ಕ್ರೀಡೆ

ಸೆಮಿಫೈನಲ್​ನಲ್ಲಿ ಭಾರತಕ್ಕೆ ಜರ್ಮನಿ ಆಘಾತ; ಇನ್ನೂ ಇದೆ ಪದಕ ಗೆಲ್ಲುವ ಚಾನ್ಸ್​

ಪ್ಯಾರಿಸ್​: ಪ್ರೇಮ ನಗರಿ ಪ್ಯಾರಿಸ್​ ಆತಿಥ್ಯದಲ್ಲಿ ನಡೆಯುತ್ತಿರುವ 33ನೇ ಆವೃತ್ತಿಯ ಒಲಿಂಪಿಕ್​ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವು ಜರ್ಮನಿ ಎದುರು ಸೋತಿದ್ದು, 44 ವರ್ಷಗಳ ನಂತರ ಫೈನಲ್‌ ಪ್ರವೇಶಿಸುವ ಕನಸು, ಕನಸಾಗಿಯೇ ಉಳಿಯಿತು.

ಮಂಗಳವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಜರ್ಮನಿ ಸವಾಲು ಸ್ವೀಕರಿಸಿದ ಭಾರತ ತಂಡವು  2–3 ಗೋಲುಗಳಿಂದ ಸೋಲೊಪ್ಪಿಕೊಂಡಿತು. ಕ್ವಾರ್ಟರ್‌ಫೈನಲ್‌ನಲ್ಲಿ ಬ್ರಿಟನ್ ಎದುರು ಹೋರಾಡಿ ಗೆದ್ದಿದ್ದ ಭಾರತ ತಂಡವು ಇಲ್ಲಿಯೂ ಉತ್ತಮ ಆರಂಭ ಪಡೆಯಿತು. ಏಳನೇ ನಿಮಿಷದಲ್ಲಿ ಹರ್ಮನ್‌ ಗೋಲು ಹೊಡೆದು 1–0 ಮುನ್ನಡೆ ಒದಗಿಸಿದರು. 

ನಾಲ್ಕರ ಘಟ್ಟದ ರೋಚಕ ಹಣಾಹಣಿಯಿಲ್ಲಿ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ (7ನೇ ನಿಮಿಷ) ಹಾಗೂ ಸುಖಜೀತ್ ಸಿಂಗ್ (36ನೇ ನಿ) ಗೋಲು ಗಳಿಸಿದರು. ಜರ್ಮನಿಯ ಗೋಂಜಾಲೊ ಪೀಲತ್ (18ನಿ), ಕ್ರಿಸ್ಟೋಫರ್ ರೂರ್ (27ನೇ ನಿ) ಮತ್ತು ಮಾರ್ಕೊ ಮಿಲ್ಕಾವು (54ನಿ) ಗೋಲು ಹೊಡೆದರು. 9 ನಿಮಿಷಗಳ ನಂತರ ಕ್ರಿಸ್ಟೋಫರ್ ಗೋಲು ಹೊಡೆದು ಜರ್ಮನಿಗೆ 2–1 ರ ಮುನ್ನಡೆ ನೀಡಿದರು. ನಂತರದ ಹತ್ತು ನಿಮಿಷ ಉಭಯ ತಂಡಗಳಲ್ಲಿ ಪೈಪೋಟಿ ಮುಗಿಲು ಮುಟ್ಟಿತು. 

ಪಂದ್ಯದ 54ನೇ ನಿಮಿಷದಲ್ಲಿ ಮಾರ್ಕೊ ಕೈಚಳಕ ಜರ್ಮನಿಗೆ ಮುನ್ನಡೆ ಗಳಿಸಿಕೊಟ್ಟರು. ಕೊನೆಯವರೆಗೂ ಈ  ಅಂತರ ಕಾಪಾಡಿಕೊಂಡ ಜರ್ಮನಿ ಭಾರತದ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿತು. ಭಾರತ ತಂಡವು ಗುರುವಾರ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಸ್ಪೇನ್ ತಂಡದ ಸವಾಲನ್ನು ಎದುರಿಸಲಿದೆ.