ಕ್ರೀಡೆ

ಕೆರಿಬಿಯನ್ ಟಿ20 ಲೀಗ್‌ನಲ್ಲಿ ಅಲ್ಪಮೊತ್ತ ರಕ್ಷಿಸಿ ದಾಖಲೆ ಬರೆದ ಗಯಾನಾ ವಾರಿಯರ್ಸ್​

ಟರೌಬ (ಟ್ರಿನಿಡಾಡ್): ಆಲ್ರೌಂಡರ್ ಆಂಡ್ರೆ ರಸೆಲ್ (52* ರನ್, 37 ಎಸೆತ, 4 ಬೌಂಡರಿ, 5 ಸಿಕ್ಸರ್) ಸ್ಫೋಟಕ ಆಟವಾಡಿದರೂ ಲೆಕ್ಕಿಸದ ಗಯಾನಾ ಅಮೆಜಾನ್ ವಾರಿಯರ್ಸ್‌ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯ ಇತಿಹಾಸದಲ್ಲಿ ಕನಿಷ್ಠ ಮೊತ್ತವನ್ನು ರಕ್ಷಿಸಿಕೊಂಡ ದಾಖಲೆ ಬರೆದಿದೆ. ಶನಿವಾರ ನಡೆದ ಪಂದ್ಯದಲ್ಲಿ ಗಯಾನಾ ತಂಡ ಜಮೈಕಾ ತಲ್ಲವಾಹ್ಸ್ ವಿರುದ್ಧ 14 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿತು. ಈ ಮೂಲಕ ಗಯಾನಾ ತಂಡ ಆಡಿದ 3 ಪಂದ್ಯಗಳಲ್ಲಿ 4 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗಯಾನಾ ತಂಡ 19.1 ಓವರ್‌ಗಳಲ್ಲಿ 118 ರನ್‌ಗಳಿಗೆ ಸರ್ವಪತನ ಕಂಡಿತು. ಕಳೆದೆರಡು ಪಂದ್ಯಗಳಲ್ಲಿ ಬಿರುಸಿನ ಅರ್ಧಶತಕ ಸಿಡಿಸಿ ಮಿಂಚಿದ್ದ ಶಿಮ್ರೋನ್ ಹೆಟ್ಮೆಯರ್ ಈ ಬಾರಿ ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿದ್ದು ಗಯಾನಾ ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಪ್ರತಿಯಾಗಿ ಜಮೈಕಾ ತಂಡ ಗಯಾನಾ ಬೌಲರ್‌ಗಳ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿ 59 ರನ್‌ಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಅಂಚು ತಲುಪಿತು. ಆ ಬಳಿಕ ಆಂಡ್ರೆ ರಸೆಲ್ ಏಕಾಂಗಿ ಹೋರಾಟದ ಮೂಲಕ ತಂಡಕ್ಕೆ ಗೆಲುವು ತಂದುಕೊಡುವ ಪ್ರಯತ್ನ ನಡೆಸಿದರು. ಆದರೆ ಅವರ ಹೋರಾಟ ಕೈಗೂಡದೆ ಜಮೈಕಾ ತಂಡ 7 ವಿಕೆಟ್‌ಗೆ 104 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರಸೆಲ್ ಮುರಿಯದ 8ನೇ ವಿಕೆಟ್‌ಗೆ ನಡೆಸಿದ 45 ರನ್ ಜತೆಯಾಟದಲ್ಲಿ 44 ರನ್‌ಗಳನ್ನು ಅವರೊಬ್ಬರೇ ದೋಚಿದರು. ಜತೆಗಾರ ಫಿಡೆಲ್ ಎಡ್ವರ್ಡ್ಸ್ ಎದುರಿಸಿದ 1 ಎಸೆತದಲ್ಲಿ 1 ರನ್ ಗಳಿಸಿದರು.

ಗಯಾನಾ ಅಮೆಜಾನ್ ವಾರಿಯರ್ಸ್‌: 19.1 ಓವರ್‌ಗಳಲ್ಲಿ 118 (ಬ್ರೆಂಡನ್ ಕಿಂಗ್ 29, ಚಂದ್ರಪಾಲ್ ಹೇಮರಾಜ್ 21, ಹೆಟ್ಮೆಯರ್ 0, ರಾಸ್ ಟೇಲರ್ 21, ಪೂರನ್ 4, ರಿದರ್‌ೆರ್ಡ್ 6, ಪೌಲ್ 3, ನವೀನ್ ಉಲ್ ಹಕ್ 14, ಕಾರ್ಲೋಸ್ ಬ್ರಾಥ್‌ವೇಟ್ 14ಕ್ಕೆ 3, ಮುಜೀಬ್ ಉರ್ ರೆಹಮಾನ್ 18ಕ್ಕೆ 3, ಸಂದೀಪ್ ಲಮಿಚನೆ 8ಕ್ಕೆ 2), ಜಮೈಕಾ ತಲ್ಲವಾಹ್ಸ್: 7 ವಿಕೆಟ್‌ಗೆ 104 (ಪೊವೆಲ್ 23, ಬ್ರಾಥ್‌ವೇಟ್ 5, ಆಂಡ್ರೆ ರಸೆಲ್ 52*, ಕ್ರಿಸ್ ಗ್ರೀನ್ 10ಕ್ಕೆ 2, ತಾಹಿರ್ 26ಕ್ಕೆ 1, ಕೀಮೊ ಪೌಲ್ 33ಕ್ಕೆ 1, ಹೇಮರಾಜ್ 3ಕ್ಕೆ 1, ನವೀನ್ ಉಲ್ ಹಕ್ 22ಕ್ಕೆ 1). ಪಂದ್ಯಶ್ರೇಷ್ಠ: ನವೀನ್ ಉಲ್ ಹಕ್.

