ನವದೆಹಲಿ: ಉತ್ತಮ ನಿರೀಕ್ಷೆಯೊಂದಿಗೆ ಐಪಿಎಲ್-2024 ಅಭಿಯಾನ ಆರಂಭಿಸಿದ ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲೇ ಸೋಲುಂಡಿತು. ಆದರೆ, ಚೇತರಿಸಿಕೊಂಡು ಎರಡನೇ ಪಂದ್ಯ ಗೆದ್ದು ಭರವಸೆ ಮೂಡಿಸಿತು. ಆದರೆ, ಡುಪ್ಲೆಸಿಸ್ ಪಡೆ ಸತತ 6 ಪಂದ್ಯಗಳಲ್ಲಿ ಸೋಲುವ ಮೂಲಕ ಒಂದು ಹಂತದಲ್ಲಿ ಟ್ರೋಫಿ ಗೆಲ್ಲುವ ಆಸೆಯನ್ನೇ ಕೈ ಚೆಲ್ಲಿತ್ತು. ಆದರೆ, ಪವಾಡವೆಂಬಂತೆ ಲೀಗ್‌ನ ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡ ಆರ್‌ಸಿಬಿ ಸತತ 5 ಗೆಲುವಿನೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿ ಇರಿಸಿಕೊಂಡಿದೆ. ಆದರೆ, ಪ್ಲೇ ಆಫ್ಗೆ ಆರ್‌ಸಿಬಿ ಅರ್ಹತೆ ಗಿಟ್ಟಿಸಿಕೊಳ್ಳಲು ಒಂದು ದೊಡ್ಡ ಸವಾಲನ್ನು ಮೆಟ್ಟಿ ನಿಲ್ಲಬೇಕಿದೆ. ಆ ಸವಾಲೇ ಚೆನ್ನೈ ಸೂಪರ್ ಕಿಂಗ್ಸ್.
ಮೇ 18ರಂದು ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 68ನೇ ಪಂದ್ಯದಲ್ಲಿ ಆರ್‌ಸಿಬಿ, ಸಿಎಸ್ಕೆ ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಕೇವಲ ಗೆದ್ದರೆ ಸಾಲದು, ದಾಖಲೆಯ ಗೆಲುವು ಬೇಕಿದೆ. ಇದಲ್ಲದೆ, ಉತ್ತಮ ಆಟದ ಜತೆಗೆ ಅದೃಷ್ಟವೂ ಕೈಹಿಡಿಯಬೇಕಿದೆ. ಏಕೆಂದರೆ, ಮಳೆಯಿಂದ ಪಂದ್ಯ ರದ್ದಾದರೆ ಆರ್‌ಸಿಬಿ ಟೂರ್ನಿಯಿಂದ ಹೊರಬೀಳಲಿದೆ.
ಆರ್‌ಸಿಬಿ ಪ್ಲೇಆಫ್ಗಾಗಿ ಸಿಎಸ್ಕೆ ವಿರುದ್ಧ ಏನು ಮಾಡಬೇಕೆಂದರೆ, ಮೊದಲು ಬ್ಯಾಟ್ ಮಾಡಿದರೆ 18 ರನ್ ಅಂತರದಲ್ಲಿ ಗೆಲ್ಲಬೇಕು ಅಥವಾ ಚೇಸಿಂಗ್ ಮಾಡಿದರೆ 18.1 ಓವರ್ಗಳಲ್ಲಿ ಟಾರ್ಗೆಟ್ ತಲುಪಬೇಕು. ಉದಾಹರಣೆಗೆ ಆರ್‌ಸಿಬಿ ಮೊದಲು ಬ್ಯಾಟಿಂಗ್ಗೆ ಇಳಿದು 200 ರನ್ ಗಳಿಸಿದರೆ ಕನಿಷ್ಠ 18 ರನ್ಗಳಿಂದಾದರೂ ಗೆಲ್ಲಬೇಕು. ಒಂದು ವೇಳೆ ಸಿಎಸ್ಕೆ ಮೊದಲು ಬ್ಯಾಟಿಂಗ್ಗೆ ಇಳಿದು 200 ರನ್ ಪೇರಿಸಿದರೆ, ಆರ್‌ಸಿಬಿ 18.1 ಓವರ್ಗಳಲ್ಲಿ ಅಂದರೆ ಕನಿಷ್ಠ 11 ಎಸೆತ ಬಾಕಿ ಇರುವಂತೆಯೇ ಗೆಲ್ಲಬೇಕಾಗುತ್ತದೆ. ಹೀಗಾದಲ್ಲಿ ಮಾತ್ರ ಆರ್‌ಸಿಬಿ ಅಂಕಪಟ್ಟಿಯಲ್ಲಿ ಸಿಎಸ್ಕೆಯನ್ನು ಹಿಂದಕ್ಕೆ ದೂಡಬಲ್ಲದು. ಈಗಾಗಲೇ 13 ಪಂದ್ಯಗಳನ್ನು ಆಡಿರುವ ಸಿಎಸ್ಕೆ 7 ಗೆಲುವಿನೊಂದಿಗೆ ಪ್ರಸ್ತುತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ 13 ಪಂದ್ಯಗಳಲ್ಲಿ 6 ಗೆಲುವುಗಳನ್ನು ಹೊಂದಿದೆ. ಸಿಎಸ್ಕೆ 0.528 ನೆಟ್ ರನ್ ರೇಟ್ ಹೊಂದಿದೆ, ಆದರೆ ಆರ್‌ಸಿಬಿ 0.387 ನೆಟ್ ರನ್ ರೇಟ್ ಇದೆ.
