿಯಾಗೆ ವರದಾನವಾಯಿತು. ಈ ಸರಣಿಯಲ್ಲಿ ಬೋಲ್ಯಾಂಡ್ ಆಡದೇ ಇದ್ದಿದ್ದರೆ ಟೀಮ್ ಇಂಡಿಯಾ ಟ್ರೋಫಿಯನ್ನು ಖಂಡಿತ ಗೆಲ್ಲುತ್ತಿತ್ತು ಎಂದು ಅಶ್ವಿನ್​ ಹೇಳಿದ್ದಾರೆ.

ನಾನಿಲ್ಲಿ ಜೋಶ್ ಹ್ಯಾಸಲ್‌ವುಡ್ ಅವರ ಕೌಶಲ್ಯಗಳನ್ನು ಕಡೆಗಣಿಸುತ್ತಿಲ್ಲ. ಅವರು ಕೂಡ ಅತ್ಯುತ್ತಮ ಬೌಲರ್. ಆದರೆ, ಭಾರತದ ವಿರುದ್ಧದ ಸರಣಿಯಲ್ಲಿ ಹ್ಯಾಸ​ಲ್‌ವುಡ್ ಅವರನ್ನು ಉಳಿಸಿಕೊಂಡಿದ್ದರೆ, ಗೆಲುವು ನಮ್ಮದಾಗುತ್ತಿತ್ತು. ಆದರೆ, ಬೋಲ್ಯಾಂಡ್ ಪ್ರವೇಶ ಪಂದ್ಯದ ದಿಕ್ಕನ್ನೇ ಬದಲಿಸಿತು ಎಂದು ಅಶ್ವಿನ್ ಹೇಳಿದರು. ಅಂದಹಾಗೆ ಜೋಶ್ ಹ್ಯಾಸಲ್‌ವುಡ್ ಗಾಯದ ಕಾರಣ ಹೊರಗುಳಿದಾಗ ಅವರ ಸ್ಥಾನಕ್ಕೆ ಸ್ಕಾಟ್​ ಬೋಲ್ಯಾಂಡ್ ನಾಲ್ಕನೇ ಟೆಸ್ಟ್‌ನಿಂದ ಕಣಕ್ಕಿಳಿದರು.

ಈ ಸರಣಿಯಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ, ಬೋಲ್ಯಾಂಡ್ 16 ವಿಕೆಟ್‌ಗಳನ್ನು ಪಡೆದು ಸರಣಿಯಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆದರು. ಅವರು ಭಾರತದ ಪ್ರಮುಖ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಹಲವಾರು ಬಾರಿ ಔಟ್ ಮಾಡಿ, ಭಾರತ ತಂಡಕ್ಕೆ ಹಾನಿ ಮಾಡಿದರು. ಹೀಗಾಗಿ, ಅವರು ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟೀಮ್ ಇಂಡಿಯಾದ ವೇಗಿ ಜಸ್​​ಪ್ರೀತ್​ ಬುಮ್ರಾ 2024-25ರಲ್ಲಿ ಬಿಜಿಟಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಬುಮ್ರಾ ಅವರು ಐದು ಟೆಸ್ಟ್‌ಗಳಲ್ಲಿ ಒಟ್ಟು 32 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಸರಣಿ ಶ್ರೇಷ್ಠ ಆಟಗಾರ ಎಂಬ ಗೌರವಕ್ಕೂ ಭಾಜನರಾದರು. ಅದೇ ರೀತಿ, ಬುಮ್ರಾ ಅವರನ್ನು ಐಸಿಸಿ ಮೆನ್ಸ್​ ಪ್ಲೇಯರ್​ ಆಫ್​ ದಿ ಮಂತ್​ (ಡಿಸೆಂಬರ್) ಎಂದೂ ಹೆಸರಿಸಿದೆ. ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮ ಗೈರುಹಾಜರಾದರು. ಈ ವೇಳೆ ಬುಮ್ರಾ ತಂಡವನ್ನು ಮುನ್ನೆಡೆಸಿ ಬೃಹತ್ ಗೆಲುವನ್ನು ತಂದುಕೊಟ್ಟರು. ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯಕ್ಕೆ ರೋಹಿತ್ ಮತ್ತೆ ಗೈರುಹಾಜರಾದರು. ಈ ವೇಳೆ ಬುಮ್ರಾ ಮತ್ತೊಮ್ಮೆ ನಾಯಕತ್ವ ವಹಿಸಿಕೊಂಡರು, ಆದರೆ ಈ ಬಾರಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. (ಏಜೆನ್ಸೀಸ್​)