ಜೈಪುರ: ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 22) ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಹೀನಾಯವಾಗಿ ಸೋತಿತು. ಈ ಸೀಸನ್ನಲ್ಲಿ ಮುಂಬೈ ತಂಡಕ್ಕೆ ಇದು ಐದನೇ ಸೋಲಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಟ್ರೋಲ್ಗೆ ಒಳಗಾಗಿರುವ ಹಾರ್ದಿಕ್ ಪಾಂಡ್ಯ, ಆರ್‌ಆರ್ ವಿರುದ್ಧದ ಪಂದ್ಯದಲ್ಲಿ ಮಾಡಿದ ತನ್ನ ಎಡವಟ್ಟುಗಳಿಂದಾಗಿ ಹೆಚ್ಚು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಓವರ್ ಆ್ಯಕ್ಷನ್ಗಳನ್ನು ಕಡಿಮೆ ಮಾಡಿ ಎಂದು ನೆಟ್ಟಿಗರು ಪಾಂಡ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆರ್‌ಆರ್ ತಂಡದ ವಿರುದ್ಧದ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡುತ್ತಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಡಗೌಟ್‌ನಲ್ಲಿ ತಮ್ಮ ಬ್ಯಾಟಿಂಗ್‌ಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಅವರು ಬೌಂಡರಿ ಲೈನ್ ಪಕ್ಕದಲ್ಲಿ ಪುಶ್ ಅಪ್ ಮಾಡುವ ಮೂಲಕ ತಯಾರಿ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಪಾಂಡ್ಯ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ಇಂತಹ ಕೆಲಸಗಳನ್ನು ಡ್ರೆಸ್ಸಿಂಗ್ ರೂಂನಲ್ಲಿ ಮಾಡಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಬ್ಯಾಟಿಂಗ್ ಮಾಡುವ ಮುನ್ನ ಪಾಂಡ್ಯ ಅವರು ಇಷ್ಟು ಓವರ್ ಆ್ಯಕ್ಷನ್ ಮಾಡಿದರು ಕೂಡ ಬ್ಯಾಟಿಂಗ್ನಲ್ಲಿ ಮಿಂಚಲಿಲ್ಲ. ಹತ್ತು ಎಸೆತಗಳನ್ನು ಆಡಿದ ಪಾಂಡ್ಯ ಕೇವಲ ಹತ್ತು ರನ್ ಗಳಿಸಿ ಔಟಾದರು ಎಂದು ಟೀಕಿಸುತ್ತಿದ್ದಾರೆ.
ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಆರಂಭಿಕರಾದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ವೈಫಲ್ಯದ ಹೊರತಾಗಿಯೂ ಒನ್ ಡೌನ್ನಲ್ಲಿ ಬಂದ ಸೂರ್ಯಕುಮಾರ್ ಯಾದವ್ ಹೆಚ್ಚು ರನ್ ಗಳಿಸದೆ ಔಟಾದ ಕಾರಣ ಮುಂಬೈ ಸಂಕಷ್ಟಕ್ಕೆ ಸಿಲುಕಿತು. ಆದರೆ, ತಿಲಕ್ ವರ್ಮಾ 45 ಎಸೆತಗಳಲ್ಲಿ 65 ಮತ್ತು ನೇಹಾಲ್ 24 ಎಸೆತಗಳಲ್ಲಿ 49 ರನ್ ಗಳಿಸಿ ಉತ್ತಮ ರನ್ ತಂದುಕೊಟ್ಟರು. ಅಂತಿಮವಾಗಿ ಟಿಮ್ ಡೇವಿಡ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ರನ್ ಗಳಿಸುವಲ್ಲಿ ವಿಫಲರಾದರು. ರಾಜಸ್ಥಾನದ ಬೌಲರ್‌ಗಳ ಪೈಕಿ ಸಂದೀಪ್ ಶರ್ಮಾ 5 ವಿಕೆಟ್ ಕಬಳಿಸಿ ಮುಂಬೈ ಇಂಡಿಯನ್ಸ್ ತಂಡವನ್ನು ಕಾಡಿದರು.
180 ರನ್ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ರಾಜಸ್ತಾನ ಕೇವಲ ಒಂದು ವಿಕೆಟ್ ಕಳೆದುಕೊಂಡು 18.4 ಓವರ್ಗಳಲ್ಲಿ 183 ರನ್ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 60 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿ ರಾಜಸ್ಥಾನಕ್ಕೆ ಜಯ ತಂದುಕೊಟ್ಟರು. ನಾಯಕ ಸಂಜು ಸ್ಯಾಮ್ಸನ್ 38 (ಔಟಾಗದೆ) ಮತ್ತು ಆರಂಭಿಕ ಜೋಸ್ ಬಟ್ಲರ್ 35 ರನ್ ಗಳಿಸಿದರು. (ಏಜೆನ್ಸೀಸ್)