ಆರ್‌ಸಿಬಿ ಪಾಲಿಗೆ ಈಗ 18 ಅದೃಷ್ಟದ ಸಂಖ್ಯೆ ಆಗಬೇಕಿದೆ! ಯಾಕೆಂದರೆ ಮೇ 18ರಂದು ಬೆಂಗಳೂರಿನಲ್ಲಿ ಸಿಎಸ್ಕೆ ವಿರುದ್ಧ ನಡೆಯಲಿರುವ ಕಡೇ ಲೀಗ್ ಪಂದ್ಯ ಆರ್‌ಸಿಬಿ ಪಾಲಿಗೆ ನಿರ್ಣಾಯಕ. ಈ ಪಂದ್ಯದಲ್ಲಿ 18 ಜೆರ್ಸಿ ನಂಬರ್ ಆಟಗಾರ ವಿರಾಟ್ ಕೊಹ್ಲಿ ಸಿಡಿದರೆ ಮತ್ತು 18 ರನ್ಗಳಿಂದ ಗೆದ್ದರೆ ಆರ್ಸಿಬಿಗೆ ಪ್ಲೇಆಫ್ ಅವಕಾಶ ಒಲಿಯಲಿದೆ.
ಪ್ಲೇಆಫ್ ರೇಸ್‌ನಲ್ಲಿ ಮತ್ತೊಂದು ಮಹತ್ವದ ಸ್ಪರ್ಧಿ ಅಂದರೆ ಅದು ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ. ಎಸ್‌ಆರ್‌ಎಚ್ ಐಪಿಎಲ್‌ನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿದೆ. ಉಳಿದ 2 ಪಂದ್ಯಗಳನ್ನು ಗೆದ್ದರೆ ಸುಲಭವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ. ಆದಾಗ್ಯೂ, ಎಸ್‌ಆರ್‌ಎಚ್ ಎರಡೂ ಪಂದ್ಯಗಳನ್ನು ಕಳೆದುಕೊಂಡರೆ ಆರ್‌ಸಿಬಿ, ಸಿಎಸ್ಕೆ ವಿರುದ್ಧ ಕಡಿಮೆ ಅಂತರದಲ್ಲಿ ಸೋತರೂ, ಪ್ಲೇಆಫ್‌ಗೆ ಅರ್ಹತೆ ಪಡೆಯುವ ಅವಕಾಶ ಇರುತ್ತದೆ. ಆದರೆ, ಎಸ್‌ಆರ್‌ಎಚ್ ಉಳಿದ ಎರಡರಲ್ಲಿ ಒಂದು ಪಂದ್ಯವನ್ನು ಗೆದ್ದರೆ, ಆರ್‌ಸಿಬಿ ಪಾಲಿಗೆ ನೆಟ್ ರನ್ ರೇಟ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಎಸ್‌ಆರ್‌ಎಚ್ ಪ್ರಸ್ತುತ 0.406 ನೆಟ್ ರನ್ರೇಟ್ ಹೊಂದಿದೆ.
ಲಖನೌ ಸೂಪರ್ ಜೈಂಟ್ಸ್ (LSG) ಗೆ ಎರಡು ಪಂದ್ಯಗಳು ಉಳಿದಿದ್ದು, ಎರಡನ್ನೂ ಗೆದ್ದರೆ ಅದು ಪ್ಲೇಆಫ್‌ಗೆ ಪ್ರವೇಶಿಸುವ ಸಾಧ್ಯತೆಯನ್ನು ಹೆಚ್ಚಿದೆ. ಆದಾಗ್ಯೂ ಎಸ್‌ಆರ್‌ಎಚ್ ವಿರುದ್ಧ ಇತ್ತೀಚಿನ ಪಂದ್ಯದಲ್ಲಿ ಭಾರಿ ಅಂತರದಲ್ಲಿ ಸೋತ ನಂತರ LSG ಯ ನೆಟ್ ರನ್ ರೇಟ್ ತುಂಬಾ ಕಡಿಮೆಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ (DC) ಕೂಡ ಇದೇ ರೀತಿಯ ಪರಿಸ್ಥಿತಿ ಎದುರಿಸುತ್ತಿದೆ. 13 ಪಂದ್ಯಗಳಲ್ಲಿ ಆರು ಗೆಲುವುಗಳನ್ನು ಹೊಂದಿದ್ದರೂ, ಇತರ ಪ್ಲೇಆಫ್ ಸ್ಪರ್ಧಿಗಳಿಗೆ ಹೋಲಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ನೆಟ್ ರನ್ ರೇಟ್ ಗಣನೀಯವಾಗಿ ಕಡಿಮೆಯಾಗಿದೆ. (ಏಜೆನ್ಸೀಸ್)