

ದುಬೈ: ವೇಗಿ ಮೊಹಮದ್ ಶಮಿ (53ಕ್ಕೆ 5) ಐದು ವಿಕೆಟ್ಗಳ ಗೊಂಚಲು ಹಾಗೂ ಉಪನಾಯಕ ಶುಭಮಾನ್ ಗಿಲ್ (101* ರನ್, 129 ಎಸೆತ, 9 ಬೌಂಡರಿ, 2 ಸಿಕ್ಸರ್) ಸಮಯೋಚಿತ ಶತಕದಾಟದ ನೆರವಿನಿಂದ ಭಾರತ ತಂಡ ಐಸಿಸಿ ಚಾಂಪಿಯನ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಬಾಂಗ್ಲಾದೇಶ ಎದುರು 6 ವಿಕೆಟ್ಗಳ ಗೆಲುವು ದಾಖಲಿಸಿ, ಶುಭಾರಂಭ ಕಂಡಿದೆ. ರೋಹಿತ್ ಶರ್ಮ ಪಡೆ ಭಾನುವಾರ ಸಾಂಪ್ರದಾಯಿಕ ಎದುರಾಳಿ ಆತಿಥೇಯ ಪಾಕಿಸ್ತಾನ ಎದುರು ತನ್ನ 2ನೇ ಲೀಗ್ ಪಂದ್ಯವನ್ನಾಡಲಿದೆ.
ದುಬೈ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಇಳಿದ ಬಾಂಗ್ಲಾ, ಶಮಿ ಹಾಗೂ ಅಕ್ಷರ್ ಪಟೇಲ್ (43ಕ್ಕೆ 2) ದಾಳಿಗೆ ತತ್ತರಿಸಿ 35 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಆಗ ತೌಹಿದ್ ಹೃದಯ್ (100 ರನ್, 118 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಜೇಕರ್ ಅಲಿ (68 ರನ್, 114 ಎಸೆತ, 4 ಬೌಂಡರಿ) ಆಸರೆಯಲ್ಲಿ 49.4 ಓವರ್ಗಳಲ್ಲಿ 228 ರನ್ಗಳ ಗೌರವಯುತ್ತ ಮೊತ್ತಕ್ಕೆ ಆಲೌಟ್ ಆಯಿತು. ಪ್ರತಿಯಾಗಿ ರೋಹಿತ್ ಶರ್ಮ (43) ಒದಗಿಸಿದ ಬಿರುಸಿನ ಆರಂಭ ಹಾಗೂ ವಿಶ್ವ ನಂ.1 ಬ್ಯಾಟರ್ ಶುಭಮಾನ್ ಗಿಲ್ ಸಾಹಸದ ನೆರವಿನಿಂದ ಭಾರತ 46.3 ಓವರ್ಗಳಲ್ಲಿ 4 ವಿಕೆಟ್ಗೆ 231 ರನ್ಗಳಿಸಿ ಇನ್ನೂ 21 ಎಸೆತ ಬಾಕಿಯಿರುವಂತೆಯೇ ಗೆಲುವು ಒಲಿಸಿಕೊಂಡಿತು.
ಜಹೀರ್ ದಾಖಲೆ ಮುರಿದ ಶಮಿ
ಸೀಮಿತ ಓವರ್ಗಳ ಐಸಿಸಿ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಮೊಹಮದ್ ಶಮಿ ಪಾತ್ರರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ಐದು ವಿಕೆಟ್ ಪಡೆದ ಬಳಿಕ ಅವರು ಈ ಸಾಧನೆ ಮಾಡಿದರು. ಐಸಿಸಿ ಟೂರ್ನಿಯ 19 ಇನಿಂಗ್ಸ್ಗಳಲ್ಲಿ ಶಮಿ ಒಟ್ಟು 60 ವಿಕೆಟ್ ಪಡೆದು ಅಗ್ರಸ್ಥಾನಕ್ಕೇರಿದರೆ, ಮಾಜಿ ವೇಗಿ ಜಹೀರ್ ಖಾನ್ 32 ಇನಿಂಗ್ಸ್ಗಳಲ್ಲಿ 59 ವಿಕೆಟ್ ಪಡೆದಿದ್ದರು. ಬಾಂಗ್ಲಾ ವಿರುದ್ಧದ ಪಂದ್ಯ 34 ವರ್ಷದ ಶಮಿಗೆ ಮೊದಲ ಚಾಂಪಿಯನ್ಸ್ ಟ್ರೋಫಿ ಪಂದ್ಯ ಎಂಬುದು ವಿಶೇಷ. ಮೂರು ಏಕದಿನ ವಿಶ್ವಕಪ್ ಆವೃತ್ತಿಗಳಲ್ಲಿ ಶಮಿ ಒಟ್ಟು 55 ವಿಕೆಟ್ ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 6 ಬಾರಿ ಐದು ವಿಕೆಟ್ ಗೊಂಚಲು ಸಂಪಾದಿಸಿರುವ ಭಾರತೀಯರ ಪಟ್ಟಿಯಲ್ಲೂ ಶಮಿ ಅಗ್ರಸ್ಥಾನದಲ್ಲಿದ್ದು, ಜಾವಗಲ್ ಶ್ರೀನಾಥ್ ಹಾಗೂ ಹರ್ಭಜನ್ ಸಿಂಗ್ (3) ನಂತರದಲ್ಲಿದ್ದಾರೆ.
