ನವದೆಹಲಿ: ಭಾರತ ತಂಡದ ಮಾಜಿ ಆಟಗಾರ ಹಾಗೂ ಉತ್ತರ ಪ್ರದೇಶ ರಾಜ್ಯ ಸಂಪುಟ ಸಚಿವ ಚೇತನ್ ಚೌಹಾನ್ ಅವರಿಗೂ ಕರೊನಾ ವೈರಸ್ ಸೋಂಕು ಹರಡಿದೆ. 1970ರ ದಶಕದಲ್ಲಿ ದಿಗ್ಗಜ ಸುನೀಲ್ ಗಾವಸ್ಕರ್ ಜತೆಗೂಡಿ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದ ಚೇತನ್ ಚೌಹಾನ್, ಕೋವಿಡ್-19ರ ಸೋಂಕಿಗೆ ಒಳಗಾಗಿರುವ ಭಾರತದ ಮೊದಲ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರಾಗಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಾಗೂ ಸ್ಕಾಟ್ಲೇಂಡ್ನ ಮಜಿದ್ ಹಕ್ಗೂ ಈ ಸೋಂಕು ಹರಡಿತ್ತು. ಶನಿವಾರ ರಾತ್ರಿ ಕರೊನಾ ಸೋಂಕು ಇರುವುದು ಪತ್ತೆಯಾಗಿದೆ. ಮಾಜಿ ಆಟಗಾರರಾದ ಆಕಾಶ್ ಚೋಪ್ರಾ ಹಾಗೂ ಆರ್ಪಿ ಸಿಂಗ್ ಮಾಜಿ ಆಟಗಾರನ ಶೀಘ್ರ ಚೇತರಿಕೆಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: PHOTO | ಭಾರತ ಬಾಸ್ಕೆಟ್ಬಾಲ್ ತಂಡದ ನಾಯಕಿ ಜೀನಾ ವಿವಾಹ
ಚೇತನ್ ಚೌಹಾನ್ ಶುಕ್ರವಾರ ಕೋವಿಡ್-19ರ ಪರೀಕ್ಷೆಗೆ ಒಳಗಾಗಿದ್ದರು. ಲಖನೌದ ಸಂಜಯ್ ಗಾಂಧಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಜತೆಗೆ ಚೇತನ್ ಚೌಹಾನ್ ಅವರ ಕುಟುಂಬ ಸದಸ್ಯರನ್ನು ಕೋವಿಡ್-19ರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸದ್ಯ ಎಲ್ಲರನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಚೇತನ್ ಚೌಹಾನ್, ಸೈನಿಕರ ಕಲ್ಯಾಣ, ಹೋಮ್ ಗಾರ್ಡ್ಸ್, ಪಿಆರ್ಡಿ, ನಾಗರೀಕ ಹಿತರಣಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷದವರೆಗೂ ಕ್ರೀಡಾ ಮಂತ್ರಿಯಾಗಿದ್ದರು. ಚೌಹಾನ್, ಎರಡು ಬಾರಿ ಸಂಸದರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
1969 ರಿಂದ 1978 ರವರೆಗೆ ರಾಷ್ಟ್ರೀಯ ತಂಡದ ಪರ 40 ಟೆಸ್ಟ್ ಪಂದ್ಯಗಳನ್ನಾಡಿರುವ ಚೌಹಾನ್, ಸರಾಸರಿ 31.57 ರಂತೆ ಗರಿಷ್ಠ ಮೊತ್ತ 97 ಒಳಗೊಂಡಂತೆ 2084 ರನ್ ಗಳಿಸಿದ್ದಾರೆ. 7 ಏಕದಿನ ಪಂದ್ಯಗಳಿಂದ 153 ರನ್ ಬಾರಿಸಿದ್ದಾರೆ. ಸುನೀಲ್ ಗಾವಸ್ಕರ್ ಜತೆಗೆ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. 1970ರ ದಶಕದಲ್ಲಿ ಈ ಜೋಡಿ 3 ಸಾವಿರಕ್ಕೂ ಅಧಿಕ ಆರಂಭಿಕ ರನ್ ಗಳಿಸಿತ್ತು. ಜತೆಗೆ 10 ಬಾರಿ ಶತಕದ ಜತೆಯಾಟವಾಡಿತ್ತು.