ಕ್ರೀಡೆ

ಆ ಒಂದು ರಿಸ್ಕ್​ ತೆಗೆದುಕೊಳ್ಳಲು ಗೌತಿಗೆ ಹೆದರಿಕೆ! ಬಿಸಿಸಿಐ ಬೆಂಬಲವಿದ್ರು ಗಂಭೀರ್​ಗೆ ಕಾಡುತ್ತಿರುವ ಭಯವೇನು?

ನವದೆಹಲಿ: ಟೀಮ್​ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್​ ಗಂಭೀರ್ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ. ಶ್ರೀಲಂಕಾ ಸರಣಿಯೊಂದಿಗೆ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ಗೌತಿ, ನಿನ್ನೆ (ಜುಲೈ 22) ನಡೆದ ಪತ್ರಿಕಾಗೋಷ್ಠಿಯಲ್ಲಿ ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿದರು. ಅಗ್ರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯೊಂದಿಗಿನ ಬಾಂಧವ್ಯದಿಂದ ಹಿಡಿದು ಸೂರ್ಯಕುಮಾರ್ ಯಾದವ್ ನಾಯಕತ್ವದವರೆಗೆ ಮತ್ತು ರವೀಂದ್ರ ಜಡೇಜಾ ಅವರನ್ನು ತಂಡದಿಂದ ಕೈಬಿಡುವುದರಿಂದ ಹಿಡಿದು ಏಕದಿನ ವಿಶ್ವಕಪ್-2027 ಕುರಿತಂತೆ ಅನೇಕ ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಿದರು.

ವಿರಾಟ್​ ಕೊಹ್ಲಿ ಜತೆ ನನಗೆ ಉತ್ತಮ ಬಾಂಧವ್ಯವಿದೆ ಎಂದ ಗೌತಿ, ಸೂರ್ಯಕುಮಾರ್ ಟಿ20ಗೆ ಮಾತ್ರ ಸೀಮಿತ ಮತ್ತು ನಾಯಕನಾಗಿ ಯಶಸ್ವಿಯಾಗುತ್ತಾರೆಂದು ಭಾವಿಸುತ್ತೇನೆ ಎಂದರು. ಜಡೇಜಾ ಬಗ್ಗೆ ಮಾತನಾಡುತ್ತಾ ಅವರನ್ನು ಏಕದಿನ ಮಾದರಿ ಪಂದ್ಯದಿಂದ ತೆಗೆದುಹಾಕಿಲ್ಲ. ಏಕದಿನ ಹಾಗೂ ಟೆಸ್ಟ್‌ ಪಂದ್ಯಗಳಲ್ಲಿ ತಂಡಕ್ಕೆ ಜಡೇಜಾ ಸೇವೆಯ ಅಗತ್ಯವಿದೆ. ಅವರು ಬಹಳ ಪ್ರಮುಖ ಆಟಗಾರ ಎಂದು ಗಂಭೀರ್​ ಹೇಳಿದರು.

ಯಂಗ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರು ಎಲ್ಲ ಮೂರು ಸ್ವರೂಪಗಳಲ್ಲಿ ಆಡಲಿದ್ದಾರೆ. ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಸಿಗದಿರಲು ಫಿಟ್ನೆಸ್ ಸಮಸ್ಯೆಯೇ ಕಾರಣ ಎಂದು ಗೌತಿ ಸ್ಪಷ್ಟಪಡಿಸಿದರು. ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಬಾಂಗ್ಲಾದೇಶದ ಸರಣಿಯೊಂದಿಗೆ ಪುನರಾಗಮನ ಮಾಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದರು.

ಗಂಭೀರ್​ ಅವರು ಹಲವು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಿದರು. ಯಾವುದೇ ಹಿಂಜರಿಕೆಯಿಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಆದರೆ, ಒಂದು ವಿಷಯದ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದರು. ಅದೇನೆಂದರೆ ಟೀಮ್​ ಇಂಡಿಯಾದಲ್ಲಿ ಮೂರು ಸ್ವರೂಪಗಳಿಗೆ 3 ವಿಭಿನ್ನ ತಂಡಗಳನ್ನು ನೇಮಕ ಮಾಡಲು ಗೌತಿ ಮುಂದಾಗಿದ್ದರು ಎಂದು ತಿಳಿದುಬಂದಿದೆ. ಬಿಸಿಸಿಐ ಮುಂದೆ ಪ್ರತಿ ಫಾರ್ಮೆಟ್‌ಗೆ ಪ್ರತ್ಯೇಕ ತಂಡ ಇರಬೇಕು ಎಂದು ಗಂಭೀರ್ ಕೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದಾಗ ಅವರು ನೇರ ಉತ್ತರ ನೀಡಲಿಲ್ಲ.

ಪ್ರೆಸ್​ಮೀಟ್​ನಲ್ಲಿ ಹಲವು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಿರುವ ಗಂಭೀರ್, ಮೂರು ಮಾದರಿಯ ಮೂರು ತಂಡಗಳ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಸೂರ್ಯಕುಮಾರ್​ರನ್ನು ಸಿಂಗಲ್ ಫಾರ್ಮೆಟ್‌ಗೆ ಸೀಮಿತಗೊಳಿಸಿದ ಗೌತಿ, ಉಳಿದ ಹಿರಿಯರ ವಿಚಾರದಲ್ಲಿ ಅಂತಹ ನಿರ್ಧಾರ ತೆಗೆದುಕೊಳ್ಳುವ ಧೈರ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಪ್ರತಿ ಫಾರ್ಮ್ಯಾಟ್‌ಗೆ ಪ್ರತ್ಯೇಕ ತಂಡದ ಕಲ್ಪನೆಯನ್ನು ಕೈಬಿಡುತ್ತಿದ್ದಾರೆ. ರೋಹಿತ್, ಕೊಹ್ಲಿ, ಬುಮ್ರಾ, ಗಿಲ್ ಮತ್ತು ಪಂತ್ ಹೇಗಿದ್ದರೂ ಎಲ್ಲಾ ಫಾರ್ಮೆಟ್‌ಗಳಲ್ಲಿ ಆಡುತ್ತಾರೆ. ಇತರರ ಫಿಟ್ನೆಸ್ ಮತ್ತು ಫಾರ್ಮ್ಯಾಟ್ ಹೊಂದಾಣಿಕೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ ಗೌತಿ ಈ ನಿರ್ಧಾರ ಕೈಬಿಟ್ಟಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಬಿಸಿಸಿಐ ಬೆಂಬಲವಿದ್ದರೂ ಈ ರಿಸ್ಕ್​ ಯಾಕೆ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ಮೂಡಿದೆ. ಬಹುಶಃ ಗೌತಿ ಭಯ ಕಾಡಿರಬಹುದು. (ಏಜೆನ್ಸೀಸ್​)