ಕ್ರೀಡೆ

ಪ್ರವಾಹ ಪೀಡಿತ ಪಂಜಾಬ್‌ಗೆ ದೋಣಿಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ದಾನ ಮಾಡಿದ ಹರ್ಭಜನ್ ಸಿಂಗ್!Harbhajan Singh Donates 3 Boats

Harbhajan Singh Donates 3 Boats: ಪ್ರವಾಹ ಪೀಡಿತ ಪಂಜಾಬ್‌ಗೆ ಹರ್ಭಜನ್ ಸಿಂಗ್ ದೋಣಿಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ದೇಣಿಗೆ ನೀಡಿದ್ದಾರೆ. ಅವರು ಪರಿಹಾರ ಕಾರ್ಯಗಳಿಗಾಗಿ ಹಣವನ್ನು ಸಹ ಸಂಗ್ರಹಿಸುತ್ತಿದ್ದಾರೆ. ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಹರ್ಭಜನ್ ಸಿಂಗ್ ಅವರ ಈ ಕಾರ್ಯದ ಕುರಿತಾಗಿ ನೆಟ್ಟಿಗರು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ.

ಮೂಲಗಳ ಪ್ರಕಾರ, ಹರ್ಭಜನ್ ಸಿಂಗ್ ಇದುವರೆಗೆ ಒಟ್ಟು 11 ಸ್ಟೀಮರ್ ದೋಣಿಗಳನ್ನು ದಾನ ಮಾಡಿದ್ದಾರೆ, ಅದರಲ್ಲಿ ಎಂಟು ದೋಣಿಗಳನ್ನು ಸಂಸದ ನಿಧಿಯಿಂದ ಮತ್ತು ಮೂರು ದೋಣಿಗಳನ್ನು ಅವರ ವೈಯಕ್ತಿಕ ಸಂಪನ್ಮೂಲಗಳಿಂದ ಖರೀದಿಸಲಾಗಿದೆ. ಪ್ರತಿ ದೋಣಿಯ ಬೆಲೆ ಸುಮಾರು 4.5 ರಿಂದ 5.5 ಲಕ್ಷ ರೂ. ಎಂದು ಹೇಳಲಾಗುತ್ತದೆ. ಇದಲ್ಲದೆ, ಅವರು ತೀವ್ರವಾಗಿ ಅಸ್ವಸ್ಥರಾದ ಜನರನ್ನು ಆಸ್ಪತ್ರೆಗಳಿಗೆ ಸುರಕ್ಷಿತವಾಗಿ ಸಾಗಿಸಲು ಮೂರು ಆಂಬ್ಯುಲೆನ್ಸ್‌ಗಳನ್ನು ಸಹ ಒದಗಿಸಿದ್ದಾರೆ.

ಹರ್ಭಜನ್ ಸಿಂಗ್ ಅವರು ತಮ್ಮ ಸ್ನೇಹಿತರು ಮತ್ತು ಹಿತೈಷಿಗಳಿಂದ ಪರಿಹಾರ ಕಾರ್ಯಗಳಿಗಾಗಿ ಸಹಾಯವನ್ನು ಕೋರಿದ್ದಾರೆ. ಅವರ ಕೋರಿಕೆಯ ಮೇರೆಗೆ ಕ್ರೀಡಾ ಸಂಸ್ಥೆಯೊಂದು 30 ಲಕ್ಷ ರೂ.ಗಳನ್ನು ದೇಣಿಗೆ ನೀಡಿದರೆ, ಅವರ ಇಬ್ಬರು ಆಪ್ತರು ಕ್ರಮವಾಗಿ 12 ಲಕ್ಷ ಮತ್ತು 6 ಲಕ್ಷ ರೂ.ಗಳನ್ನು ನೀಡಿದ್ದಾರೆ. ಮೂಲಗಳ ಪ್ರಕಾರ, ಇಲ್ಲಿಯವರೆಗೆ ಪರಿಹಾರ ಕಾರ್ಯಕ್ಕಾಗಿ ಸುಮಾರು 50 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ. ಆಹಾರ ಪದಾರ್ಥಗಳು ಮತ್ತು ಔಷಧಿಗಳನ್ನು ಸಹ ಪೀಡಿತ ಕುಟುಂಬಗಳಿಗೆ ನಿರಂತರವಾಗಿ ತಲುಪಿಸಲಾಗುತ್ತಿದೆ.

ಹರ್ಭಜನ್ ಪಂಜಾಬ್‌ನಲ್ಲಿ ಪ್ರವಾಹದಿಂದ ತೊಂದರೆಗೊಳಗಾದ ಜನರಿಗೆ ಸಹಾಯಕ್ಕಾಗಿ ಮನವಿ ಮಾಡುವ ವೀಡಿಯೊವನ್ನು ಬಿಡುಗಡೆ ಮಾಡಿದ್ದರು.

ಕಳೆದ ಕೆಲವು ವಾರಗಳಿಂದ ಪಂಜಾಬ್‌ನಲ್ಲಿ ಭಾರೀ ಮಳೆ ಮತ್ತು ನದಿ ಕಟ್ಟೆಗಳು ಒಡೆದು ಹೋಗಿರುವುದರಿಂದ ಪ್ರವಾಹ ಉಂಟಾಗಿದೆ. ಹಲವು ಜಿಲ್ಲೆಗಳು ಇನ್ನೂ ನೀರಿನಲ್ಲಿ ಮುಳುಗಿವೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಬೆಳೆಗಳು ಸಹ ನಾಶವಾಗಿವೆ. ರಾಜ್ಯ ಸರ್ಕಾರ, ಆಡಳಿತ ಮತ್ತು ಸಾಮಾಜಿಕ ಸಂಸ್ಥೆಗಳು ನಿರಂತರವಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.