200 ವಿಕೆಟ್ ಸಾಧಕ ಶಮಿ
ವೇಗಿ ಮೊಹಮದ್ ಶಮಿ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 200 ವಿಕೆಟ್ ಪಡೆದ ಭಾರತೀಯ ವೇಗಿ ಎಂಬ ದಾಖಲೆಯ ಜತೆಗೆ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ 2ನೇ ಆಟಗಾರ ಎನಿಸಿದರು. ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ 102 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ಶಮಿ 103ನೇ ಪಂದ್ಯದಲ್ಲಿ ಮೈಲಿಗಲ್ಲು ನೆಟ್ಟರು. ಎಸೆತಗಳ ಲೆಕ್ಕಾಚಾರದಲ್ಲಿ ಶಮಿ (5,126) ಅವರು ಮಿಚೆಲ್ ಸ್ಟಾರ್ಕ್ಗಿಂತ (5,240) ವೇಗವಾಗಿ ಕಬಳಿಸಿದ್ದಾರೆ. ಜೇಕರ್ ಅಲಿ ವಿಕೆಟ್ ಪಡೆಯುವ ಮೂಲಕ ಶಮಿ ಈ ಸಾಧನೆ ಮಾಡಿದರು.
4: ರೋಹಿತ್ ಶರ್ಮ(261 ಇನಿಂಗ್ಸ್) ಏಕದಿನ ಕ್ರಿಕೆಟ್ನಲ್ಲಿ 11 ಸಾವಿರ ರನ್ ಪೂರೈಸಿದ 4ನೇ ಭಾರತೀಯ ಬ್ಯಾಟರ್ ಮತ್ತು ವೇಗವಾಗಿ ಈ ಸಾಧನೆ ಮಾಡಿದ 2ನೇ ಭಾರತೀಯ ಎನಿಸಿದರು. ಕೊಹ್ಲಿ (222 ಇನಿಂಗ್ಸ್) ಮೊದಲ ಸಾಧಕ. ತೆಂಡುಲ್ಕರ್ (18,426), ಕೊಹ್ಲಿ (13.963*), ಗಂಗೂಲಿ (11,221) ಮೊದಲ ಮೂರು ಸ್ಥಾನದಲ್ಲಿದ್ದಾರೆ.
3.ವಿರಾಟ್ ಕೊಹ್ಲಿ (156) ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ಕ್ಯಾಚ್ ಪಡೆದ (ವಿಕೆಟ್ ಕೀಪರ್ ಹೊರತುಪಡಿಸಿ) ಆಟಗಾರರ ಪಟ್ಟಿಯಲ್ಲಿ ಮೊ.ಅಜರುದ್ದೀನ್ ದಾಖಲೆ ಸರಿಗಟ್ಟಿದರು. ಮಹೇಲಾ ಜಯವರ್ಧನೆ (218), ರಿಕಿ ಪಾಂಟಿಂಗ್ (160) ಮೊದಲಿಬ್ಬರು.
1. ಮೊಹಮದ್ ಶಮಿ ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಎರಡೂ ಐಸಿಸಿ ಟೂರ್ನಿಗಳಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಮೊದಲ ಭಾರತೀಯ ವೇಗಿ.