15 ದಿನದಲ್ಲೇ ಹಸೆಮಣೆ ಏರಬೇಕಿದ್ದ ಯುವತಿ ರಸ್ತೆ ಅಪಘಾತದಲ್ಲಿ ಸಾವು! Shivamogga

Shivamogga accident
Published on

ಶಿವಮೊಗ್ಗ: ( Shivamogga) ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂದಿನ 15 ದಿನದಲ್ಲೇ ಆಕೆ ಹಸೆಮಣೆ ಏರಬೇಕಿತ್ತು. ಹೊಸ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಯುವತಿಗೆ ಕುರುಕಲು ಪದಾರ್ಥ ಮಾರಾಟಗಾರನ ಬೈಕ್ ಮತ್ತು ನಗರ ಸಾರಿಗೆ ಖಾಸಗಿ ಬಸ್ ಯಮಸ್ವರೂಪಿಯಾಗಿ ಬಂದಿದ್ದು, ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾಳೆ.

ಶಿವಮೊಗ್ಗ ತಾಲೂಕಿನ ದುಮ್ಮಳ್ಳಿಯ ಕವಿತಾ(26) ಮೃತ ಯುವತಿ. ಸಹೋದರನೊಂದಿಗೆ ದುಮ್ಮಳ್ಳಿಯಿಂದ ಶಿವಮೊಗ್ಗಕ್ಕೆ ಬರುವಾಗ ನಗರದ ಹೊರವಲಯದ ಮಲವಗೊಪ್ಪದ ಸಕ್ಕರೆ ಫ್ಯಾಕ್ಟರಿ ಬಳಿ ಬೈಕ್‌ಗಳು ಮುಖಾಮುಖಿ ಡಿಕ್ಕಿಯಿಂದ ರಸ್ತೆ ಮೇಲೆ ಬಿದ್ದಿದ್ದ ಯುವತಿ ಮೇಲೆ ನಗರ ಸಾರಿಗೆ ಬಸ್ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

 ನಡೆದಿದ್ದೇನು?: 

ಮಲವಗೊಪ್ಪದ ಬಳಿಯಿರುವ ಸಕ್ಕರೆ ಫ್ಯಾಕ್ಟರಿ ಮತ್ತು ಹಾಥಿನಗರದ ನಡುವೆ ಸೋಮವಾರ ಬೆಳಗ್ಗೆ ಸಹೋದರ ಸಂತೋಷ್ ಜತೆ ಕವಿತಾ ಬೈಕ್‌ನಲ್ಲಿ ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೋಟಿ ಮತ್ತು ಕುರುಕಲು ಪದಾರ್ಥಗಳ ಮಾರಾಟಗಾರನ ಬೈಕ್ ಡಿಕ್ಕಿ ಹೊಡೆದಿದೆ.

ಸಂತೋಷ್ ರಸ್ತೆಯ ಫುಟ್‌ಪಾತ್ ಕಡೆ ಬಿದ್ದರೆ ಹಿಂಬದಿ ಕುಳಿತಿದ್ದ ಕವಿತಾ ರಸ್ತೆ ಮಧ್ಯೆ ಬಿದ್ದಿದ್ದಾರೆ. ಇದೇ ವೇಳೆ ವೇಗವಾಗಿ ಬರುತ್ತಿದ್ದ ಖಾಸಗಿ ನಗರ ಸಾರಿಗೆ ಬಸ್ ಕವಿತಾಳ ತಲೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕವಿತಾಳಿಗೆ ಮದುವೆ ನಿಶ್ಚಯವಾಗಿದ್ದು, 15 ದಿನಗಳಲ್ಲಿ ಮದುವೆ ಆಗಲಿದ್ದರು. ಹಸೆಮಣೆ ಏರಬೇಕಿದ್ದ ಯುವತಿ ಮಸಣ ಸೇರಿದ್ದಾಳೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net