ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಅಮೋಘ ಬೌಲಿಂಗ್ ಪ್ರದರ್ಶನದೊಂದಿಗೆ ಮೊಹಮ್ಮದ್ ಶಮಿ ಎಲ್ಲರ ಗಮನ ಸೆಳೆದರು. ಅವರನ್ನು ಇಡೀ ಕ್ರೀಡಾ ಜಗತ್ತೇ ಕೊಂಡಾಡುವಾಗ ಅವರ ಮಾಜಿ ಪತ್ನಿ ಹಸೀನಾ ಜಹಾನ್ ಮಾತ್ರ ಯಾಕೋ ಶಮಿಯನ್ನು ಬಿಡುವಂತೆ ಕಾಣುತ್ತಿಲ್ಲ. ಇದೇ ಸರಿಯಾದ ಸಮಯ ಅಂದುಕೊಂಡು ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆಯಲು ಹವಣಿಸುತ್ತಿದ್ದಾರೆ. ಶಮಿ ಸುಮ್ಮನಿದ್ದರೂ ಜಹಾನ್ ಮಾತ್ರ ಸುಮ್ಮನಾಗುತ್ತಿಲ್ಲ. ಇದೀಗ ಮಾಜಿ ಗಂಡನ ವಿರುದ್ಧ ಜಹಾನ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗಷ್ಟೇ ಹಸೀನಾ ಜಹಾನ್ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿಕೆಟ್ ಪಡೆಯಲು ಬ್ಯಾಟ್ಸ್ಮನ್ಗಳಿಗೆ ಶಮಿ, ಹಣ ನೀಡುತ್ತಾರೆ ಎಂದು ಜಹಾನ್ ಹೇಳಿಕೆ ನೀಡಿದ್ದಾರೆ ಎಂದು ವೈರಲ್ ಪೋಸ್ಟ್ನಲ್ಲಿ ವಾದಿಸಲಾಗಿತ್ತು. ಇದೀಗ ಈ ಪೋಸ್ಟ್ ಜಹಾನ್ ಅವರ ಗಮನಕ್ಕೆ ಬಂದಿದ್ದು, ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆಗಿರುವ ಪೋಸ್ಟ್ ಅನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡು ಮಾಜಿ ಪತಿ ಶಮಿ ವಿರುದ್ಧ ಜಹಾನ್ ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಅಪರಾಧಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಗ್ರಹಿಸುವ ಜನರು, ಸಮಾಜವಿರೋಧಿ ವ್ಯಕ್ತಿಗಳ ಕೂಟದಿಂದ ನನ್ನ ಮಾನಹಾನಿಗಾಗಿ ಪ್ರತಿ ಸುಳ್ಳು ಸುದ್ದಿಯನ್ನು ಹೇಗೆ ಹರಡಲಾಗುತ್ತಿದೆ ಎಂಬುದನ್ನು ನೀವೆಲ್ಲರು ನೋಡಿ. 2018ರಲ್ಲಿ ಶಮಿ ಅವರು ಉಮೇಶ್ ಹೆಸರಿನ ಮಾಧ್ಯಮ ವ್ಯಕ್ತಿಯೊಬ್ಬರನ್ನು ಎತ್ತರಕ್ಕೆ ಏರಿಸಿದರು. ಅಂದಿನಿಂದ, ಈ ಮಾಧ್ಯಮದ ವ್ಯಕ್ತಿ ನಿರಂತರವಾಗಿ ನನ್ನ ಹೆಸರಿಗೆ ಕಳಂಕ ತರಲು ಮಾಧ್ಯಮವನ್ನು ನಿರ್ವಹಿಸುತ್ತಿದ್ದಾರೆ. ನಾನು ಶಮಿ ವಿರುದ್ಧ ಯಾವುದೇ ಸುಳ್ಳು ಆರೋಪಗಳನ್ನು ಮಾಡಿಲ್ಲ. ಶಮಿ ಮತ್ತು ಅವರ ಕುಟುಂಬದವರು ನನ್ನ ಮೇಲೆ ಏನೇನು ದೌರ್ಜನ್ಯ ಎಸಗಿದ್ದರೋ ಅದನ್ನು ಜಗತ್ತಿನ ಗಮನಕ್ಕೆ ತಂದು ಪ್ರಕರಣ ದಾಖಲಿಸಿದ್ದೇನೆ ಎಂದು ಜಹಾನ್ ಸ್ಪಷ್ಟನೆ ನೀಡಿದರು.
