More

    ಕ್ರಿಕೆಟ್ vs ಕರೊನಾ ವೈರಸ್: 4 ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭ

    ಬೆಂಗಳೂರು: ಕರೊನಾ ಮಹಾಮಾರಿಯ ಹಾವಳಿ ಶುರುವಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಲ್ಲದೆ ನೂರಕ್ಕೂ ಅಧಿಕ ದಿನಗಳು ಕಳೆದಿವೆ. ಮಾರ್ಚ್ 13ರಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ಪ್ರವಾಸಿ ನ್ಯೂಜಿಲೆಂಡ್ ನಡುವೆ ಏಕದಿನ ಪಂದ್ಯ ನಡೆದ ಬಳಿಕ ಸಂಪೂರ್ಣವಾಗಿ ಸ್ತಬ್ಧಗೊಂಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಇನ್ನು ನಾಲ್ಕೇ ದಿನಗಳಲ್ಲಿ ಪುನರಾರಂಭಗೊಳ್ಳಲಿದೆ. ಜುಲೈ 8ರಿಂದ ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಮೂಲಕ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಕ್ರಿಕೆಟ್ ಮತ್ತೆ ಆರಂಭಗೊಳ್ಳಲಿದೆ. ಒಟ್ಟಾರೆ 117 ದಿನಗಳ ಬಳಿಕ ಕ್ರಿಕೆಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿರುವ ನಡುವೆ, ವಿಶ್ವದ 8 ಪ್ರಮುಖ ಕ್ರಿಕೆಟ್ ದೇಶಗಳ ಹಾಲಿ ಕ್ರಿಕೆಟ್ ಮತ್ತು ಕರೊನಾ ಸ್ಥಿತಿಗತಿಗಳ ಬಗ್ಗೆ ಸಂಕ್ಷಿಪ್ತ ಅವಲೋಕನ ಇಲ್ಲಿದೆ. ಈ 8 ದೇಶಗಳ ಪೈಕಿ ಭಾರತದಲ್ಲೇ ಸದ್ಯ ಗರಿಷ್ಠ ಕರೊನಾ ಪ್ರಕರಣಗಳಿದ್ದು, ಭಾರತದಲ್ಲೇ ಕೊನೆಯದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಗೊಳ್ಳುವ ಸಾಧ್ಯತೆ ಹೆಚ್ಚಿದೆ.

    ಆಸ್ಟ್ರೇಲಿಯಾ

    ಬಾಂಗ್ಲಾದೇಶ ಪ್ರವಾಸ, ಜಿಂಬಾಬ್ವೆ ವಿರುದ್ಧ ತವರಿನ ಸರಣಿ ರದ್ದುಗೊಂಡಿದ್ದು, ಇಂಗ್ಲೆಂಡ್ ಪ್ರವಾಸ ಮರುನಿಗದಿ ಅಥವಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡುವ ಮೂಲಕ ಕ್ರಿಕೆಟ್ ಪುನರಾರಂಭದ ಚಿಂತನೆಯನ್ನು ಆಸೀಸ್ ಹೊಂದಿದೆ. ಉಳಿದಂತೆ ವರ್ಷಾಂತ್ಯದ ಪ್ರವಾಸಿ ಭಾರತ ವಿರುದ್ಧದ ಸರಣಿಯ ಹೊರತಾಗಿ ಬೇರೆ ಪ್ರಮುಖ ದ್ವಿಪಕ್ಷೀಯ ಸರಣಿಗಳಿಲ್ಲ.

    ಕರೊನಾ ಕೇಸ್: ಒಟ್ಟು: 8,255+, ಸಕ್ರಿಯ: 832+, ಸಾವು: 104+.

