ನವದೆಹಲಿ: ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕಳೆದ ಒಂದು ತಿಂಗಳಿಂದ ಎಲ್ಲರಲ್ಲೂ ಮನೆ ಮಾಡಿತ್ತು. ಅಭಿಮಾನಿಗಳ ಜೊತೆಗೆ, ಮಾಜಿ ಕ್ರಿಕೆಟಿಗರು ಮತ್ತು ಕ್ರೀಡಾ ತಜ್ಞರು ಕೂಡ ಈ ವಿಷಯದ ಬಗ್ಗೆ ತುಂಬಾ ಆಸಕ್ತಿ ತೋರಿಸಿದ್ದರು. ಕೊನೆಗೂ ಕುತೂಹಲಕ್ಕೆ ತೆರೆಬಿದ್ದಿದ್ದು, ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ದಿಗ್ಗಜ ಆಟಗಾರ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ.
ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧ ಆರಂಭವಾಗುವ ಸರಣಿಯಲ್ಲಿ ಗಂಭೀರ್ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇದಾದ ಬಳಿಕ 2025ರಲ್ಲಿ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, 2026ರಲ್ಲಿ ಟಿ20 ವಿಶ್ವಕಪ್, 2027ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಏಕದಿನ ವಿಶ್ವಕಪ್ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆಗಳತ್ತ ಗಂಭೀರ್ ಗಮನಹರಿಸಿದ್ದು, ಟೀಮ್ ಇಂಡಿಯಾದಲ್ಲಿ ಹೊಸ ಅಧ್ಯಾಯ ಆರಂಭಿಸಲು ಗೌತಿ ಮುಂದಾಗಿದ್ದಾರೆ. ಆದರೆ, ಗೌತಮ್ ಬೇಡಿಕೆಗಳಿಗೆ ಬಿಸಿಸಿಐ ಸೊಪ್ಪು ಹಾಕದ ಕಾರಣ ಇದೀಗ ಮತ್ತೊಂದು ವಿಚಾರಕ್ಕೆ ಗೌತಮ್ ಗಂಭೀರ್ ಸುದ್ದಿಯಾಗಿದ್ದಾರೆ.
ಟಿ20 ವಿಶ್ವಕಪ್ ಮುಗಿದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಚುಟುಕು ಮಾದರಿಗೆ ವಿದಾಯ ಘೋಷಿಸಿದ್ದರು. ರೋಹಿತ್ ವಿದಾಯದ ಬೆನ್ನಲ್ಲೇ ತಂಡದ ನೂತನ ಸಾರಥಿ ಯಾರಾಗಲಿದ್ದಾರೆ ಎಂಬ ಸುದ್ದಿ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರಲು ಶುರು ಮಾಡಿತ್ತು. ಟಿ20 ನಾಯಕತ್ವಕ್ಕೆ ಸೂರ್ಯಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಪೈಪೋಟಿ ಏರ್ಪಟ್ಟಿದ್ದು, ಆಯ್ಕೆ ಸಮಿತಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ, ಕೇಳಿ ಬಂದಿರುವ ಮಾಹಿತಿ ಪ್ರಕಾರ ಆಯ್ಕೆ ಸಮಿತಿ ಸದಸ್ಯರು ಹಾರ್ದಿಕ್ರನ್ನು ಕ್ಯಾಪ್ಟನ್ ಮಾಡಲು ಆಸಕ್ತಿ ತೋರುತ್ತಿದ್ದು, ಇದಕ್ಕೆ ಗೌತಮ್ ಗಂಭೀರ್ ಅಡ್ಡಗಾಲು ಹಾಕಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.
ಇದನ್ನೂ ಓದಿ: ಉತ್ಸವದಲ್ಲಿ ಡೋಲು ಬಾರಿಸಲಿಲ್ಲವೆಂದು ದಲಿತ ಕುಟುಂಬಗಳಿಗೆ ಊರಿಂದಲೇ ಬಹಿಷ್ಕಾರ ಹಾಕಿದ ಪಂಚಾಯ್ತಿ ಸದಸ್ಯರು
ನಾಯಕನ ಆಯ್ಕೆ ವಿಚಾರವಾಗಿ ನೂತನ ಕೋಚ್ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯಗಳಲ್ಲಿ ಕೆಲ ಮುಖ್ಯ ವಿಷಯಗಳನ್ನು ಆಯ್ಕೆ ಸಮಿತಿಯ ಮುಂದಿಟ್ಟಿದ್ದಾರೆ. ಸೂರ್ಯಕುಮಾರ್ ಯಾದವ್ರನ್ನು ನಾಯಕನನ್ನಾಗಿ ನೇಮಿಸಲು ಗೌತಮ್ ಹೆಚ್ಚು ಉತ್ಸುಕರಾಗಿದ್ದು, ಹಾರ್ದಿಕ್ ಪಾಂಡ್ಯರನ್ನು ನೇಮಿಸದಂತೆ ಒತ್ತಡ ಹೇರಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕನಾದರೆ, ಅವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ಆತನ ಫಿಟ್ನೆಸ್ ತಂಡಕ್ಕೆ ದೊಡ್ಡ ತಲೆನೋವಾಗಿದ್ದು, ಹೀಗಾಗಿ ಟೀಮ್ ಇಂಡಿಯಾ ಪರ ಖಾಯಂ ಆಗಿ ಕಾಣಿಸಿಕೊಳ್ಳುವ ಆಟಗಾರನಿಗೆ ನಾಯಕತ್ವ ನೀಡುವಂತೆ ಗಂಭೀರ್ ಆಯ್ಕೆ ಸಮಿತಿ ಮೇಲೆ ಒತ್ತಡ ಹೇರಿದ್ದಾರೆ.
ಇದೇ ಕಾರಣದಿಂದಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಟೀಮ್ ಇಂಡಿಯಾ ಟಿ20 ತಂಡದ ನಾಯಕನಾಗಿ ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಮುಂದಾಗಿದೆ ಎಂದು ವರದಿಗಳು ಹೇಳಿವೆ. ಭಾರತ ತಂಡದ ನಾಯಕನ ನೇಮಕದಲ್ಲಾದ ಕೊನೆಯ ಕ್ಷಣದ ಬದಲಾವಣೆಯ ಬಗ್ಗೆ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಹಾರ್ದಿಕ್ ಪಾಂಡ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆದೆ. ಇದೇ ವೇಳೆ ಪಾಂಡ್ಯಗೆ ನಾಯಕತ್ವದ ಬದಲಾವಣೆ ಏಕೆ ಎಂಬುದನ್ನು ಮನವರಿಕೆ ಮಾಡಿಕೊಡಲು ಗಂಭೀರ್ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.