ಕ್ರೀಡೆ

ಪಿಂಕ್ ಟೆಸ್ಟ್ ಪಿಚ್ ಬಗ್ಗೆ ಪರ-ವಿರೋಧದ ಚರ್ಚೆ, ಇಂಥ ಪಿಚ್ ಬೇಡವೆಂದ ಫ್ಯಾನ್ಸ್!

ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಹರ್ನಿಶಿ ಟೆಸ್ಟ್‌ನಲ್ಲಿ ಭಾರತ ತಂಡ ಎರಡೇ ದಿನಗಳಲ್ಲಿ ಜಯಿಸಿದ ಬೆನ್ನಲ್ಲೇ ಮೊಟೆರಾ ಕ್ರೀಡಾಂಗಣದ ಪಿಚ್ ಬಗ್ಗೆ ಬಿಸಿಬಿಸಿ ಚರ್ಚೆಗಳು ಶುರುವಾಗಿವೆ. ಇಂಥ ಪಿಚ್‌ಗಳು ಟೆಸ್ಟ್ ಕ್ರಿಕೆಟ್‌ಗೆ ಮಾರಕ ಎಂಬ ವಾದದ ನಡುವೆ, ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡುವ ಇಂಥ ಪಿಚ್‌ಗಳೂ ಅಗತ್ಯ ಎಂಬ ಬೆಂಬಲವೂ ವ್ಯಕ್ತವಾಗಿದೆ. ಈ ನಡುವೆ ಉಭಯ ತಂಡಗಳ ನಾಯಕರು, ಪಿಚ್ ಬಗ್ಗೆ ಯಾವುದೇ ತಕರಾರು ಎತ್ತಿಲ್ಲ. ಬದಲಾಗಿ ನಮ್ಮ ಬ್ಯಾಟ್ಸ್‌ಮನ್‌ಗಳೇ ಗುಣಮಟ್ಟದ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ ಎಂದು ದೂರಿದ್ದಾರೆ. ಆದರೆ ಕ್ರಿಕೆಟ್ ಪ್ರೇಮಿಗಳು ಮಾತ್ರ ಎರಡೇ ದಿನಕ್ಕೆ ಟೆಸ್ಟ್ ಮುಗಿಯುವಂಥ ಪಿಚ್‌ಗಳು ನಮಗೆ ಬೇಕಿಲ್ಲ ಎಂದಿದ್ದಾರೆ.

ಭಾರತ ತಂಡದ ಗೆಲುವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್ ಪ್ರವೇಶದ ಹಾದಿ ಸುಗಮಗೊಳಿಸಿದೆ. ಎರಡೇ ದಿನಗಳಲ್ಲಿ ಮುಗಿದರೂ, ಉಭಯ ತಂಡಗಳ ಎರಡು ಇನಿಂಗ್ಸ್‌ನಲ್ಲೂ ಆಟ ನಡೆದ ಅಪರೂಪದ ಪಂದ್ಯ ಇದಾಗಿದೆ. 1935ರ ಬಳಿಕ ಅತ್ಯಂತ ಕಡಿಮೆ ಎಸೆತಗಳಲ್ಲಿ ಫಲಿತಾಂಶ ಕಂಡ ಟೆಸ್ಟ್ ಇದಾಗಿದೆ. ಪಂದ್ಯದಲ್ಲಿ ಕೇವಲ 842 ಎಸೆತ ಅಂದರೆ 140.2 ಓವರ್‌ಗಳಷ್ಟೇ ಆಟ ನಡೆಯಿತು. ಒಟ್ಟಾರೆ 7ನೇ ಅತಿಚಿಕ್ಕ ಟೆಸ್ಟ್ ಪಂದ್ಯ ಇದಾಗಿದೆ. ಅಲ್ಲದೆ ಏಷ್ಯಾದಲ್ಲಿ ಫಲಿತಾಂಶ ಕಂಡ ಟೆಸ್ಟ್‌ನಲ್ಲಿ ಕನಿಷ್ಠ ರನ್ (837) ದಾಖಲಾಯಿತು ಮತ್ತು ಕಳೆದ 74 ವರ್ಷಗಳಲ್ಲಿ ಇದು ಕನಿಷ್ಠ ಮೊತ್ತವಾಗಿದೆ.

