ಸಿಡ್ನಿ: ಶನಿವಾರ (ಅ.25) ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 168 ರನ್‌ಗಳ ಅದ್ಭುತ ಜೊತೆಯಾಟ ನೀಡಿ ತಂಡದ ಗೆಲುವಿಗೆ ಕಾರಣರಾದರು. ಈ ಪಂದ್ಯದಲ್ಲಿ ರೋ-ಕೊ ಜೋಡಿಯ ಅದ್ಭುತ ಪ್ರದರ್ಶನವು ಅವರ ಸುತ್ತಲು ನಿವೃತ್ತಿಯ ಕುರಿತು ಎದ್ದಿದ್ದ ಅನೇಕ ಊಹಾಪೋಹಗಳಿಗೆ ಅಂತ್ಯ ಹಾಡಿತು. ಈ ಪಂದ್ಯದ ನಂತರ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ( Gautam Gambhir ) ಡ್ರೆಸ್ಸಿಂಗ್ ಕೋಣೆಯಲ್ಲಿ ಕೆಲವು ಪ್ರಮುಖ ಹೇಳಿಕೆಗಳನ್ನು ನೀಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲಿ 236 ರನ್‌ಗಳಿಗೆ ಆಲೌಟ್ ಆಯಿತು. ಆ ನಂತರ, ರೋಹಿತ್ ಶರ್ಮ ( ಅಜೇಯ 121 ರನ್, 125 ಎಸೆತ, 13 ಬೌಂಡರಿ, 3 ಸಿಕ್ಸರ್) ಮತ್ತು ವಿರಾಟ್ ಕೊಹ್ಲಿ ( ಅಜೇಯ 74 ರನ್, 81 ಎಸೆತ, 7 ಬೌಂಡರಿ) ಅದ್ಭುತ ಪ್ರದರ್ಶನ ನೀಡಿ 38.3 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ ಗುರಿ ತಲುಪಿದರು. ಶುಭಮನ್ ಗಿಲ್ (24) ರನ್ ಗಳಿಸಿದರು.
237 ರನ್‌ಗಳ ಗುರಿ ಬೆನ್ನಟ್ಟುವಿಕೆಯಲ್ಲಿ, ಗಿಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್‌ಗೆ 69 ರನ್‌ಗಳ ಜೊತೆಯಾಟವನ್ನು ನೀಡಿದರು. ಪಂದ್ಯದ ನಂತರ ಗಂಭೀರ್ ಡ್ರೆಸ್ಸಿಂಗ್ ಕೋಣೆಯಲ್ಲಿ ಈ ಬಗ್ಗೆ ಮಾತನಾಡಿ, ಶ್ಲಾಘಿಸಿದರು. ಇದು ಚೇಸಿಂಗ್‌ನಲ್ಲಿ ಪ್ರಮುಖ ಜೊತೆಯಾಟ ಎಂದರು. ಇದಾದ ನಂತರ, ಎರಡನೇ ವಿಕೆಟ್‌ಗೆ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ನಡುವಿನ 168 ರನ್‌ಗಳ ಜೊತೆಯಾಟವನ್ನು ಅದ್ಭುತ ಎಂದು ಗಂಭೀರ್ ಬಣ್ಣಿಸಿದರು.
ಚೇಸಿಂಗ್ ವೇಳೆ ನಾವು ವಿಕೆಟ್ ಕಳೆದುಕೊಳ್ಳದೆ 60 ರನ್ ಗಳಿಸಿದಾಗ ಶುಭಮಾನ್ ಮತ್ತು ರೋಹಿತ್ ನಡುವಿನ ಜೊತೆಯಾಟ ತುಂಬಾ ಮುಖ್ಯವೆಂದು ನಾನು ಭಾವಿಸಿದೆ. ನಂತರ ರೋಹಿತ್ ಮತ್ತು ವಿರಾಟ್ ನಡುವಿನ ಜೊತೆಯಾಟ ಮತ್ತೆ ಅತ್ಯುತ್ತಮವಾಗಿತ್ತು. ಇಲ್ಲಿ ಶತಕ ಗಳಿಸಿದ ರೋಹಿತ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅತ್ಯಂತ ಮುಖ್ಯವಾದ ವಿಷಯವೆಂದರೆ ರೋಹಿತ್ ಮತ್ತು ಕೊಹ್ಲಿ ಸುಲಭವಾಗಿ ಪಂದ್ಯವನ್ನು ಮುಗಿಸಿದರು ಎಂದು ಗಂಭೀರ್ ಹೇಳಿದರು.
ರೋಹಿತ್ ಮತ್ತು ಕೊಹ್ಲಿ ಪಂದ್ಯವನ್ನು ಅಜೇಯವಾಗಿ ಮುಗಿಸಿದ್ದಕ್ಕೆ ಗಂಭೀರ್ ಸಂತೋಷ ವ್ಯಕ್ತಪಡಿಸಿದರು. ತಂಡದ ದೃಷ್ಟಿಕೋನದಿಂದಲೂ ಇದು ಬಹಳ ಮುಖ್ಯವಾದ ವಿಷಯ ಎಂದು ನಾನು ಭಾವಿಸಿದೆ. ರೋಹಿತ್ ಮತ್ತು ಕೊಹ್ಲಿ ಹೇಗೆ ಚೇಸ್ ಮಾಡಬೇಕೆಂಬುದನ್ನು ನಮಗೆ ತೋರಿಸಿದ್ದಾರೆ ಎಂದು ಗಂಭೀರ್ ಹೊಗಳಿದರು.
ಅಂದಹಾಗೆ, ಕೊಹ್ಲಿ ಮತ್ತು ರೋಹಿತ್ ಇಬ್ಬರಿಗೂ ಇದು ಕೊನೆಯ ಆಸ್ಟ್ರೇಲಿಯಾ ಪ್ರವಾಸವಾಗಬಹುದು. ಏಕೆಂದರೆ, 2027ರ ವಿಶ್ವಕಪ್ವರೆಗೂ ಆಸ್ಟ್ರೇಲಿಯಾ ಜತೆ ಏಕದಿನ ಸರಣಿ ಇಲ್ಲ. ವಿಶ್ವಕಪ್ ಮುಗಿದ ಬಳಿಕ ರೋಕೊ ಜೋಡಿ ಜತೆಯಾಗಿ ನಿವೃತ್ತಿ ಘೋಷಣೆ ಮಾಡಬಹುದು. ಅದ್ಯ ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಅಂತ್ಯದಲ್ಲಿದೆ. ಭಾರತವು ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ರೋ-ಕೊ ಜೋಡಿಯನ್ನು ಮತ್ತೆ ಮೈದಾನದಲ್ಲಿ ಕಣ್ತುಂಬಿಕೊಳ್ಳಬಹುದು. (ಏಜೆನ್ಸೀಸ್)