ಬೆಂಗಳೂರು: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಕಳಪೆ ಪ್ರದರ್ಶನಕ್ಕಾಗಿ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಈ ಸೀಸನ್ನ ಎರಡನೇ ಪಂದ್ಯದಲ್ಲಿ ಮಾತ್ರ ಆರ್‌ಸಿಬಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ನಂತರ, ಆರ್‌ಸಿಬಿ ಪಂಜಾಬ್ ವಿರುದ್ಧ ಗೆದ್ದಿತು. ಆ ಬಳಿಕ ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಆರ್‌ಸಿಬಿ ಇದುವರೆಗೆ 7 ಪಂದ್ಯಗಳನ್ನು ಆಡಿದ್ದು, ಒಂದು ಗೆಲುವು ಮತ್ತು ಆರು ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಈ ಬಾರಿಯೂ ಆರ್‌ಸಿಬಿ ಟ್ರೋಫಿ ಗೆಲುವಿನ ಭರವಸೆಯನ್ನು ಅಭಿಮಾನಿಗಳು ಕಳೆದುಕೊಂಡಿದ್ದಾರೆ.
ನಿರಂತರ ಸೋಲುಗಳಿಂದಾಗಿ ಎಸ್ಆರ್ಎಚ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ರಂತಹ ಸ್ಟಾರ್ ಆಟಗಾರರನ್ನು ಕೈ ಬಿಟ್ಟು ಬೇರೆ ಆಟಗಾರರಿಗೆ ಅವಕಾಶ ನೀಡಿದರು ಆರ್ಸಿಬಿಯ ಜಾತಕದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಬದಲಾಗಿ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಸ್ಕೋರ್ ಅನ್ನು ಆರ್‌ಸಿಬಿ, ಎಸ್ಆರ್ಎಚ್ಗೆ ಬಿಟ್ಟುಕೊಟ್ಟಿತು.
ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಕೈಬಿಡಲಾಗಿತ್ತು. ಉತ್ತಮ ಫಾರ್ಮ್ನಲ್ಲಿ ಇಲ್ಲದ ಕಾರಣ ಸ್ವತಃ ಮ್ಯಾಕ್ಸ್‌ವೆಲ್ ಕೇಳಿಕೊಂಡಿದ್ದರಿಂದ ಕೈಬಿಡಲಾಗಿತ್ತು ಎಂದು ಸುದ್ದಿಯಾಗಿತ್ತು. ಮ್ಯಾಕ್ಸ್‌ವೆಲ್ ತಂಡಕ್ಕಾಗಿ ಯೋಚಿಸಿ ತಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಮತ್ತು ಆರ್‌ಸಿಬಿ ಅಭಿಮಾನಿಗಳು ಪ್ರಶಂಸೆಯ ಸುರಿಮಳೆಗೈದಿದ್ದರು. ಆದರೆ, ಮ್ಯಾಕ್ಸ್‌ವೆಲ್ ಗೈರುಹಾಜರಿಯ ಹಿಂದೆ ಬೇರೆಯೇ ಕಾರಣವಿದೆ ಎಂಬ ವರದಿಗಳಿವೆ.
ಜೂನ್ 1ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಆಡಿದರೂ, ಆಡದೇ ಸುಮ್ಮನಿದ್ದರೂ ಹೇಗೋ ಹಣ ಬಂದೇ ಬರುತ್ತದೆ. ಬೆಂಚ್ ಕಾಯುವ ನೆಪದಲ್ಲಿ ವಿಶ್ರಾಂತಿ ತೆಗೆದುಕೊಂಡು ವಿಶ್ವಕಪ್ಗೆ ಮ್ಯಾಕ್ಸ್‌ವೆಲ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಮಾನಸಿಕ ಹಾಗೂ ದೈಹಿಕ ವಿಶ್ರಾಂತಿಗಾಗಿ ಮ್ಯಾಕ್ಸ್‌ವೆಲ್ ಮನವಿ ಮಾಡಿದ್ದಾರೆಂದು ತಿಳಿದುಬಂದಿ. ಇದನ್ನು ತಿಳಿದ ಆರ್‌ಸಿಬಿ ಅಭಿಮಾನಿಗಳು ಮ್ಯಾಕ್ಸ್‌ವೆಲ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಆರ್‌ಸಿಬಿ ಗೆಲ್ಲುತ್ತೆ ಅಂತ ನಂಬಿದ್ರೆ ಈ ರೀತಿ ಮೋಸ ಮಾಡ್ತೀರಾ ಅಂತ ಅಭಿಮಾನಿಗಳು ಸಿಟ್ಟಾಗಿದ್ದಾರೆ. (ಏಜೆನ್ಸೀಸ್)