ಕ್ರೀಡೆ

ಎರಡನೇ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ಪರದಾಟ

ಮ್ಯಾಂಚೆಸ್ಟರ್: ಮೊದಲ ಟೆಸ್ಟ್ ಪಂದ್ಯದಲ್ಲಿ ತನ್ನ ನಾಯಕತ್ವದಲ್ಲಿ ಸೋಲಿನ ಕಹಿ ಎದುರಿಸಿದ ಆಲ್ರೌಂಡರ್ ಬೆನ್ ಸ್ಟೋಕ್ಸ್, 2ನೇ ಟೆಸ್ಟ್ ಪಂದ್ಯದಲ್ಲಿ ನಾಯಕತ್ವದ ಹೊರೆ ಇಲ್ಲದೆ ಭರ್ಜರಿ ಆಟವಾಡುವ ಮೂಲಕ ಪ್ರವಾಸಿ ವೆಸ್ಟ್ ಇಂಡೀಸ್ ತಂಡಕ್ಕೆ ತಿರುಗೇಟು ನೀಡುವತ್ತ ತಂಡವನ್ನು ಮುನ್ನಡೆಸಿದ್ದಾರೆ. ಆರಂಭಿಕ ಡೊಮಿನಿಕ್ ಸಿಬ್ಲೆ (120 ರನ್, 372 ಎಸೆತ, 5 ಬೌಂಡರಿ) ಶತಕದ ಬೆಂಬಲದೊಂದಿಗೆ ದಿಟ್ಟ ಬ್ಯಾಟಿಂಗ್ ನಿರ್ವಹಣೆ ತೋರಿದ ಬೆನ್ ಸ್ಟೋಕ್ಸ್ (176 ರನ್, 356 ಎಸೆತ, 17 ಬೌಂಡರಿ, 2 ಸಿಕ್ಸರ್) ದ್ವಿಶತಕ ಪೂರೈಸುವ ಅವಕಾಶದಿಂದ ವಂಚಿತರಾದರು. ಸಿಬ್ಲೆ-ಸ್ಟೋಕ್ಸ್ ಸಾಹಸದಿಂದ ಇಂಗ್ಲೆಂಡ್ ತಂಡವನ್ನು ಬಲಿಷ್ಠ ಸ್ಥಿತಿಯಲ್ಲಿದೆ.

ಶುಕ್ರವಾರ 3 ವಿಕೆಟ್‌ಗೆ 207 ರನ್‌ಗಳಿಂದ 2ನೇ ದಿನದ ಆಟ ಮುಂದುವರಿಸಿದ ಇಂಗ್ಲೆಂಡ್, 9 ವಿಕೆಟ್‌ಗೆ 469 ರನ್ ಗಳಿಸಿ ಡಿಕ್ಲೇರ್ ಮಾಡಿ ಕೊಂಡಿತು. ಪ್ರತಿಯಾಗಿ ವಿಂಡೀಸ್ ದಿನದಂತ್ಯಕ್ಕೆ 1 ವಿಕೆಟ್‌ಗೆ 32 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಕ್ರೇಗ್ ಬ್ರಾಥ್‌ವೇಟ್ (6), ಅಲ್ಜಾರಿ ಜೋಸೆಫ್​ (14) ಕ್ರೀಸ್‌ನಲ್ಲಿದ್ದಾರೆ.

ಸಿಬ್ಲೆ-ಸ್ಟೋಕ್ಸ್ ಭರ್ಜರಿ ಜತೆಯಾಟ

ಕ್ರಮವಾಗಿ 86 ಮತ್ತು 59 ರನ್‌ಗಳಿಂದ ದಿನದಾಟ ಮುಂದುವರಿಸಿದ ಸಿಬ್ಲೆ ಮತ್ತು ಸ್ಟೋಕ್ಸ್ 4ನೇ ವಿಕೆಟ್ ಜತೆಯಾಟವನ್ನು 260 ರನ್‌ಗಳಿಗೆ ವಿಸ್ತರಿಸಿದರು. ಸಿಬ್ಲೆ 2ನೇ ಮತ್ತು ಸ್ಟೋಕ್ಸ್ 10ನೇ ಶತಕ ಬಾರಿಸಿದರು. ಭೋಜನ ವಿರಾಮದ ಬಳಿಕ ಕೊನೆಗೂ ಸಿಬ್ಲೆ ವಿಕೆಟ್ ಕಬಳಿಸುವ ಮೂಲಕ ಚೇಸ್ ಈ ಜತೆಯಾಟವನ್ನು ಮುರಿದರು. ವಿಂಡೀಸ್ ಫೀಲ್ಡರ್‌ಗಳಿಂದ ಕೆಲ ಜೀವದಾನಗಳ ನೆರವು ಪಡೆದ ಸ್ಟೋಕ್ಸ್ ಕೊನೆಗೆ ಕೆಮಾರ್ ರೋಚ್ ಎಸೆತದಲ್ಲಿ ಔಟಾದರು.

ಸಿಬ್ಲೆ ನಿಧಾನ ಶತಕದ ದಾಖಲೆ

ಡೊಮಿನಿಕ್ ಸಿಬ್ಲೆ 1990ರ ಬಳಿಕ ಇಂಗ್ಲೆಂಡ್ ಬ್ಯಾಟ್ಸ್ ಮನ್‌ನ 5ನೇ ನಿಧಾನಗತಿ ಶತಕದ ದಾಖಲೆ ಬರೆದರು. ಅವರು ಶತಕ ಪೂರೈಸಲು 312 ಎಸೆತ ಎದುರಿಸಿದರು. ಅರ್ಧಶತಕಕ್ಕೆ ಅವರು 164 ಎಸೆತ ಬಳಸಿದ್ದರು. 1990ರ ಬಳಿಕ ಸಿಬ್ಲೆಗಿಂತ ನಿಧಾನವಾಗಿ ಶತಕ ಪೂರೈಸಿದವರೆಂದರೆ ನಾಸಿರ್ ಹುಸೇನ್ (343) ಮತ್ತು ಮೈಕೆಲ್ ಆಥರ್ಟನ್ (326, 317, 315). 2010ರ ಬಳಿಕ ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇದು 3ನೇ ನಿಧಾನಗತಿ ಶತಕವಾಗಿದೆ. ಜಿಂಬಾಬ್ವೆಯ ಟಿನೊ ಮವೊಯೊ (327) ಮತ್ತು ಪಾಕಿಸ್ತಾನದ ಅಜರ್ ಅಲಿ (319) ಮೊದಲೆರಡು ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್: 162 ಓವರ್‌ಗಳಲ್ಲಿ 9 ವಿಕೆಟ್‌ಗೆ 469 ಡಿಕ್ಲೇರ್ (ಸಿಬ್ಲೆ 120, ಸ್ಟೋಕ್ಸ್ 176, ಪೋಪ್ 7, ಬಟ್ಲರ್ 40, ಬೆಸ್ 31*, ಚೇಸ್ 172ಕ್ಕೆ 5, ರೋಚ್ 58ಕ್ಕೆ 2). ವೆಸ್ಟ್ ಇಂಡೀಸ್: 14 ಓವರ್‌ಗಳಲ್ಲಿ 1 ವಿಕೆಟ್‌ಗೆ 32 (ಬ್ರಾಥ್‌ವೇಟ್ 6, ಕ್ಯಾಂಪ್‌ಬೆಲ್ 12, ಕರ‌್ರನ್ 8ಕ್ಕೆ 1).