    ಭಾರತ

    ಐಪಿಎಲ್ ನಡೆಯದಿದ್ದರೆ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ದೊಡ್ಡ ಹೊಡೆತವೇ ಬೀಳಲಿದೆ. ಹೀಗಾಗಿ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡಾಗ ಐಪಿಎಲ್ ಆಯೋಜನೆಯತ್ತ ಹೆಚ್ಚಿನ ಒಲವು ಹೊಂದಿದೆ. ದೇಶದಲ್ಲಿ ಅನ್​ಲಾಕ್ ಶುರುವಾದ ಬಳಿಕ ಕ್ರೀಡಾ ಚಟುವಟಿಕೆಗಳೆಲ್ಲ ನಿಧಾನವಾಗಿ ಪುನರಾರಂಭಗೊಂಡರೂ, ಕ್ರಿಕೆಟ್ ಮಾತ್ರ ಇನ್ನೂ ಶುರುವಾಗಿಲ್ಲ. ದೇಶದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಮತ್ತೆ ಯಾವಾಗ ಆರಂಭವಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಗಸ್ಟ್ ತನಕ ಟೀಮ್ ಇಂಡಿಯಾದ ಕ್ರಿಕೆಟಿಗರ ತರಬೇತಿ ಶಿಬಿರ ಆಯೋಜನೆಗೊಳ್ಳುವುದಿಲ್ಲ ಎಂದು ಬಿಸಿಸಿಐ ಈಗಾಗಲೆ ಸ್ಪಷ್ಟಪಡಿಸಿದೆ.

    ಕರೊನಾ ಕೇಸ್: ಒಟ್ಟು: 6.34+ಲಕ್ಷ, ಸಕ್ರಿಯ: 2.31+ಲಕ್ಷ, ಸಾವು: 18,334+.‘‘

    ದಕ್ಷಿಣ ಆಫ್ರಿಕಾ

    ಒಂದೇ ಪಂದ್ಯದಲ್ಲಿ 3 ತಂಡಗಳು ಆಡುವ ‘3ಟಿ ಕ್ರಿಕೆಟ್’ ಎಂಬ ಹೊಸ ಪ್ರಕಾರದ ಪಂದ್ಯದ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಜುಲೈ 18ರಂದು ಕ್ರಿಕೆಟ್ ಪುನರಾರಂಭಗೊಳ್ಳಲಿದೆ. ದೇಶದ 24 ಪ್ರಮುಖ ಆಟಗಾರರು ಈ ಪಂದ್ಯದಲ್ಲಿ ಆಡಲಿದ್ದಾರೆ. ಉಳಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳ ಬಗ್ಗೆ ಸ್ಪಷ್ಟತೆ ಇಲ್ಲ. ಆಗಸ್ಟ್​ನಲ್ಲಿ ಪ್ರವಾಸಿ ಭಾರತ ವಿರುದ್ಧದ ಟಿ20 ಸರಣಿ ಅನುಮಾನವೆನಿಸಿದೆ. ಕರೊನಾ ಕೇಸ್: ಒಟ್ಟು: 1.68+ಲಕ್ಷ, ಸಕ್ರಿಯ: 83,157+, ಸಾವು: 2,844+.

    ವೆಸ್ಟ್ ಇಂಡೀಸ್

    ಕೆರಿಬಿಯನ್ ದ್ವೀಪರಾಷ್ಟ್ರಗಳ ಸಮೂಹದಲ್ಲಿ ಕರೊನಾ ಹಾವಳಿ ಕಡಿಮೆ ಇದ್ದು, ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ತಂಡ 14 ದಿನಗಳ ಕ್ವಾರಂಟೈನ್ ಮುಗಿಸಿ ಅಭ್ಯಾಸ ಪಂದ್ಯವನ್ನೂ ಆಡಿದೆ. ವಿಂಡೀಸ್​ನಲ್ಲಿ ಸ್ಥಳೀಯ ಟೂರ್ನಿಗಳು ಪ್ರೇಕ್ಷಕರಿಲ್ಲದೆ ನಡೆಯುತ್ತಿವೆ.

    ಕರೊನಾ ಕೇಸ್: ಒಟ್ಟು: 1,352+, ಸಕ್ರಿಯ: 311+, ಸಾವು: 42+.

