Abhishek Sharma: ಫೆ.02ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕೊನೆಯ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಮಾಡಿದ ಮೋಡಿ, ದಾಖಲಿಸಿದ ಶತಕಕ್ಕೆ ಇಡೀ ಭಾರತವೇ ಅವರನ್ನು ಕೊಂಡಾಡಿತು. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಭಾರತೀಯ ಆಟಗಾರನೊಬ್ಬ ಅತೀ ಹೆಚ್ಚು ರನ್ ದಾಖಲಿಸುವ ಮೂಲಕ ತನ್ನದೇ ಹೊಸ ದಾಖಲೆಯನ್ನು ಬರೆದಿರುವುದು ಸದ್ಯ ಕ್ರಿಕೆಟ್ ಪ್ರಿಯರ ಗುಣಗಾನಕ್ಕೆ ಹಾಗೂ ಅಭಿಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೃತಕ ಬುದ್ಧಿಮತ್ತೆಗೆ ಚೌಕಟ್ಟು; ವಿಶ್ವಾಸ, ಪಾರದರ್ಶಕತೆ ಹೆಚ್ಚಳಕ್ಕೆ ಸಹಕಾರ, ಎಐ ಶೃಂಗಸಭೆಯಲ್ಲಿ ಮೋದಿ ಪ್ರತಿಪಾದನೆ
ಮುಂಬೈ ಅಂಗಳದಲ್ಲಿ ಇಂಗ್ಲೆಂಡ್ ಬೌಲರ್‌ಗಳಿಗೆ ದುಃಸ್ವಪ್ನದಂತೆ ಕಾಡಿದ ಯುವ ಬ್ಯಾಟರ್, ಕೇವಲ 54 ಎಸೆತಗಳಲ್ಲಿ 7 ಬೌಂಡರಿ ಮತ್ತು 13 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಬರೋಬ್ಬರಿ 135 ರನ್ ದಾಖಲಿಸಿದರು. ಇದು ಹಿಂದಿನ ದಿಗ್ಗಜ ಬ್ಯಾಟರ್ಗಳ ದಾಖಲೆಯನ್ನೇ ಮುರಿದು ಅಭಿಷೇಕ್ ಹೆಸರಿನಲ್ಲಿ ಹೊಸ ದಾಖಲೆಯನ್ನು ನಿರ್ಮಿಸುವಂತೆ ಮಾಡಿತು. ಪ್ರಸ್ತುತ, ಶರ್ಮ ಕುರಿತು ಜಾಲತಾಣಗಳಲ್ಲಿ ನೆಟ್ಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಭರವಸೆ, ಪ್ರಶಂಸೆಯ ಮಾತುಗಳು ವ್ಯಕ್ತವಾಗುತ್ತಿದ್ದು, ಭವಿಷ್ಯ ಆಟಗಾರನ ಬಗ್ಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿವೆ.
2024ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ಶರ್ಮ, ಇಲ್ಲಿಯವರೆಗೆ 17 ಪಂದ್ಯಗಳನ್ನಾಡಿದ್ದಾರೆ. 16 ಇನ್ನಿಂಗ್ಸ್‌ಗಳಲ್ಲಿ 33.4 ಸರಾಸರಿ ಮತ್ತು 193.8 ಸ್ಟ್ರೈಕ್ ರೇಟ್‌ನಲ್ಲಿ 535 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕಗಳು ಸೇರಿವೆ. ಮಿಂಚಿನ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡುತ್ತಿರುವ ಅಭಿಷೇಕ್, ಮುಂಬೈನಲ್ಲಿ ಆಡಿದ ಸ್ಫೋಟಕ ಇನ್ನಿಂಗ್ಸ್ ಮೂಲಕ ಇದೀಗ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಬಹುತೇಕ ಖಚಿತ ಪಡಿಸಿಕೊಂಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಶರ್ಮ ಆಡುವುದು ಬಹುತೇಕ ಖಚಿತ ಎಂದೇ ಕ್ರೀಡಾ ಪಂಡಿತರು ಅಭಿಪ್ರಾಯಿಸಿದ್ದಾರೆ.
ಐಪಿಎಲ್‌ನಲ್ಲಿ ಕಾವ್ಯಾ ಮಾರನ್ ಮಾಲೀತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಅಭಿಷೇಕ್ ಶರ್ಮ. 2019ರಿಂದ ಎಸ್‌ಆರ್‌ಹೆಚ್ ಪರ ಆಡುತ್ತಿರುವುದು ಗಮನಾರ್ಹ. ಕಳೆದ ಮೂರು ಸೀಸನ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 2025ಕ್ಕಿಂತ ಮೊದಲು ನಡೆದ ಮೆಗಾ ಹರಾಜಿನಲ್ಲಿ ಅಭಿಷೇಕ್ರನ್ನು ಹರಾಜಿಗೆ ತರದ ಕಾವ್ಯಾ ಮಾರನ್, ಅವರನ್ನು 14 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಂಡರು. ಈ ಹಿಂದೆ ಅಭಿಷೇಕ್ಗೆ 6.5 ಕೋಟಿ ರೂ. ಸಂಭಾವನೆ ಕೊಡಲಾಗಿತ್ತು. ಆದರೆ, ಈ ಬಾರಿ ಅದು ದುಪ್ಪಟ್ಟಾಗಿದೆ. ಸಂಭಾವನೆ ಜತೆಗೆ ಅವರ ಮೇಲಿನ ನಿರೀಕ್ಷೆಗಳೂ ಈಗ ದುಪ್ಪಟ್ಟಾಗಿದೆ.
ಒಟ್ಟಾರೆ ಶತಕದಾಟ ಮತ್ತು ಸಿಕ್ಸರ್ಗಳ ಅಬ್ಬರವನ್ನು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ತೋರಿದ ಅಭಿಷೇಕ್ ಶರ್ಮ ಮೇಲೆ ಭರವಸೆ, ನಿರೀಕ್ಷೆಗಳು ಹೆಚ್ಚಾಗಿದ್ದು. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಅಭಿಷೇಕ್ ಸ್ಫೋಟಕ ಬ್ಯಾಟಿಂಗ್ ಮಾಡಲಿದ್ದಾರಾ? ಐಪಿಎಲ್ನ ಸ್ಟಾರ್ ಬ್ಯಾಟರ್ಗಳ ದಾಖಲೆ ಮುರಿಯಲಿದ್ದಾರಾ ಎಂಬುದನ್ನು ಮಾ.21ರಿಂದ ಆರಂಭವಾಗಲಿರುವ ಐಪಿಎಲ್ 18ನೇ ಆವೃತ್ತಿಗಾಗಿ ಕಾಯಬೇಕಿದೆ,(ಏಜೆನ್ಸೀಸ್).