ಕ್ರೀಡೆ

ಈತ 'ಕ್ಯಾಪ್ಟನ್ ಕೂಲ್​' ಇದ್ದಂತೆ! ಐಪಿಎಲ್​ ಪಂದ್ಯದಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಮಿಂಚಿಂಗ್​ | IPL 2025

IPL 2025: ಐಪಿಎಲ್​ 18ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ತನ್ನ ಮೊದಲ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್, ಲೀಗ್​ನಲ್ಲಿ ಉತ್ತಮ ಆರಂಭವನ್ನೇ ಕಂಡಿದೆ. ಮಂಗಳವಾರ (ಮಾರ್ಚ್​ 25) ರಾತ್ರಿ ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 11 ರನ್‌ಗಳಿಂದ ಶ್ರೇಯಸ್​​ ಅಯ್ಯರ್​ ಪಡೆ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ, ನಾಯಕನಾಟ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್, ಕೆಲವೇ ಕೆಲವು ರನ್​ಗಳಿಂದ ಶತಕ ವಂಚಿತರಾದರು. ಇದು ಅವರ ಅಭಿಮಾನಿಗಳಲ್ಲಿ ತೀರ ಬೇಸರ ಮೂಡಿಸಿತು.

ಆಡಿದ 42 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಹಾಯದಿಂದ 97 ರನ್ ಗಳಿಸಿ ಅಜೇಯರಾಗಿ ಉಳಿದ ಶ್ರೇಯಸ್ ಅಯ್ಯರ್​​​, ತಂಡಕ್ಕೆ ನೀಡಿದ ಕೊಡುಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಕುರಿತು ಮಾಜಿ ಕ್ರಿಕೆಟಿಗರು ಅಯ್ಯರ್​ ಪ್ರದರ್ಶನವನ್ನು ಹಾಡಿ ಹೊಗಳಿದರು. ಈ ಪೈಕಿ ಟೀಮ್ ಇಂಡಿಯಾ ಮಾಜಿ ಹಿರಿಯ ಆಟಗಾರ ನವಜೋತ್ ಸಿಂಗ್ ಪ್ರತಿಕ್ರಿಯಿಸಿ, ಈತ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರನ್ನೇ ಹೋಲುತ್ತಾನೆ ಎಂದಿದ್ದಾರೆ.

"ಶ್ರೇಯಸ್ ಅಯ್ಯರ್ ಥೇಟ್ ಧೋನಿ ಅವರಂತೆ. ತಮ್ಮ ತಂಡ ಗೆದ್ದಾಗ ಧೋನಿ ಟ್ರೋಫಿಯನ್ನು ತಾವು ಹಿಡಿದು ಸಂಭ್ರಮಿಸದೆ, ಅದನ್ನು ನೇರವಾಗಿ ತಂಡದ ಸದಸ್ಯರಿಗೆ ಹಸ್ತಾಂತರಿಸುತ್ತಾರೆ. ಗೆಲುವಿನ ಕ್ರೆಡಿಟ್​ ಅನ್ನು ಎಂದಿಗೂ ಅವರು ಹೊರುವುದಿಲ್ಲ. ಅಂತೆಯೇ ಅಯ್ಯರ್​ ಕೂಡ. ತಮ್ಮ ಇಡೀ ತಂಡಕ್ಕೆ ಶ್ರೇಯಸ್​ ಸ್ಪೂರ್ತಿಯಾಗಿ ನಿಂತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ, ಅವರು ಕ್ರೀಸ್​ನ ಶಶಾಂಕ್​ಗೆ ಬಿಟ್ಟುಕೊಟ್ಟಿದ್ದು" ಎಂದರು.

"ಮೂರು ರನ್​ಗಳಿಂದ ಶತಕ ಗಳಿಸುವತ್ತ ಸಾಗಬೇಕಿದ್ದ ಶ್ರೇಯಸ್​, ಶತಕಕ್ಕಿಂತ ತಂಡದ ಗೆಲುವು ಮುಖ್ಯ ಎಂಬ ಯೋಚನೆಯಿಂದ ಸ್ಟ್ರೈಕ್​ನಲ್ಲಿ ಶಶಾಂಕ್​ಗೆ ಆಡುವಂತೆ ತಿಳಿಸಿದರು. ಇದು ಕ್ರಿಕೆಟ್ ಅಭಿಮಾನಿಗಳ ಅಪಾರ ಮೆಚ್ಚುಗೆಗೆ ಕಾರಣವಾಯಿತು" ಎಂದು ಹೇಳಿದರು,(ಏಜೆನ್ಸೀಸ್).