ನವದೆಹಲಿ: ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಕ್ರಿಕೆಟ್ ತಂಡಗಳು ವಿಜಯ್ ಹಜಾರೆ ಟ್ರೋಫಿಯ ಕ್ವಾಟರ್ರ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ವಿಶ್ವದಾಖಲೆಯೊಂದ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಬ್ಯಾಟ್ಸ್ಮನ್ ಋತುರಾಜ್ ಗಾಯಕ್ವಾಡ್ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. 159 ಎಸೆತಗಳಲ್ಲಿ ಅಜೇಯ 220 ರನ್ ಸಿಡಿಸಿದ್ದಾರೆ.
ಅದರಲ್ಲೂ ಇನ್ನಿಂಗ್ಸ್ನ 49ನೇ ಓವರ್ನಲ್ಲಿ ಒಂದರ ಹಿಂದೆ ಒಂದರಂತೆ 7 ಸಿಕ್ಸರ್ ಸಿಡಿಸಿ ಮಿಂಚಿದರು. ನೋ ಬಾಲ್ ಎಸೆತದಲ್ಲೂ ಸಿಕ್ಸರ್ ಸಿಡಿಸಿ, ಒಂದೇ ಓವರ್ನಲ್ಲಿ 43 ರನ್ ಗಳಿಸಿದರು. ಉತ್ತರ ಪ್ರದೇಶದ ವೇಗಿ ಶಿವಂ ಸಿಂಗ್ ಅವರ ಓವರ್ನಲ್ಲಿ ಋತುರಾಜ್ ಗಾಯಕ್ವಾಡ್ 7 ಸಿಕ್ಸರ್ ಸಿಡಿಸುವ ಮೂಲಕ ಮಿಂಚಿದರು. ಈ ಮೂಲಕ ಒಂದೇ ಓವರ್ನಲ್ಲಿ 7 ಸಿಕ್ಸರ್ ಸಿಡಿಸಿದ ದಾಖಲೆಯನ್ನು ಋತುರಾಜ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಅಹಮದಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ತಂಡ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 330 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ಗಾಯಕ್ವಾಡ್ ಇನ್ನಿಂಗ್ಸ್ನಲ್ಲಿ ಒಟ್ಟು 10 ಬೌಂಡರಿ ಹಾಗೂ 16 ಸಿಕ್ಸರ್ ಸಿಡಿಸಿದರು. ಈ ಮೂಲಕ ಋತುರಾಜ್ ತಮ್ಮ ದ್ವಿಶತಕದ ಆಟದಲ್ಲಿ 136 ರನ್ಗಳನ್ನು ಬೌಂಡರಿ, ಸಿಕ್ಸರ್ ಮೂಲಕ ಕಲೆ ಹಾಕಿದರು. (ಏಜೆನ್ಸೀಸ್)