ಮಾಜಿಗಳಿಂದ ಮಿಶ್ರ ಪ್ರತಿಕ್ರಿಯೆ

ಪಿಂಕ್ ಟೆಸ್ಟ್ ಪಂದ್ಯದ ಪಿಚ್ ಬಗ್ಗೆ ಭಾರತ ಮತ್ತು ವಿದೇಶದ ಮಾಜಿ ಕ್ರಿಕೆಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹರ್ಭಜನ್ ಸಿಂಗ್, ವಿವಿಎಸ್ ಲಕ್ಷ್ಮಣ್, ಯುವರಾಜ್ ಸಿಂಗ್ ಸಹಿತ ಭಾರತದ ಕೆಲ ಮಾಜಿ ಕ್ರಿಕೆಟಿಗರು ಈ ರೀತಿಯ ಪಿಚ್ ಟೆಸ್ಟ್ ಕ್ರಿಕೆಟ್‌ಗೆ ಸೂಕ್ತವಲ್ಲ ಎಂದಿದ್ದಾರೆ. ಆದರೆ ದಿಗ್ಗಜ ಸುನೀಲ್ ಗಾವಸ್ಕರ್ ಪಿಚ್ ಬಗ್ಗೆ ಸಮರ್ಥಿಸಿಕೊಂಡಿದ್ದು, ಬ್ಯಾಟ್ಸ್‌ಮನ್‌ಗಳೇ ಸರಿಯಾಗಿ ಆಡಲಿಲ್ಲ. ಹಲವರು ನೇರವಾದ ಎಸೆತಗಳಿಗೇ ಔಟ್ ಆಗಿದ್ದು ಇದಕ್ಕೆ ಪುಷ್ಠಿ ಎಂದಿದ್ದಾರೆ. ಅಲ್ಲದೆ ರೋಹಿತ್ ಶರ್ಮ, ಜಾಕ್ ಕ್ರೌಲಿ ಇದೇ ಪಿಚ್‌ನಲ್ಲಿ ಅರ್ಧಶತಕ ಸಿಡಿಸಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಭಾರತ ತಂಡವೇ ಮೊದಲ ಇನಿಂಗ್ಸ್‌ನಲ್ಲಿ 145 ರನ್‌ಗೆ ಆಲೌಟ್ ಆಯಿತು. ಹೀಗಾಗಿ ಇದು ಟೆಸ್ಟ್‌ಗೆ ಸೂಕ್ತ ಪಿಚ್ ಅಲ್ಲ ಎಂದು ವಿವಿಎಸ್ ಹೇಳಿದ್ದರೆ, ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 200 ರನ್ ಗಳಿಸಿದ್ದರೆ ಭಾರತವೇ ಸಂಕಷ್ಟಕ್ಕೆ ಸಿಲುಕುತ್ತಿತ್ತು ಎಂದು ಹರ್ಭಜನ್ ಹೇಳಿದ್ದಾರೆ. ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಈ ರೀತಿಯ ಪಿಚ್‌ಗಳಲ್ಲಿ ಆಡಿದ್ದರೆ ಸಾವಿರ, 800 ವಿಕೆಟ್‌ಗಳ ಸರದಾರರಾಗುತ್ತಿದ್ದರು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್, ಈ ರೀತಿಯ ಪಿಚ್‌ಗಳಲ್ಲಿ ಟೆಸ್ಟ್ ಪಂದ್ಯ ಆಡುವುದಾದರೆ ತಲಾ 3 ಇನಿಂಗ್ಸ್‌ಗಳಿರಬೇಕು ಎಂದು ಕಾಲೆಳೆದಿದ್ದಾರೆ. ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್, ಇಂಗ್ಲೆಂಡ್ ತಂಡ ಈ ರೀತಿಯ ಪಿಚ್‌ನಲ್ಲಿ ಕೇವಲ ಓರ್ವ ಸ್ಪಿನ್ನರ್‌ನೊಂದಿಗೆ ಆಡಿದ ನಿರ್ಧಾರವನ್ನು ಟೀಕಿಸಿದ್ದಾರೆ. ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸೆನ್, ಸರಣಿಯ ಒಂದು ಟೆಸ್ಟ್ ಪಂದ್ಯಕ್ಕೆ ಈ ರೀತಿಯ ಪಿಚ್‌ಗಳಿದ್ದರೆ ಓಕೆ. ಯಾಕೆಂದರೆ ಇದು ಬ್ಯಾಟ್ಸ್‌ಮನ್‌ಗಳ ಕೌಶಲಕ್ಕೆ ಸವಾಲೊಡ್ಡುತ್ತದೆ. ಆದರೆ ಮತ್ತೆ ಮತ್ತೆ ಇಂಥ ಪಿಚ್‌ಗಳಲ್ಲಿ ಆಡಬಾರದು ಎಂದಿದ್ದಾರೆ.

