ಕ್ರೀಡೆ

ರೋಹಿತ್​​, ಕೊಹ್ಲಿ ಎಲ್ಲಿವರೆಗೆ ತಂಡದಲ್ಲಿರುತ್ತಾರೆ? ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಗೌತಮ್​ ಗಂಭೀರ್!

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯವಾದ ಟಿ20 ವಿಶ್ವಕಪ್​ನಲ್ಲಿ ಗೆದ್ದು ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ಟೀಮ್​ ಇಂಡಿಯಾ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಕನಸನ್ನು ನನಸು ಮಾಡಿಕೊಂಡಿತು. ಇದೇ ಖುಷಿಯಲ್ಲಿ ನಾಯಕ ರೋಹಿತ್ ಶರ್ಮ ಮತ್ತು ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಫಾರ್ಮ್ಯಾಟ್​ಗೆ ನಿವೃತ್ತಿ ಘೋಷಿಸಿದರು. ಇದು ಅನೇಕ ಕ್ರೀಡಾಭಿಮಾನಿಗಳಿಗೆ ತುಂಬಾ ಬೇಸರ ತರಿಸಿತು. ಇನ್ನು ಹಲವು ವರ್ಷಗಳ ಕಾಲ ಆಡುವ ಸಾಮರ್ಥ್ಯವಿದ್ದರೂ ಇಷ್ಟು ಬೇಗ ನಿವೃತ್ತಿ ಅವಶ್ಯಕತೆ ಇರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಟಿ20 ಪಂದ್ಯಗಳನ್ನು ಬಿಟ್ಟು ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಮುಂದುವರಿಯುವುದಾಗಿ ಕೊಹ್ಲಿ ಮತ್ತು ರೋಹಿತ್​ ಹೇಳಿದ್ದಾರೆ. ಆದರೆ, ಎಷ್ಟು ದಿನ ಮುಂದುವರಿಯಲಿದ್ದಾರೆ ಎಂಬುದರ ಬಗ್ಗೆ ಕ್ರಿಕೆಟ್ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಅದರಲ್ಲೂ ನೂತನ ಹೆಡ್​ ಕೋಚ್ ಗೌತಮ್ ಗಂಭೀರ್ ಯುವ ಕ್ರಿಕೆಟಿಗರಿಗೆ ಹೆಚ್ಚು ಪ್ರಾಧಾನ್ಯತೆ ನೀಡುವ ವ್ಯಕ್ತಿಯಾಗಿದ್ದು, ಅವರು ಆಟಗಾರರ ಸ್ಟಾರ್ ಡಮ್ ಮತ್ತು ವೈಯಕ್ತಿಕ ದಾಖಲೆಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹ ವ್ಯಕ್ತಿ ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿರುವುದರಿಂದ ರೋಹಿತ್ ಮತ್ತು ಕೊಹ್ಲಿ ಹೆಚ್ಚು ದಿನ ಟೀಮ್ ಇಂಡಿಯಾದಲ್ಲಿ ಇರುವುದಿಲ್ಲ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಅಲ್ಲದೆ, ಕೊಹ್ಲಿ ಮತ್ತು ಗಂಭೀರ್​ ನಡುವೆ ವೈಮನಸ್ಸು ಇರುವುದು ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಕೊಹ್ಲಿ ಕ್ರಿಕೆಟ್​ ಕೆರಿಯರ್​ ಮುಗಿಯಿತು ಎಂದು ಎಲ್ಲರು ಭಾವಿಸಿದ್ದಾರೆ. ಆದರೆ, ಇದೀಗ ಗಂಭೀರ್​ ಅವರು ಕೊಹ್ಲಿ ಮತ್ತು ರೋಹಿತ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಹೆಡ್​ ಕೋಚ್ ಆಗಿ ನೇಮಕಗೊಂಡ ನಂತರ ಗೌತಮ್ ಗಂಭೀರ್ ಅವರು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರೊಂದಿಗೆ ಇಂದು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಮುಖ್ಯ ಕೋಚ್ ಆಗಿ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಟೀಮ್ ಇಂಡಿಯಾದಲ್ಲಿ ಎಷ್ಟು ದಿನ ಇರುತ್ತಾರೆ ಎಂಬುದನ್ನು ಬಹಿರಂಗಪಡಿಸಿದರು. ರೋಹಿತ್ ಮತ್ತು ಕೊಹ್ಲಿ ವಿಶ್ವದರ್ಜೆಯ ಆಟಗಾರರು ಮತ್ತು ಯಾವುದೇ ತಂಡವು ಇಬ್ಬರನ್ನೂ ಆಡಲು ಬಯಸುತ್ತದೆ ಎಂದು ಗಂಭೀರ್ ಹೇಳಿದ್ದಾರೆ. ಟೀಮ್​ ಇಂಡಿಯಾಗೆ ಈ ಇಬ್ಬರು ಅತ್ಯಂತ ಪ್ರಮುಖ ಆಟಗಾರರು. ಮುಂಬರುವ ಚಾಂಪಿಯನ್ಸ್ ಟ್ರೋಫಿ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಇಬ್ಬರೂ ಆಡಲಿದ್ದಾರೆ ಎಂದು ಗಂಭೀರ್​ ಸ್ಪಷ್ಟಪಡಿಸಿದ್ದಾರೆ.

ಕ್ರಿಕೆಟ್ ಅಭಿಮಾನಿಗಳೆಲ್ಲ ಕುತೂಹಲದಿಂದ ಕಾಯುತ್ತಿರುವ ವಿಷಯಕ್ಕೆ ಗಂಭೀರ್ ಕೂಡ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ವರೆಗೆ ಆಡುತ್ತಾರೆಯೇ? ಎಂಬ ಸಂದೇಹ ಎಲ್ಲರಲ್ಲಿತ್ತು. ಆ ಸಂದೇಹವನ್ನು ಗಂಭೀರ್​ ಪರಿಹರಿಸಿದ್ದಾರೆ. ವಿಶ್ವಕಪ್​ವರೆಗೆ ಇಬ್ಬರೂ ತಮ್ಮ ಫಿಟ್​ನೆಸ್​ ಅನ್ನು ಉಳಿಸಿಕೊಂಡರೆ 2027ರ ವಿಶ್ವಕಪ್​ನಲ್ಲೂ ಇಬ್ಬರು ಭಾಗಿಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಇದು ನನ್ನ ವೈಯಕ್ತಿಕ ನಿರ್ಧಾರ. ಆದರೆ, ಅವರಲ್ಲಿ ಎಷ್ಟು ಕ್ರಿಕೆಟ್ ಉಳಿದಿದೆ ಎಂದು ನಾನು ಹೇಳಲಾರೆ. ಅಂತಿಮವಾಗಿ ತಂಡದ ಯಶಸ್ಸಿಗೆ ಅವರು ಎಷ್ಟು ಕೊಡುಗೆ ನೀಡಬಹುದು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಗಂಭೀರ್​ ಹೇಳಿದರು. (ಏಜೆನ್ಸೀಸ್​)