ಫುಟ್ಬಾಲ್

ನನ್ನ ಸ್ನೇಹಿತ ಹ್ಯಾರಿ...ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತ ಫುಟ್‌ಬಾಲ್ ಸ್ಟಾರ್‌ಗೆ ಕಿಂಗ್​ ಕೊಹ್ಲಿ ಹೃದಯಸ್ಪರ್ಶಿ ಅಭಿನಂದನೆ! | Harry Kane

ಲಂಡನ್: ಇಂಗ್ಲೆಂಡ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ಹ್ಯಾರಿ ಕೇನ್ (Harry Kane) ಅವರು 2026ನೇ ಸಾಲಿನ ಪ್ರತಿಷ್ಠಿತ ಬ್ಯಾಲನ್ ಡಿಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 25 ವರ್ಷಗಳಲ್ಲಿ ಈ ವೈಯಕ್ತಿಕ ಅತ್ಯುನ್ನತ ಗೌರವವನ್ನು ಪಡೆದ ಇಂಗ್ಲೆಂಡ್‌ನ ಮೊದಲ ಫುಟ್‌ಬಾಲ್ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ಅವರು ಬರೆದಿದ್ದಾರೆ. ಹ್ಯಾರಿ ಕೇನ್ ಈ ಐತಿಹಾಸಿಕ ಸಾಧನೆಗೆ ಭಾರತೀಯ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಅದ್ಭುತವಾದ ಅಭಿನಂದನೆ ಸಲ್ಲಿಸಿದ್ದು, ವಿಶ್ವದಾದ್ಯಂತ ಕ್ರೀಡಾ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟು ಸಕ್ರಿಯವಾಗಿಲ್ಲದಿದ್ದರೂ, ಹ್ಯಾರಿ ಕೇನ್ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಾಗ ತಮ್ಮ ಆತ್ಮೀಯ ಸ್ನೇಹಿತನನ್ನು ಅಭಿನಂದಿಸುವ ಮೂಲಕ ತಮ್ಮ ಕಾಳಜಿಯನ್ನು ಮೆರೆದಿದ್ದಾರೆ. ಕಲಿಯನ್ ಎಂಬಾಪೆ ಮತ್ತು ಲಾಮಿನ್ ಯಮಾಲ್ ಅವರನ್ನು ಹಿಂದಿಕ್ಕಿ ಹ್ಯಾರಿ ಕೇನ್ ಈ ಪ್ರಶಸ್ತಿ ಗೆದ್ದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ, ಕೊಹ್ಲಿ ಮಾತ್ರ ಕೇನ್ ಈ ಪ್ರಶಸ್ತಿಗೆ ಸಂಪೂರ್ಣ ಅರ್ಹರು ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಸಂದೇಶ

ಹ್ಯಾರಿ ಕೇನ್ ಅವರನ್ನು ಅಭಿನಂದಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ವಿರಾಟ್ ಕೊಹ್ಲಿ, ನನ್ನ ಸ್ನೇಹಿತ ಹ್ಯಾರಿ, ಫುಟ್‌ಬಾಲ್ ಆಟದಲ್ಲಿ ನೀವು ಇಷ್ಟು ವರ್ಷಗಳಿಂದ ತೋರಿದ ದೃಢತೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಈ ಪ್ರಶಸ್ತಿಯ ಪ್ರತಿಯೊಂದು ಅಂಶಕ್ಕೂ ನೀವು ಅರ್ಹರಾಗಿದ್ದೀರಿ. ನಿಮ್ಮ ಬಗ್ಗೆ ನನಗೆ ತುಂಬಾ ಖುಷಿಯಾಗಿದೆ. ದೇವರು ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಆಶೀರ್ವಾದ ಮಾಡಲಿ. ನಿಮ್ಮ ಪಯಣದ ಬಗ್ಗೆ ನೀವು ಹೆಮ್ಮೆಪಡುವಂತೆ, ನಿಮ್ಮ ಕುಟುಂಬದವರೆಲ್ಲರೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತಿರುತ್ತಾರೆ. ನನ್ನ ಕಡೆಯಿಂದ ಶುಭ ಹಾರೈಕೆಗಳು. ಅಭಿನಂದನೆಗಳು ಎಂದು ಬರೆದಿದ್ದಾರೆ.

ಹ್ಯಾರಿ ಕೇನ್ ಭಾವನಾತ್ಮಕ ನುಡಿಗಳು!

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹ್ಯಾರಿ ಕೇನ್, ತಮ್ಮ ಆರಂಭಿಕ ದಿನಗಳ ವೈಫಲ್ಯಗಳು ಮತ್ತು ಟೊಟೆಂಹ್ಯಾಮ್ ಹಾಟ್‌ಸ್ಪರ್ ಕ್ಲಬ್‌ನಲ್ಲಿ ತಾವು ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕಿದರು. ತಮ್ಮ ಗೆಲುವಿಗೆ ಸಾಥ್ ನೀಡಿದ ಸಹಆಟಗಾರರು, ಅಭಿಮಾನಿಗಳು ಮತ್ತು ತರಬೇತುದಾರರಿಗೆ ಧನ್ಯವಾದ ಅರ್ಪಿಸಿದರು. ಲಂಡನ್‌ನಲ್ಲಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ಇದನ್ನು ಮತ್ತಷ್ಟು ವಿಶೇಷವಾಗಿಸಿದೆ. ಫ್ರಾನ್ಸ್ ಫುಟ್‌ಬಾಲ್ ಸಂಸ್ಥೆಗೆ ಹಾಗೂ ನನಗೆ ಮತಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಬೇಯರ್ನ್ ಮ್ಯೂನಿಚ್ ಮತ್ತು ಇಂಗ್ಲೆಂಡ್ ತಂಡದ ಸಹಆಟಗಾರರ ಬೆಂಬಲವಿಲ್ಲದೆ ಇದು ಸಾಧ್ಯವಿರಲಿಲ್ಲ ಎಂದು ಭಾವುಕರಾದರು.

ತಮ್ಮ ಹಳೆಯ ಕ್ಲಬ್ ಆದ ಟೊಟೆಂಹ್ಯಾಮ್ ಹಾಟ್‌ಸ್ಪರ್ ಅನ್ನು ನೆನಪಿಸಿಕೊಂಡ ಕೇನ್, ನನಗೆ 11 ವರ್ಷದವನಿದ್ದಾಗಿನಿಂದಲೂ ಬೆಂಬಲ ನೀಡಿ, ನನ್ನ ಕನಸನ್ನು ನುಡಿಯಲು ವೇದಿಕೆ ಕಲ್ಪಿಸಿಕೊಟ್ಟ ಟೊಟೆಂಹ್ಯಾಮ್‌ಗೆ ನಾನು ಆಭಾರಿಯಾಗಿದ್ದೇನೆ. ಕಷ್ಟದ ಮತ್ತು ಒಳ್ಳೆಯ ದಿನಗಳಲ್ಲಿ ಜತೆಯಾಗಿ ಸಾಗಿದ ಆ ಪಯಣವೇ ಇಂದಿನ ಈ ಯಶಸ್ಸಿಗೆ ಕಾರಣ ಎಂದು ಸ್ಮರಿಸಿದರು. ಜಗತ್ತಿನಾದ್ಯಂತ ಇರುವ ತಮ್ಮ ಅಭಿಮಾನಿಗಳಿಗೆ ಹಾಗೂ ಫುಟ್‌ಬಾಲ್ ಪ್ರೇಮಿಗಳಿಗೆ ಅವರು ಧನ್ಯವಾದ ತಿಳಿಸಿದರು(ಏಜೆನ್ಸೀಸ್​).