ನವದೆಹಲಿ: ಲಾಕ್ಡೌನ್ ನಂತರದಲ್ಲಿ ದೇಶದ ಎಲ್ಲ ಕ್ರೀಡಾಪಟುಗಳನ್ನು ಕಡ್ಡಾಯವಾಗಿ ಡೋಪಿಂಗ್ ಟೆಸ್ಟ್ಗೆ ಒಳಪಡಿಸಲು ನಾಡಾ ಯೋಜನೆ ರೂಪಿಸಿಕೊಂಡಿದೆ. ಸದ್ಯ ಮೇ 17ರವರೆಗೆ ಲಾಕ್ಡೌನ್ ಜಾರಿಯಲ್ಲಿದೆ. ಬಳಿಕ ಮೇ ಅಂತ್ಯದ ವೇಳೆ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭ ಮಾಡುವ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ರಾಷ್ಟ್ರೀಯ ಶಿಬಿರಗಳು ಆರಂಭಗೊಂಡಾಗ ಎಲ್ಲ ಕ್ರೀಡಾಪಟುಗಳನ್ನು ಉದ್ದೀಪನ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಗರ್ವಾಲ್ ತಿಳಿಸಿದ್ದಾರೆ. ಭಾರತದ ಉದ್ದೀಪನ ಮಾದರಿಗಳ ಪರೀಕ್ಷಾ ಪ್ರಯೋಗಾಲಯದ ಮಾನ್ಯತೆಯನ್ನು ವಾಡಾ ರದ್ದುಗೊಳಿಸಿದೆ. ಇದರಿಂದ ಉದ್ದೀಪನ ಮಾದರಿಗಳನ್ನು ವಿದೇಶದಲ್ಲಿ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಸದ್ಯ ದೇಶದಲ್ಲಿ ವಿಮಾನಯಾನ ಸ್ಥಗಿತಗೊಂಡಿದ್ದರೂ, ಕಾಗೋ (ಸರಕು) ವಿಮಾನಗಳು ಚಾಲ್ತಿಯಲ್ಲಿವೆ. ಹೀಗಾಗಿ ಉದ್ದೀಪನ ಮಾದರಿಗಳ ಪರೀಕ್ಷೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬರಲಿದೆ ನಾಡಾ ಆಪ್: ತನ್ನದೇ ಆದ ಆಪ್ ಒಂದನ್ನು ನಾಡಾ ಸಿದ್ಧಪಡಿಸುತ್ತಿದೆ. ಇದರ ಮೂಲಕ ಉದ್ದೀಪನ ನಿಗ್ರಹದ ಬಗ್ಗೆ ಕ್ರೀಡಾಪಟುಗಳಿಗೆ ಶಿಕ್ಷಣ ನೀಡಲಾಗುವುದು. ಇದರ ಮೂಲಕ ಕ್ರೀಡಾಪಟುಗಳು, ಅವರ ಹೆತ್ತವರು ಮತ್ತು ಕೋಚ್ಗಳಿಗೆ ಉದ್ದೀಪನ ನಿಗ್ರಹದ ಬಗ್ಗೆ ಪ್ರಶ್ನೆಗಳನ್ನೂ ಕೇಳಲಾಗುವುದು ಎಂದು ಅಗರ್ವಾಲ್ ತಿಳಿಸಿದ್ದಾರೆ.