ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, 10 ತಂಡಗಳು ಕೂಡ ಭರ್ಜರಿ ಪೈಪೋಟಿ ಕೊಡಲು ಸಕಲ ತಯಾರಿಗಳನ್ನು ನಡೆಸುತ್ತಿವೆ. ಅದರಲ್ಲೂ ಈ ಬಾರಿ ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ ಮುಂದುವರೆಸಲಿದ್ದಾರೆ. ಆ್ಯಂಕಲ್ ಇಂಜುರಿ ಬಳಿಕ ಯಾವ ಪಂದ್ಯಗಳನ್ನು ಆಡದ ಪಾಂಡ್ಯ, ಮುಂಬೈ ನಾಯಕನಾಗಿ ಐಪಿಎಲ್ನಲ್ಲಿ ಕಣಕ್ಕಿಳಿಯುವುದು ಖಚಿತವಾಗಿದ್ದು, 2024ರ ಲೀಗ್ನಲ್ಲಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಐಸಿಸಿ ಕ್ರಿಕೆಟ್ ವಿಶ್ವಕಪ್ ಗ್ರೂಪ್ ಹಂತದ ಪಂದ್ಯದ ವೇಳೆ ಪಾದ ಗಾಯಗೊಂಡ ಬಳಿಕ ಪಾಂಡ್ಯ ಭಾರತಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಟಿ-20 ಸರಣಿ, ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದರು. ಈಗ ಗುಜರಾತ್ ಟೈಟನ್ಸ್ ತಂಡವನ್ನು ಕೈಬಿಟ್ಟು ವಾಪಾಸ್ ಮುಂಬೈ ಇಂಡಿಯನ್ಸ್ ನಾಯಕನಾಗಿ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.
ಸದ್ಯ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಹರಿದಾಡುತ್ತಿರುವ ವಿಷಯಗಳಿಗೆ ಪ್ರತಿಕ್ರಿಯಿಸಿದ ಪಾಂಡ್ಯ, "ನನ್ನ ಅಭಿಮಾನಿಗಳಿಗೆ ನನ್ನ ಬಗ್ಗೆ ಗೊತ್ತಿಲ್ಲದ ಒಂದು ವಿಷಯವೆಂದರೆ ನಾನು ಹೊರಗೆ ಹೋಗುವುದಿಲ್ಲ. ನಾನು ಮನೆಯೊಳಗೆ ಹೆಚ್ಚು ಸಮಯ ಕಳೆಯುತ್ತೇನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನಾನು ಅಷ್ಟೇನೂ ಹೊರಗೆ ಹೋಗಿಲ್ಲ. ಹೊರಬಂದರೂ ಸಹ ತೀರ ನನ್ನ ಸ್ನೇಹಿತರಿಗೆ ಏನಾದರೂ ತೊಂದರೆ ಅಥವಾ ಹೋಗಲೇಬೇಕಾದ ಸಂಗತಿಯಿದ್ದರೇ ಮಾತ್ರ ಹೊರಬರುತ್ತೇನೆ" ಎಂದರು.
"ನಾನು ಮನೆಯಲ್ಲಿಯೇ ಇರಲು ಇಷ್ಟಪಡುತ್ತೇನೆ. ಕಳೆದ 50 ದಿನಗಳವರೆಗೆ ಮನೆಯಿಂದ ಹೊರಗೆ ಹೋಗಲಿಲ್ಲ. ಅದರಲ್ಲೂ ನಮ್ಮ ಮನಗೆ ಇರುವ ಲಿಫ್ಟ್ ಅನ್ನು ಸಹ ನೋಡಿಲ್ಲ. ನನ್ನ ನಿವಾಸದಲ್ಲೇ ಜಿಮ್, ಹೋಮ್ ಥಿಯೇಟರ್ ಸೇರಿದಂತೆ ನಾನು ಇಷ್ಟಪಡುವ ಸಾಕಷ್ಟು ವಸ್ತುಗಳು ನನ್ನ ಮನೆಯಲ್ಲೇ ಇವೆ. ಹಾಗಾಗಿ ಹೆಚ್ಚು ಹೊರಗೆ ಹೋಗಲ್ಲ. ನಾ ಹೊರಗೆ ಹೋಗದ ವಿಷಯ ಅಭಿಮಾನಿಗಳಿಗೆ ತಿಳಿದೇ ಇಲ್ಲ" ಎಂದರು.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪಾಂಡ್ಯ ಕುಳಿತ ಸೂಪರ್ ಕಾರಿನ ಫೋಟೋವೊಂದರ ಬಗ್ಗೆ ಕೇಳಿದ ಪ್ರಶ್ನೆಗೆ, "ಟೆಸ್ಟ್ ಡ್ರೈವ್‌ಗಾಗಿ ಯಾರೋ ನನಗೆ ಕಾರನ್ನು ಕಳುಹಿಸಿದ್ದರು. ನಾನು ಮಾಧ್ಯಮಗಳಲ್ಲಿ ಕಮೆಂಟ್ ಮಾಡುವುದಿಲ್ಲ, ನಾನು ಅದನ್ನು ಎಂದಿಗೂ ಮಾಡಲ್ಲ. ಅದ್ಯಾವುದು ಸಹ ನನಗೆ ತೊಂದರೆಯಾಗುವುದಿಲ್ಲ" ಎಂದು ಹಾರ್ದಿಕ್ ಖಡಕ್ ಆಗಿ ಉತ್ತರಿಸಿದರು,(ಏಜೆನ್ಸೀಸ್).