    ಶ್ರೀಲಂಕಾ

    ಕ್ರಿಕೆಟ್ ಪುನರಾರಂಭದ ಮೊದಲ ಹೆಜ್ಜೆಯಾಗಿ 24 ಆಟಗಾರರ ತಂಡದ ರೆಸಿಡೆನ್ಶಿಯಲ್ ತರಬೇತಿ ಶಿಬಿರ ಕ್ಯಾಂಡಿಯಲ್ಲಿ ಕಳೆದ ತಿಂಗಳು ಶುರುವಾಗಿದೆ. ಪಲ್ಲೆಕಿಲೆ ಸ್ಟೇಡಿಯಂನಲ್ಲಿ 6 ಕೋಚ್​ಗಳು ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜುಲೈ-ಆಗಸ್ಟ್​ನಲ್ಲಿ ಬಾಂಗ್ಲಾದೇಶ, ಭಾರತ ವಿರುದ್ಧ ನಡೆಯಬೇಕಾಗಿದ್ದ ಸರಣಿಗಳು ರದ್ದುಗೊಂಡಿವೆ.

    ಕರೊನಾ ಕೇಸ್: ಒಟ್ಟು: 2,037+, ಸಕ್ರಿಯ: 365+, ಸಾವು: 11+,

    ಪಾಕಿಸ್ತಾನ

    ಈಗಾಗಲೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿರುವ ಪಾಕ್ ತಂಡ ಕ್ವಾರಂಟೈನ್​ನಲ್ಲಿದೆ. ಪ್ರವಾಸಕ್ಕೆ ಮುನ್ನ ಕೆಲ ಆಟಗಾರರಿಗೆ ಕರೊನಾ ಪಾಸಿಟಿವ್ ಬಂದಿದ್ದು ಆತಂಕ ಸೃಷ್ಟಿಸಿತ್ತು. 20 ಆಟಗಾರರ ತಂಡ ಇಂಗ್ಲೆಂಡ್ ತಲುಪಿದೆ. ಆಗಸ್ಟ್ -ಸೆಪ್ಟೆಂಬರ್​ನಲ್ಲಿ ಟೆಸ್ಟ್, ಟಿ20 ಸರಣಿ ಆಡಲಿದೆ. ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ.

    ಕರೊನಾ ಕೇಸ್: ಒಟ್ಟು: 2.22+ ಲಕ್ಷ, ಸಕ್ರಿಯ: 1.03+ಲಕ್ಷ, ಸಾವು: 4,551+,

    ಇಂಗ್ಲೆಂಡ್

    ಕ್ರಿಕೆಟ್ ಜನಕರ ನಾಡಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮೊದಲು ಪುನರಾರಂಭ ಕಾಣಲಿದೆ. ಜುಲೈ 8ರಿಂದ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಜೈವಿಕ ಸುರಕ್ಷಾ ವಾತಾವರಣದಲ್ಲಿ ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್​ನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗುತ್ತಿದೆ. ಬಳಿಕ ಸೆಪ್ಟೆಂಬರ್​ನಲ್ಲಿ ಪಾಕಿಸ್ತಾನ ವಿರುದ್ಧವೂ ಟೆಸ್ಟ್, ಟಿ20 ಸರಣಿ ನಿಗದಿ ಯಾಗಿದೆ.

    ಕರೊನಾ ಕೇಸ್: ಒಟ್ಟು: 2.43+ಲಕ್ಷ, ಸಕ್ರಿಯ: -, ಸಾವು: 39,434+.

    ನ್ಯೂಜಿಲೆಂಡ್

    ಕರೊನಾದಿಂದ ಬಹುತೇಕ ಮುಕ್ತಿ ಪಡೆದಿರುವ ದೇಶವಾಗಿದ್ದರೂ, ಸದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಸಾಧ್ಯತೆ ಕಾಣಿಸುತ್ತಿಲ್ಲ. ಯಾವುದೇ ಪೂರ್ವನಿಗದಿತ ಸರಣಿಗಳೂ ಇಲ್ಲ. ಬಾಂಗ್ಲಾದೇಶ ಪ್ರವಾಸ ರದ್ದುಗೊಂಡಿದೆ.

    ಕರೊನಾ ಕೇಸ್: ಒಟ್ಟು: 1,180+, ಸಕ್ರಿಯ: 18+, ಸಾವು: 22+.

    2011ರ ವಿಶ್ವಕಪ್​ ಫೈನಲ್​ ಫಿಕ್ಸಿಂಗ್​ ತನಿಖೆ ಕೈಬಿಟ್ಟ ಶ್ರೀಲಂಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts