ನವದೆಹಲಿ: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ 18ನೇ ಆವೃತ್ತಿಯ ಐಪಿಎಲ್ (IPL) ಆರಂಭವಾಗುವುದಕ್ಕೆ ದಿನಗಣನೆ ಆರಂಭವಾಗಿದ್ದು, ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಈ ಬಾರಿಯ ಟೂರ್ನಿಗೆ ಸಂಬಂಧಿಸಿದಂತೆ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡವನ್ನು ಕಟ್ಟುವ ಮೂಲಕ ಆರ್ಸಿಬಿ ಫ್ರಾಂಚೈಸಿಯು ಅಭಿಮಾನಿಗಳ ಬಹುವರ್ಷದ ಕನಸನ್ನು ಸಾಕಾರಗೊಳಿಸುವ ಮುನ್ಸೂಚನೆಯನ್ನು ನೀಡಿದೆ.
17ನೇ ಆವೃತ್ತಿಯಲ್ಲಿ ಸತತ ಸೋಲಿನ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿದ್ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಿತ್ತು. ನಾಕೌಟ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಆರ್ಸಿಬಿ ತಂಡವು ಪ್ಲೇಆಫ್ನಲ್ಲಿ ರಾಜಸ್ಥಾನದ ವಿರುದ್ಧ ಎಡವಿತ್ತು. ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಾಜಿ ಆಟಗಾರ ಅಂಬಾಟಿ ರಾಯುಡು ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಆರ್ಸಿಬಿ ಕಪ್ ಗೆಲ್ಲಿದಿರಲೆಂದು ಪ್ರಾರ್ಥಿಸುವುದಾಗಿ ಹೇಳುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪಾಡ್ಕಾಸ್ಟ್ ಒಂದರಲ್ಲಿ ಈ ಕುರಿತಾಗಿ ಮಾತನಾಡಿರುವ ರಾಯುಡು, ಆರ್ಸಿಬಿ ತಂಡವು ಮುಂದೊಂದು ದಿನ ಕಪ್ ಗೆಲ್ಲಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ಈ ವರ್ಷ ಅವರು ಕಪ್ ಗೆಲ್ಲದಿರಲಿ ಎಂದು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಏಕೆಂದರೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಬೇಕು. ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಆಗಬಹುದು. ಹೀಗಾಗಿ ನಾನು ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಆಶಿಸುತ್ತೇನೆ.
ಈ ಹಿಂದೆ ಆರ್ಸಿಬಿ ತಂಡದ ಪ್ರದರ್ಶನ ಹಾಗೂ ವಿರಾಟ್ ಕೊಹ್ಲಿ ಕುರಿತು ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಅಂಬಾಟಿ ರಾಯುಡು ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಯ ಮೂಲಕ ಮುನ್ನೆಲೆಗೆ ಬಂದಿದ್ದು, ಆರ್ಸಿಬಿ ಕಪ್ ಗೆಲ್ಲದಿರಲಿ ಎಂದು ಪ್ರಾರ್ಥಿಸುವುದಾಗಿ ಅಂಬಾಟಿ ರಾಯುಡು ಬಹಿರಂಗವಾಗಿ ಹೇಳಿರುವುದು ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.