ನ್ಯಾಯಾಲಯದಿಂದ ಈವರೆಗೆ ಶಮಿ ಕ್ಲೀನ್ಚಿಟ್ ಪಡೆದಿಲ್ಲ ಮತ್ತು ನನ್ನ ಮೇಲೆ ಯಾವುದೇ ಆರೋಪವನ್ನು ಮಾಡಿಲ್ಲ. ಆದಾಗ್ಯೂ ಪಕ್ಷಪಾತಿ ಮತ್ತು ಹಿಡಿತದಲ್ಲಿರುವ ಮಾಧ್ಯಮಗಳು ಜಡ್ಜ್ ಪಾತ್ರ ನಿರ್ವಹಿಸುವುದನ್ನು ಮುಂದುವರಿಸಿ, ನನ್ನನ್ನು ಏಕಪಕ್ಷೀಯವಾಗಿ ಅಪರಾಧಿ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿವೆ. ಈಗ ನೀವೇ ಹೇಳಿ, ಸಮಾಜದ ದಾರಿ ತಪ್ಪಿಸುವ ಮತ್ತು ನನ್ನ ಹಾಗೂ ನನ್ನ ಮಗಳ ಜೀವನಕ್ಕೆ ಅಡ್ಡಿಯಾಗಿರುವ ಇಂತಹ ಅಪರಾಧಿಗಳನ್ನು ಏನು ಮಾಡಬೇಕು? ಹಣವಿದ್ದವರು ಏನು ಬೇಕಾದರೂ ಮಾಡಬಹುದು, ಜನ ಮೌನವಾಗಿ ಚಮತ್ಕಾರ ನೋಡುವ ಸ್ಥಿತಿಗೆ ನಮ್ಮ ಸಮಾಜ ಕುಸಿದಿದೆಯೇ? ಎಂದು ಜಹಾನ್ ಪ್ರಶ್ನಿಸಿದ್ದಾರೆ.
ಇದೀಗ ನೀವೇ ನಿರ್ಧರಿಸಿ. ಶಮಿ, ತನ್ನ ಪಾಪಗಳನ್ನು ಮತ್ತು ಅಪರಾಧಗಳನ್ನು ಮರೆಮಾಚಲು ತುಂಬಾ ಪ್ರಯತ್ನಿಸುತ್ತಿದ್ದಾನೆ. ನಾನು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ನನ್ನ ಮತ್ತು ನನ್ನ ಮಗಳು ಸತ್ತು ಐದು ವರ್ಷಗಳಿಗಿಂತ ಹೆಚ್ಚು ಕಾಲ ಕಳೆದು ಹೋಗುತ್ತಿತ್ತು. ನಿಮ್ಮಲ್ಲಿ ಯಾರಿಗೂ ನಮ್ಮ ಬಗ್ಗೆ ಏನೂ ತಿಳಿಯುತ್ತಿರಲಿಲ್ಲ. ಮಾಧ್ಯಮಗಳು ಎಂದಿಗೂ ಒಂದು ಕಡೆ ಅನ್ಯಾಯವಾಗಿ ಚಿತ್ರಿಸಬಾರದು. ಬದಲಾಗಿ ಎರಡೂ ಬದಿಗಳನ್ನು ಪ್ರಸ್ತುತಪಡಿಸಬೇಕು. ಆದಾಗ್ಯೂ, ನನ್ನ ವಿಷಯದಲ್ಲಿ, ಇದು ಪಕ್ಷಪಾತದ ದೃಷ್ಟಿಕೋನದಿಂದ ಅನ್ಯಾಯವಾಗಿ ನನ್ನ ಖ್ಯಾತಿಯನ್ನು ಹಾಳುಮಾಡುತ್ತಿದೆ ಎಂದು ಜಹಾನ್ ನೋವು ತೋಡಿಕೊಂಡಿದ್ದಾರೆ.
