ಕ್ರೀಡೆ

ಕೊಹ್ಲಿ ನಂತರ ಭಾರತದ ನಾಯಕನಾಗಲಿರುವ ಆಟಗಾರನನ್ನು ಹೆಸರಿಸಿದ ಪಾಕ್​ ಕ್ರಿಕೆಟಿಗ!

ನವದೆಹಲಿ: ಈ ಹಿಂದೆ ಎಂಎಸ್​ ಧೋನಿ ನಂತರದಲ್ಲಿ ಭಾರತ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಹೆಚ್ಚಿನವರ ಬಳಿಕ ಸ್ಪಷ್ಟ ಉತ್ತರವಿತ್ತು. ಅದುವೇ ವಿರಾಟ್​ ಕೊಹ್ಲಿ. ಆದರೆ ಇದೀಗ ವಿರಾಟ್​ ಕೊಹ್ಲಿ ನಂತರದಲ್ಲಿ ಭಾರತ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಹೆಚ್ಚಿನವರಲ್ಲಿ ಗೊಂದಲಗಳು ಏಳುತ್ತವೆ. ಈ ಸಮಯದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್​ ಬಟ್​, ಕೊಹ್ಲಿ ಉತ್ತರಾಧಿಕಾರಿಯಾಗಿ ಭಾರತ ತಂಡವನ್ನು ಮುನ್ನಡೆಸಬಹುದಾದ 3 ಆಟಗಾರರ ಹೆಸರು ಹೇಳಿದ್ದಾರೆ.

ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಅಭಿಮಾನಿಯೊಬ್ಬ ಕೇಳಿರುವ ಭಾರತ ತಂಡದ ಭವಿಷ್ಯದ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಲ್ಮಾನ್​ ಬಟ್​, ಹಿರಿಯ ಆಟಗಾರರಾದ ರೋಹಿತ್​ ಶರ್ಮ, ಅಜಿಂಕ್ಯ ರಹಾನೆ ಜತೆಗೆ ರಿಷಭ್​ ಪಂತ್​ ಕೂಡ ವಿರಾಟ್​ ಕೊಹ್ಲಿ ಉತ್ತರಾಧಿಕಾರಿ ಆಗಬಲ್ಲ ಆಟಗಾರ ಎಂದು ಹೇಳಿದ್ದಾರೆ.

ರಿಷಭ್​ ಪಂತ್​ ಅವರ ದೇಶೀಯ ಕ್ರಿಕೆಟ್​ ದಾಖಲೆಗಳ ಬಗ್ಗೆ ನನಗೆ ವಿವರವಾಗಿ ಗೊತ್ತಿಲ್ಲ. ಆದರೆ ಐಪಿಎಲ್​ನಲ್ಲಿ ನಾನು ನೋಡಿದ ಮಟ್ಟಿಗೆ, ರಿಷಭ್​ ಪಂತ್​ಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕತ್ವವನ್ನು ಒಪ್ಪಿಸಲಾಗಿದೆ. ಹೀಗಾಗಿ ಬಿಸಿಸಿಐ ಕೂಡ ಅವರ ಭವಿಷ್ಯದ ಬಗ್ಗೆ ಕೆಲವು ಯೋಜನೆಗಳನ್ನು ಹೊಂದಿರಬಹುದು ಎಂದು ಸಲ್ಮಾನ್​ ಬಟ್​ ಹೇಳಿದ್ದಾರೆ. ಜತೆಗೆ ವಿರಾಟ್​ ಕೊಹ್ಲಿ ಇನ್ನೂ ಯುವಕರಾಗಿರುವ ಕಾರಣ 8-9 ವರ್ಷಗಳ ಕಾಲ ಅವರೇ ನಾಯಕರಾಗಿ ಮುಂದುವರಿಯಬಹುದು ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ನಾಯಕರಾಗಿ 5 ಬಾರಿ ಟ್ರೋಫಿ ಜಯಿಸಿದ ಅನುಭವ ಹೊಂದಿರುವ ರೋಹಿತ್​ ಶರ್ಮ ನಾಯಕತ್ವವನ್ನೂ ಹೊಗಳಿರುವ ಸಲ್ಮಾನ್​ ಬಟ್​, ರೋಹಿತ್​ ನಾಯಕತ್ವ ನನಗಿಷ್ಟ. ಉತ್ತಮ ಕಾರ್ಯತಂತ್ರಗಳಿಂದಾಗಿ ಅವರು ಉತ್ತಮ ನಾಯಕರೆನಿಸಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ ವಿರಾಟ್​ ಕೊಹ್ಲಿ ಗೈರಿನಲ್ಲಿ ಭಾರತ ತಂಡವನ್ನು ಐತಿಹಾಸಿಕ ಸರಣಿ ಜಯದತ್ತ ಮುನ್ನಡೆಸಿದ ಅಜಿಂಕ್ಯ ರಹಾನೆಯ ನಾಯಕತ್ವದಿಂದಲೂ ಪ್ರಭಾವಿತರಾಗಿರುವ ಸಲ್ಮಾನ್​ ಬಟ್​, ರಹಾನೆ ಅವರ ನಿರ್ಧಾರಗಳಲ್ಲಿ ಸ್ಪಷ್ಟತೆ ಇರುತ್ತದೆ ಎಂದಿದ್ದಾರೆ.