ಸೇಂಟ್ ಲೂಸಿಯಾ ಜೌಕ್ಸ್ ಜಯಭೇರಿ

ದಿನದ ಮೊದಲ ಪಂದ್ಯದಲ್ಲಿ ಸೇಂಟ್ ಲೂಸಿಯಾ ಜೌಕ್ಸ್ ತಂಡ ವೇಗಿ ಸ್ಕಾಟ್ ಕಗೆಲಿನ್ (33ಕ್ಕೆ 4) ಮತ್ತು ಸ್ಪಿನ್ನರ್ ರೋಸ್ಟನ್ ಚೇಸ್ (12ಕ್ಕೆ 3) ಬಿಗಿ ಬೌಲಿಂಗ್ ನಿರ್ವಹಣೆಯಿಂದ ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್ ತಂಡವನ್ನು 10 ರನ್‌ಗಳಿಂದ ಮಣಿಸಿತು. ಈ ಮೂಲಕ ಡರೇನ್ ಸ್ಯಾಮ್ಮಿ ಸಾರಥ್ಯದ ತಂಡ ಆಡಿದ 3 ಪಂದ್ಯಗಳಲ್ಲಿ 4 ಅಂಕ ಕಲೆಹಾಕಿ ಜಂಟಿ ಅಗ್ರಸ್ಥಾನ ಅಲಂಕರಿಸಿದೆ. ಪ್ಯಾಟ್ರಿಯಾಟ್ಸ್ ತಂಡಕ್ಕಿದು ಟೂರ್ನಿಯಲ್ಲಿ ಸತತ 3ನೇ ಸೋಲಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಜೌಕ್ಸ್ ತಂಡ 6 ವಿಕೆಟ್‌ಗೆ 172 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. 12ನೇ ಓವರ್‌ನಲ್ಲಿ 1 ವಿಕೆಟ್‌ಗೆ 102 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿದ್ದ ಜೌಕ್ಸ್ ತಂಡ ಬಳಿಕ ದಿಢೀರ್ ಕುಸಿತ ಕಂಡು 18ನೇ ಓವರ್ ವೇಳೆಗೆ 6 ವಿಕೆಟ್‌ಗೆ 137 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆಗ ಆಲ್ರೌಂಡರ್ ಮೊಹಮದ್ ನಬಿ (35*ರನ್, 22 ಎಸೆತ, 1 ಬೌಂಡರಿ, 3 ಸಿಕ್ಸರ್) ತಂಡಕ್ಕೆ ಹಾಲಿ ಆವೃತ್ತಿಯ ಗರಿಷ್ಠ ಮೊತ್ತವನ್ನು ಪೇರಿಸಲು ತಂಡಕ್ಕೆ ನೆರವಾದರು. ಕೊನೆಯ 2 ಓವರ್‌ಗಳಲ್ಲಿ ಅವರು 32 ರನ್ ದೋಚಿದರು. ಪ್ರತಿಯಾಗಿ ಪ್ಯಾಟ್ರಿಯಾಟ್ಸ್ ತಂಡ 8 ವಿಕೆಟ್‌ಗೆ 162 ರನ್ ಗಳಿಸಲಷ್ಟೇ ಶಕ್ತವಾಯಿತು.

ಸೇಂಟ್ ಲೂಸಿಯಾ ಜೌಕ್ಸ್: 6 ವಿಕೆಟ್‌ಗೆ 172 (ಆಂಡ್ರೆ ಫ್ಲೆಚರ್ 46, ಕಾರ್ನ್‌ವಾಲ್ 16, ಡೆಯಲ್ 30, ನಜಿಬುಲ್ಲಾ ಜದ್ರಾನ್ 28, ಮೊಹಮದ್ ನಬಿ 35*, ರೋಸ್ಟನ್ ಚೇಸ್ 35, ಜಗೆಸರ್ 29ಕ್ಕೆ 2, ಸೋಹೈಲ್ ತನ್ವೀರ್ 41ಕ್ಕೆ 2), ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್: 8 ವಿಕೆಟ್‌ಗೆ 162 (ದಿನೇಶ್ ರಾಮ್‌ದಿನ್ 46, ಎವಿನ್ ಲೆವಿಸ್ 29, ಡಂಕ್ 5, ಪೊವೆಲ್ 7, ಕಾಟ್ರೆಲ್ 26*, ಕಗೆಲಿನ್ 33ಕ್ಕೆ 4, ರೋಸ್ಟನ್ ಚೇಸ್ 12ಕ್ಕೆ 3, ಮೊಹಮದ್ ನಬಿ 17ಕ್ಕೆ 1).

ಭಾನುವಾರದ ಪಂದ್ಯಗಳು:

ಟ್ರಿನಿಬಾಗೋ ನೈಟ್‌ರೈಡರ್ಸ್‌-ಬಾರ್ಬಡೋಸ್ ಟ್ರೈಡೆಂಟ್ಸ್

ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ)

ಗಯಾನಾ ಅಮೆಜಾನ್ ವಾರಿಯರ್ಸ್‌-ಸೇಂಟ್ ಲೂಸಿಯಾ ಜೌಕ್ಸ್

ಆರಂಭ: ರಾತ್ರಿ 11.45 (ಭಾರತೀಯ ಕಾಲಮಾನ)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್