ವಿಶ್ವಕಪ್ ಯಶಸ್ಸಿನ ನಡುವೆ ಶಮಿ ವಿರುದ್ಧ ಕಿಡಿಕಾರಿದ್ದ ಜಹಾನ್, ಶಮಿ ಯಶಸ್ಸೇ ನನಗೆ ಬಂಡವಾಳ! ಭಾರತಕ್ಕೆ ಒಳ್ಳೆಯದಾಗಲಿ ಆತನಿಗಲ್ಲ ಎಂದಿದ್ದರು.
ಅಂದಹಾಗೆ ಮೊಹಮ್ಮದ್ ಶಮಿ ಈಗಾಗಲೇ ಹಸಿನಾ ಜಹಾನ್ ಎಂಬುವರನ್ನು ಮದುವೆ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ, ಕೌಟುಂಬಿಕ ಕಲಹಗಳಿಂದಾಗಿ ಶಮಿ ಮತ್ತು ಜಹಾನ್ ಬೇರೆ ಬೇರೆ ವಾಸಿಸುತ್ತಿದ್ದಾರೆ. ಜಹಾನ್ ಅವರು ಕೆಲವು ವರ್ಷಗಳ ಹಿಂದೆ ಶಮಿ ವಿರುದ್ಧ ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಸರಣಿ ಆರೋಪಗಳನ್ನು ಮಾಡಿದ್ದರು. ಆರೋಪ ಕೇಳಿಬಂದ ಬೆನ್ನಲ್ಲೇ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು. ಆದಾಗ್ಯೂ, ತನಿಖೆಯ ನಂತರ ಬಿಸಿಸಿಐ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಸುಳ್ಳು ಎಂದು ಹೇಳಿ, ಸ್ವತಃ ಒಪ್ಪಂದಕ್ಕೆ ಮರಳಿತು. ಅನೇಕ ವರ್ಷಗಳಿಂದ ಇಬ್ಬರ ವೈವಾಹಿಕ ಜೀವನದ ಸಂಘರ್ಷ ಮುಂದುವರಿದುಕೊಂಡು ಬರುತ್ತಿದೆ.
ಶಮಿ ವಿರುದ್ಧ ಜಹಾನ್, ಜಾಧವಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಮಿ, ಅನೇಕ ಮಹಿಳೆಯ ಜತೆ ಚಾಟಿಂಗ್ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಜಹಾನ್, ಮಾಜಿ ಪತಿಯ ಕಾಲ್ ರೆಕಾರ್ಡಿಂಗ್ಸ್ ಸಹ ಶೇರ್ ಮಾಡಿದ್ದಾರೆ. 2018ರಿಂದ ಶಮಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, 2020ರವರೆಗೂ ತುಂಬಾ ಚರ್ಚೆಯಾಯಿತು. ಈ ನಡುವೆ ಶಮಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಎಲ್ಲೂ ಕುಗ್ಗದ ಶಮಿ ತಮ್ಮ ಪ್ರಯತ್ನದಿಂದ ಕ್ರಿಕೆಟ್ನಲ್ಲಿ ಮತ್ತೆ ಪುಟಿದೆದ್ದಿದ್ದು, ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಸ್ಟಾರ್ ಬೌಲರ್ ಎನಿಸಿಕೊಂಡಿದ್ದಾರೆ.
ಅಂದಹಾಗೆ ಶಮಿ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್ ಪಡೆಯುವುದರೊಂದಿಗೆ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯಲ್ಲಿ ಮೂರು ಬಾರಿ 5 ವಿಕೆಟ್ ಮತ್ತು ಒಂದು 4 ವಿಕೆಟ್ ಪಡೆದರು. (ಏಜೆನ್ಸೀಸ್)