ಕ್ರೀಡೆ

ಇಂಗ್ಲೆಂಡ್-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯನ್ನು ಭಾರತದಲ್ಲಿ ಯಾವ ಚಾನಲ್‌ನಲ್ಲಿ ನೋಡಬಹುದು ಗೊತ್ತೇ?

lakshmihegde

ಬೆಂಗಳೂರು: ಸರಿಸುಮಾರು 117 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಕ್ಕೆ ವೇದಿಕೆ ಸಜ್ಜಾಗಿದೆ. ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿ ಬುಧವಾರದಿಂದ ಸೌಥಾಂಪ್ಟನ್‌ನ ಏಜಿಯಸ್ ಬೌಲ್ ಮೈದಾನದಲ್ಲಿ ನಡೆಯಲಿದೆ. ಇದಕ್ಕಾಗಿ ಈಗಾಗಲೆ ಜೈವಿಕ ಸುರಕ್ಷಾ ವಾತಾವರಣವನ್ನು ಸಜ್ಜುಗೊಳಿಸಲಾಗಿದೆ. ಕಳೆದ ನೂರು ದಿನಗಳಿಂದ ಹಳೆಯ ಪಂದ್ಯಗಳ ಹೈಲೈಟ್ಸ್‌ಗಳನ್ನೇ ನೋಡಿ ಸುಸ್ತಾಗಿರುವ ಕ್ರಿಕೆಟ್ ಪ್ರೇಮಿಗಳು ನೇರಪ್ರಸಾರದ ಪಂದ್ಯವನ್ನು ವೀಕ್ಷಿಸುವ ಅವಕಾಶ ಕೊನೆಗೂ ಕೂಡಿಬಂದಿದೆ.

ಕರೊನಾ ಭೀತಿಯ ನಡುವೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಪಂದ್ಯವನ್ನು ಭಾರತದ ಕ್ರಿಕೆಟ್ ಪ್ರೇಮಿಗಳೂ ವೀಕ್ಷಿಸುವ ಅವಕಾಶ ಹೊಂದಿದ್ದಾರೆ. ಇಂಗ್ಲೆಂಡ್‌ನ ಸ್ಕೈ ಸ್ಪೋರ್ಟ್ಸ್ ಕಂಪನಿ ಟೂರ್ನಿಯ ನೇರಪ್ರಸಾರದ ಹಕ್ಕು ಪಡೆದುಕೊಂಡಿದ್ದು, ಭಾರತದಲ್ಲಿ ಈ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ಚಾನಲ್ ಪ್ರಸಾರ ಮಾಡಲಿದೆ. ಸೋನಿ ಸಿಕ್ಸ್, ಸೊನಿ ಸಿಕ್ಸ್ ಎಚ್‌ಡಿ ಮತ್ತು ಒಟಿಟಿ ಫ್ಲಾಟ್​ಫಾರ್ಮ್‌ನಲ್ಲಿ ಸೋನಿ ಲೈವ್‌ನಲ್ಲಿ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯನ್ನು ವೀಕ್ಷಿಸಬಹುದಾಗಿದೆ. ಇನ್ನು ಮೊಬೈಲ್‌ನಲ್ಲೇ ಪಂದ್ಯ ವೀಕ್ಷಿಸಲು ಬಯಸುವವರು ಜಿಯೋ ಸಿಮ್ ಅಥವಾ ಜಿಯೋ ಡಾಂಗಲ್ ಹೊಂದಿದ್ದರೆ ಜಿಯೋ ಟಿವಿ ಆ್ಯಪ್‌ನಲ್ಲೂ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ಇಂಗ್ಲೆಂಡ್‌ನಲ್ಲಿ ಬೆಳಗ್ಗೆ ಆರಂಭಗೊಳ್ಳುವ ಪಂದ್ಯಗಳನ್ನು ಭಾರತೀಯರು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ರಿಂದ ವೀಕ್ಷಿಸಬಹುದಾಗಿದೆ. ಪ್ರತಿ ಟೆಸ್ಟ್ ಪಂದ್ಯದ ದಿನದಾಟ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ ಹೀಗೆ ಕ್ರಿಕೆಟ್ ದೇಶಗಳಲ್ಲೆಲ್ಲಾ ಈ ಸರಣಿ ನೇರಪ್ರಸಾರ ಕಾಣಲಿದ್ದು, ವಿಶ್ವದೆಲ್ಲೆಡೆಯ ಕ್ರಿಕೆಟ್ ಪ್ರೇಮಿಗಳಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗುವ ನಿರೀಕ್ಷೆ ಇದೆ.

ಟೆಸ್ಟ್ ಸರಣಿ ವೇಳಾಪಟ್ಟಿ:

ಟೆಸ್ಟ್ ದಿನಾಂಕ ಸ್ಥಳ

1. ಜುಲೈ 8-12 ಸೌಥಾಂಪ್ಟನ್

2. ಜುಲೈ 16-20 ಮ್ಯಾಂಚೆಸ್ಟರ್

3. ಜುಲೈ 24-28 ಮ್ಯಾಂಚೆಸ್ಟರ್