ಕ್ರೀಡೆ

ಚಾಂಪಿಯನ್ಸ್​ ಟ್ರೋಫಿಗೆ ಜಡೇಜಾ ಆಯ್ಕೆ ವೇಸ್ಟ್​! ಆತನಿದ್ದಿದ್ದರೆ ಚೆನ್ನಾಗಿರ್ತಿತ್ತು ಅಂದ್ರು ಆಕಾಶ್​ ಚೋಪ್ರಾ | Ravindra Jadeja

Ravindra Jadeja : ಚಾಂಪಿಯನ್ಸ್ ಟ್ರೋಫಿಗೆ ಬಿಸಿಸಿಐ ಪ್ರಕಟಿಸಿರುವ ತಂಡದ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ತಂಡದಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅನುಪಸ್ಥಿತಿಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿರಾಜ್​ ಕೈಬಿಟ್ಟು ಆ ಸ್ಥಾನಕ್ಕೆ ಯುವ ವೇಗಿ ಅರ್ಷದೀಪ್​ ಸಿಂಗ್​ಗೆ ಬಿಸಿಸಿಐ ಆಯ್ಕೆ ಸಮಿತಿ ಅವಕಾಶ ನೀಡಿದೆ.

ಅಂದಹಾಗೆ ಸಿರಾಜ್​ ಅವರನ್ನು ಕೈಬಿಟ್ಟಿರುವ ನಿರ್ಧಾರವನ್ನು ಅನೇಕ ಮಾಜಿ ಕ್ರಿಕೆಟಿಗರು ಟೀಕಿಸುತ್ತಿದ್ದಾರೆ. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ. ರವೀಂದ್ರ ಜಡೇಜಾ ಸ್ಥಾನದಲ್ಲಿ ಸಿರಾಜ್‌ಗೆ ಅವಕಾಶ ನೀಡಿದ್ದರೆ ತಂಡದ ಬೌಲಿಂಗ್ ಘಟಕವು ಇನ್ನಷ್ಟು ಬಲಿಷ್ಠವಾಗಿರುತ್ತಿತ್ತು ಎಂದು ಚೋಪ್ರಾ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ ಭಾರತ ತಂಡದಲ್ಲಿ ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಒಳಗೊಂಡ ಬಲವಾದ ವೇಗದ ಬೌಲಿಂಗ್ ದಾಳಿಯನ್ನು ಹೊಂದಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಏಕದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸಿರಾಜ್ ಅವರನ್ನು ತಂಡದಿಂದ ಹೊರಗಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ಇದೀಗ ಚರ್ಚೆಯ ವಿಷಯವಾಗಿದೆ. ಕಳೆದ 43 ಏಕದಿನ ಇನ್ನಿಂಗ್ಸ್‌ಗಳಲ್ಲಿ ಮೊಹಮ್ಮದ್ ಸಿರಾಜ್ ಅವರು 71 ವಿಕೆಟ್‌ಗಳನ್ನು ಪಡೆದಿದ್ದಾರೆ. 5.18ರ ಎಕಾನಮಿಯಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಸಿರಾಜ್ ಅವರು ಕೆಲವು ವರ್ಷಗಳ ಕಾಲ ನಂ. 1 ಏಕದಿನ ಬೌಲರ್ ಆಗಿಯೂ ಉಳಿದಿದ್ದರು.

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದಲ್ಲಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡಬೇಕಿತ್ತು. ಆಯ್ಕೆದಾರರು ತಂಡದಲ್ಲಿ ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಎಂಬ ಮೂವರು ಎಡಗೈ ಸ್ಪಿನ್ನರ್‌ಗಳನ್ನು ಹೊಂದಿದ್ದರು. ಅವರಲ್ಲಿ ಒಬ್ಬರನ್ನು ಕೈಬಿಡಬೇಕಿತ್ತು. ನನ್ನ ಮಟ್ಟಿಗೆ ಹೇಳುವುದಾದರೆ, ರವೀಂದ್ರ ಜಡೇಜಾ ಬದಲಿಗೆ ಸಿರಾಜ್ ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ.

ಸಿರಾಜ್ ತಂಡದಲ್ಲಿದ್ದಿದ್ದರೆ, ಅವರು ಹೊಸ ಚೆಂಡಿನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರು. ನಿಜ ಹೇಳಬೇಕೆಂದರೆ, ಜಡೇಜಾ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಕೂಡ ಕಡಿಮೆ. ಅವರನ್ನು ಹಾಗೆ ಆಯ್ಕೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಿರಾಜ್ ಅವರನ್ನು ಸೇರಿಸಿದ್ದರೆ, ಅವರು ಎಕ್ಸ್-ಫ್ಯಾಕ್ಟರ್ ಆಗುತ್ತಿದ್ದರು ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಭಾರತ ತಂಡ ಹೀಗಿದೆ…

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ.

ಅಂದಹಾಗೆ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆತಿಥ್ಯ ವಹಿಸಲಿದೆ. ರಾಜಕೀಯ ಸಮಸ್ಯೆಗಳಿಂದಾಗಿ, ಟೀಮ್ ಇಂಡಿಯಾ ತನ್ನ ಎಲ್ಲ ಪಂದ್ಯಗಳನ್ನು ಯುಎಇಯಲ್ಲಿ ಆಡಲಿದೆ. ಇದರೊಂದಿಗೆ ಒಂದು ಸೆಮಿಫೈನಲ್ ಪಂದ್ಯವನ್ನು ಕೂಡ ಯುಎಇಯಲ್ಲಿಯೇ ನಡೆಸಲಾಗುತ್ತದೆ. ಆದರೆ, ಫೈನಲ್​ ಪಂದ್ಯಕ್ಕೆ ಇನ್ನೂ ಸ್ಥಳ ಅಂತಿಮಗೊಂಡಿಲ್ಲ. ಭಾರತ ಫೈನಲ್​ಗೆ ಪ್ರವೇಶಿಸಿದರೆ, ಆ ಪಂದ್ಯವನ್ನು ಯುಎಇಯಲ್ಲಿ ನಡೆಸಲಾಗುತ್ತದೆ. ಭಾರತ ಬಿಟ್ಟು ಬೇರೆ ಯಾವುದೇ ತಂಡಗಳು ಫೈನಲ್ ತಲುಪಿದರೆ, ಪಾಕಿಸ್ತಾನದಲ್ಲೇ ಆ ಪಂದ್ಯ ನಡೆಯಲಿದೆ. (ಏಜೆನ್ಸೀಸ್​)