ಕ್ರೀಡೆ

ಚಾಂಪಿಯನ್ಸ್​ ಟ್ರೋಫಿಯ ಮೊದಲ ಪಂದ್ಯದ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಶಾಕ್​ ಕೊಟ್ಟ ಐಸಿಸಿ! ICC

ICC : ಫೆ.19ರಿಂದ ಆರಂಭವಾಗಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥೇಯ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕ್​ ಪಡೆ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋಲುಂಡಿದೆ.

ಈ ಸೋಲಿನ ಬೆನ್ನಲ್ಲೇ ಪಾಕ್​ ಸ್ಟಾರ್ ಓಪನರ್ ಫಖರ್ ಜಮಾನ್ ಗಾಯದ ಕಾರಣದಿಂದಾಗಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಇದೇ ಸಂದರ್ಭದಲ್ಲಿ ಪಾಕ್​ಗೆ ಐಸಿಸಿ ಶಾಕ್​ ನೀಡಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್​ ಮಾಡಿದ್ದಕ್ಕಾಗಿ ದಂಡ ವಿಧಿಸಿದೆ.

ಐಸಿಸಿ, ಪಾಕ್​ ತಂಡಕ್ಕೆ ಪಂದ್ಯ ಶುಲ್ಕದ ಶೇ. 5 ರಷ್ಟು ದಂಡವನ್ನು ವಿಧಿಸಿದೆ. ಮೈದಾನದಲ್ಲಿರುವ ಅಂಪೈರ್‌ಗಳಾದ ರಿಚರ್ಡ್ ಕೆಟಲ್‌ಬರೋ ಮತ್ತು ಶರ್ಫುದ್ದೌಲಾ, ಮೂರನೇ ಅಂಪೈರ್ ಜೋಯಲ್ ವಿಲ್ಸನ್ ಮತ್ತು ನಾಲ್ಕನೇ ಅಂಪೈರ್ ಅಲೆಕ್ಸ್ ವಾರ್ಫ್ ಅವರ ಮೇಲೂ ಆರೋಪ ಹೊರಿಸಲಾಗಿದ್ದು, ಪಂದ್ಯದ ರೆಫರಿ ಆಂಡಿ ಪೈಕ್ರಾಫ್ಟ್‌ಗೂ ದಂಡ ವಿಧಿಸಲಾಗಿದೆ.

ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ನಿಧಾನಗತಿಯ ಬೌಲಿಂಗ್​ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಯಾವುದೇ ಔಪಚಾರಿಕ ತನಿಖೆಯ ಅಗತ್ಯವಿರಲಿಲ್ಲ. ಐಸಿಸಿ ನೀತಿ ಸಂಹಿತೆಯ 2.22 ನೇ ವಿಧಿಯ ಪ್ರಕಾರ, ತಂಡವು ನಿಗದಿತ ಸಮಯದೊಳಗೆ ಬೌಲಿಂಗ್ ಮಾಡಲು ವಿಫಲವಾದರೆ, ಪ್ರತಿ ಓವರ್‌ಗೆ ಅವರ ಪಂದ್ಯ ಶುಲ್ಕದ ಶೇ. ಐದು ರಷ್ಟು ದಂಡ ವಿಧಿಸಲಾಗುತ್ತದೆ.

1996ರ ನಂತರ ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್ ಆಯೋಜಿಸುತ್ತಿರುವ ಪಾಕಿಸ್ತಾನ, ಮೊದಲ ಪಂದ್ಯದಲ್ಲಿ 60 ರನ್​ಗಳಿಂದ ಸೋತಿತು. ನ್ಯೂಜಿಲೆಂಡ್ ನೀಡಿದ್ದ 320 ರನ್​ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 47.2 ಓವರ್​ಗಳಲ್ಲಿ ಕೇವಲ 260 ರನ್​​ಗಳಿಗೆ ಆಲೌಟ್ ಆಯಿತು. ಈ ಮಧ್ಯೆ, ಪಾಕಿಸ್ತಾನ ತಂಡ ಭಾನುವಾರ (ಫೆಬ್ರವರಿ 23) ದುಬೈನಲ್ಲಿ ಭಾರತ ವಿರುದ್ಧ ಪಂದ್ಯ ಆಡಲಿದೆ. ಈ ಹೈವೋಲ್ಟೇಜ್​ ಪಂದ್ಯಕ್ಕಾಗಿ ಕ್ರೀಡಾಭಿಮಾನಿಗಳು ಕಾದು ಕುಳಿತಿದ್ದಾರೆ. (ಏಜೆನ್ಸೀಸ್​)