ನವದೆಹಲಿ: 09ನೇ ಆವೃತ್ತಿಯ ಟಿ20 ವಿಶ್ವಕಪ್ ಸಮರ ಆರಂಭವಾಗುವುದಕ್ಕೂ ಮುಂಚೆಯಿಂದಲೇ ಸುದ್ದಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಕಳಪೆ ಪ್ರದರ್ಶನದಿಂದ ಟೂರ್ನಿಯಿಂದ ಹೊರಬೀಳುತ್ತದೆ ಎಂಬ ಮುನ್ಸೂಚನೆಯನ್ನು ಮೊದಲೇ ನೀಡಿತ್ತು. ಅದರಂತೆ ಕ್ರಿಕೆಟ್ ಶಿಶು ಯುಎಸ್ಎ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸೋಲುವ ಮೂಲಕ ಅಪಹಾಸ್ಯಕ್ಕೆ ಗುರಿಯಾಗಿದ್ದ ಪಾಕಿಸ್ತಾನ ತಂಡಕ್ಕೀಗ ಸಂಕಷ್ಟ ಎದುರಾಗಿದ್ದು ನಾಯಕ ಮತ್ತು ಆಟಗಾರರ ತಲೆದಂಡವಾಗಬಹುದು ಎಂದು ಹೇಳಲಾಗಿದೆ.
ಈಚೆಗೆ ಐರ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಪಾಕ್ ನಾಯಕ ಬಾಬರ್ ಅಜಂ ನಾವು ತಂಡವಾಗಿ ಆಡಲಿಲ್ಲ ಎಂದು ಹೇಳುವ ಮೂಲಕ ಪಾಕ್ ಕ್ರಿಕೆಟ್ ಟೀಮ್ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಆತ ನಾಯಕನಲ್ಲ ತಂಡದಲ್ಲಿ ಸ್ಥಾನ ಪಡೆಯಲು ಅರ್ಹನಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಪವಿತ್ರಾ ಹೆಸರಲ್ಲಿ ಮೆಸ್ಸೇಜ್ ಮಾಡಿದ್ದು ಮನೆ ಕೆಲಸದವನಂತೆ!; ವಿಚಾರಣೆಯಲ್ಲಿ ಬೆಳಕಿಗೆ ಬಂತು ಸ್ಫೋಟಕ ಅಂಶ
ಈ ಕುರಿತು ಮಾತನಾಡಿರುವ ಸೆಹ್ವಾಗ್, ನಾ ನೋಡಿದಂತೆ ಬಾಬರ್ ಅಜಂ ಸ್ಪಿನ್ನರ್ಗಳಿಗೆ ಮಾತ್ರ ಸಿಕ್ಸರ್ ಹೊಡೆಯುವ ಆಟಗಾರ. ಈವರೆಗೆ ನಾನು ಕಂಡಂತೆ ವೇಗಿಗಳ ಎದುರಿಗೆ ಆತ ಹೆಚ್ಚು ರನ್ ಗಳಿಸಿದ್ದನ್ನು ನೋಡಿಲ್ಲ. ಈ ರೀತಿ ಆಡುವುದು ನನ್ನ ಪ್ರಕಾರ ಸರಿಯಲ್ಲ. ಆತ ಎಷ್ಟೇ ರನ್ ಗಳಿಸಿ ದಾಖಲೆ ಬರೆದರೂ ಸ್ಟ್ರೈಕ್ರೇಟ್ ಉತ್ತಮವಾಗಿರುವುದಿಲ್ಲ.
ನಾಯಕನಾಗಿ ತಂಡದ ಪರವಾಗಿ ಉಪಯುಕ್ತ ಆಟವಾಡಿದರೆ ಸೂಕ್ತ. ಇಲ್ಲವಾದಲ್ಲಿ ನಿನ್ನ ಬದಲು ಬೇರೆ ಅವರನ್ನು ಕಳುಹಿಸುವ ಮೂಲಕ ತಂಡಕ್ಕೆ ಸಹಕಾರಿಯಾಗು. ಬಾಬರ್ ಪಾಕ್ ತಂಡದ ನಾಯಕನಾಗಲು ಸೂಕ್ತ ಅಲ್ಲ ಎಂಬುದು ನನ್ನ ಅಭಿಪ್ರಾಯ. ಒಂದು ವೇಳೆ ಪಾಕ್ ತಂಡದ ನಾಯಕ ಬದಲಾದರೆ ಆತ ತಂಡದಲ್ಲಿ ಸ್ಥಾನ ಪಡೆಯುವುದಕ್ಕೂ ಅಲೆಯಬೇಕಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.