ನವದೆಹಲಿ: ಭಾರತ ಪುರುಷರ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಸೇರಿದಂತೆ ಇತರ ನಾಲ್ವರಿಗೆ ಕೋವಿಡ್-19ರ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಆವರಣದಲ್ಲಿ ಆರಂಭಗೊಳ್ಳಲಿರುವ ರಾಷ್ಟ್ರೀಯ ತರಬೇತಿ ಶಿಬಿರದ ಹಿನ್ನೆಲೆಯಲ್ಲಿ ಆಟಗಾರರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಮನ್ಪ್ರೀತ್ ಸಿಂಗ್ ಅಲ್ಲದೆ, ಡಿಫೆಂಡರ್ ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ಡ್ರ್ಯಾಗ್ ಫ್ಲಿಕರ್ ವರುಣ್ ಕುಮಾರ್ ಕೋವಿಡ್ ಹಾಗೂ ಗೋಲ್ ಕೀಪರ್ ಕೃಷ್ಣನ್ ಬಹದೂರ್ ಪಾಠಕ್ ವರದಿ ಪಾಸಿಟಿವ್ ಬಂದಿದೆ. ಆಗಸ್ಟ್ 4 ರಿಂದ ಸೆಪ್ಟೆಂಬರ್ 19 ರವರೆಗೆ ಸಾಯ್ ಕೇಂದ್ರದಲ್ಲಿ ಟೋಕಿಯೊ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಶಿಬಿರ ಆರಂಭಕ್ಕೂ ಮುನ್ನ ಎಲ್ಲ ಆಟಗಾರರನ್ನು ಕೋವಿಡ್-19ರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪಾಸಿಟಿವ್ ಕಾಣಿಸಿಕೊಂಡಿರುವ ಆಟಗಾರರನ್ನು ಕ್ಯಾಂಪಸ್ನಲ್ಲೆ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಸಾಯ್ ಕ್ಯಾಂಪಸ್ನಲ್ಲೇ ಸ್ವಯಂ ಕ್ವಾರಂಟೈನ್ ಗೆ ಒಳಗಾಗಲಿದ್ದೇನೆ, ಇಂಥ ಪರಿಸ್ಥಿತಿಯನ್ನು ನಿಭಾಯಿಸಿದ ಸಾಯ್ ಪ್ರಾಧಿಕಾರಕ್ಕೆ ಧನ್ಯವಾದ ಹೇಳುತ್ತೇನೆ. ನಾನು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದು, ಬೇಗ ಹುಷಾರಾಗಲಿದ್ದೇನೆ ಎಂದು ಮನ್ಪ್ರೀತ್ ಸಿಂಗ್ ಸಾಯ್ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 19 ರಿಂದ ಜುಲೈ 19ರವರೆಗೆ ವಿಶ್ರಾಂತಿ ಬಳಿಕ ಆಟಗಾರರು ಸಾಯ್ ಕೇಂದ್ರಕ್ಕೆ ವಾಪಸಾಗಿದ್ದರು. ಇದಕ್ಕೂ ಮೊದಲು ದಿಢೀರ್ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಸಾಯ್ ಕೇಂದ್ರದಲ್ಲೇ 2 ತಿಂಗಳ ಕಾಲ ಲಾಕ್ಆಗಿದ್ದವು.