ಕ್ರಿಕೆಟ್ ಪ್ರೇಮಿಗಳ ಅಸಮಾಧಾನ

ಪಂದ್ಯದಲ್ಲಿ ಉರುಳಿದ 30 ವಿಕೆಟ್‌ಗಳ ಪೈಕಿ 28 ಸ್ಪಿನ್ನರ್‌ಗಳ ಪಾಲಾದವು. 2ನೇ ದಿನದಾಟದಲ್ಲೇ ಪಿಚ್‌ನಲ್ಲಿ ಬೌಲರ್‌ಗಳ ಹೆಜ್ಜೆ ಗುರುತಿನಿಂದ ಗುಂಡಿಗಳು ಬಿದ್ದಿದ್ದವು. ಗ್ರೌಂಡ್ ಸಿಬ್ಬಂದಿ ಆಗಾಗ ಬಂದು ಪಿಚ್ ಸಮತಟ್ಟುಗೊಳಿಸಬೇಕಾಯಿತು. ಬ್ಯಾಟ್ಸ್‌ಮನ್‌ಗಳು ಬ್ಯಾಟ್ ಬೀಸುವ ವೇಳೆ ಪಿಚ್‌ನಿಂದ ಮಣ್ಣು ಕೂಡ ಏಳುತ್ತಿತ್ತು. ಹೀಗಾಗಿ, ಭಾರತಕ್ಕೆ ನೆರವಾಗುವಂತಿದ್ದರೂ ಮುಂದಿನ ದಿನಗಳಲ್ಲಿ ಇಂಥ ಪಿಚ್ ನಿರ್ಮಿಸುವುದು ಬೇಡ ಎಂದು ಕ್ರಿಕೆಟ್ ಪ್ರೇಮಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ತಂಡಗಳಿಗೆ ತವರಿನ ಲಾಭ ಸಿಗಬೇಕು. ಆದರೆ ಅದನ್ನೇ ಅತಿಯಾಗಿ ಬಳಸಿಕೊಳ್ಳಬಾರದು ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಹಮದಾಬಾದ್‌ನಲ್ಲೇ ನಡೆಯಲಿರುವ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್‌ಗೆ ಈ ರೀತಿಯ ಪಿಚ್ ಬೇಡ ಎಂದೂ ಮನವಿ ಮಾಡಿಕೊಂಡಿದ್ದಾರೆ.

ತಂಡಗಳಿಂದ ಆಕ್ಷೇಪವಿಲ್ಲ

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಪಂದ್ಯದ ಬಳಿಕ ಪಿಚ್ ಬಗ್ಗೆ ಯಾವುದೇ ದೂರು ವ್ಯಕ್ತಪಡಿಸಿಲ್ಲ. ಬದಲಾಗಿ ತಮ್ಮ ತಂಡಗಳ ಕಳಪೆ ಬ್ಯಾಟಿಂಗ್ ನಿರ್ವಹಣೆಯ ಬಗ್ಗೆಯೇ ಪಂದ್ಯದ ಬಳಿಕ ಬೇಸರ ವ್ಯಕ್ತಪಡಿಸಿದರು. ‘ನಮ್ಮ ಬ್ಯಾಟಿಂಗ್ ಗುಣಮಟ್ಟದ್ದಾಗಿರಲಿಲ್ಲ. 3 ರನ್‌ಗೆ 100 ರನ್ ಗಳಿಸಿದ್ದ ನಾವು ಬಳಿಕ 150ರೊಳಗೆ ಆಲೌಟ್ ಆದೆವು. ಪಿಚ್ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಉತ್ತಮವಾಗಿಯೇ ಇತ್ತು’ ಎಂದು ಕೊಹ್ಲಿ ಹೇಳಿದರು. ಜೋ ರೂಟ್ ಕೂಡ ಸೋಲಿಗೆ ಪಿಚ್‌ಅನ್ನು ದೂರಲು ನಿರಾಕರಿಸಿದರು. ಪಿಚ್ ಸವಾಲಿನದ್ದಾಗಿತ್ತು. ಆಡಲು ಕಷ್ಟಕರವಾಗಿತ್ತು. ಆದರೆ ಪಿಚ್ ಟೆಸ್ಟ್ ಕ್ರಿಕೆಟ್‌ಗೆ ಸೂಕ್ತವಾದುದೇ ಎಂದು ನಿರ್ಧರಿಸುವುದು ಐಸಿಸಿಗೆ ಬಿಟ್ಟ ವಿಚಾರ ಎಂದರು. ಇದು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವಂಥದ್ದೇ ಪಿಚ್ ಆಗಿದೆ. ಈ ರೀತಿಯ ಪಿಚ್‌ಗಳಲ್ಲಿ ಬರೀ ಕ್ರೀಸ್‌ನಲ್ಲಿ ನಿಲ್ಲಲು ಆದ್ಯತೆ ನೀಡಬಾರದು. ರನ್ ಗಳಿಸುತ್ತಿರಬೇಕಾಗುತ್ತದೆ. ಕೆಲ ಚೆಂಡು ಟರ್ನ್ ಆಗುತ್ತವೆ. ಕೆಲ ಚೆಂಡು ಸ್ಕಿಡ್ ಆಗುತ್ತವೆ. ಇನ್ನು ಕೆಲವು ನೇರವಾಗಿ ಬರುತ್ತವೆ ಎಂದು ರೋಹಿತ್ ಹೇಳಿದ್ದಾರೆ.