ಕ್ರೀಡೆ

ಏನು ತಪ್ಪು ಮಾಡಿದ್ದಾರೆಂದು ಗೊತ್ತಿಲ್ಲ... Sanju Samson ವಿಚಾರವಾಗಿ ಕಿಡಿಕಾರಿದ ಮಾಜಿ ಸ್ಟಾರ್ ಆಟಗಾರ

ನವದೆಹಲಿ: ಮುಂಬರುವ ಚಾಂಪಿಯನ್ಸ್​ ಟ್ರೋಫಿ ಹಾಗೂ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗೆ ಸಂಬಂಧಿಸಿದಂತೆ ಈಗಾಗಲೇ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದ್ದು, ಉತ್ತಮ ಪ್ರದರ್ಶನದ ಹೊರತಾಗಿಯೂ ಕೆಲವು ಆಟಗಾರರನ್ನು ತಂಡದಿಂದ ಕೈ ಬಿಡಲಾಗಿದೆ. ಈ ಪೈಕಿ ನೋಡುವುದಾದರೆ ಸಂಜು ಸ್ಯಾಮ್ಸನ್​ (Sanju Samson) ಮೊದಲಿಗರಾಗಿದ್ದಾರೆ. 2024ರಲ್ಲಿ ನಡೆದ ದ್ವಿಪಕ್ಷೀಯ ಸರಣಿಗಳಲ್ಲಿ ಸಂಜು ಉತ್ತಮ ಪ್ರದರ್ಶನ ನೀಡಿದರ ಹೊರತಾಗಿಯೂ ಅವರನ್ನು ಚಾಂಪಿಯನ್ಸ್​ ಟ್ರೋಫಿ ಹಾಗೂ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಈ ಬಗ್ಗೆ ಕ್ರೀಡಾ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದ್ದು, ಆಯ್ಕೆ ಸಮಿತಿಯ ನಿರ್ಧಾರಕ್ಕೆ ಹಲವರು ಕಿಡಿಕಾರಿದ್ದಾರೆ.

ಸಂಜು ಸ್ಯಾಮ್ಸನ್​ರನ್ನು (Sanju Samson) ಆಯ್ಕೆ ಮಾಡದಿರುವ ಕುರಿತು ಟೀಮ್​ ಇಂಡಿಯಾ ಮಾಜಿ ಆಟಗಾರ ಹರ್ಭಜನ್​ ಸಿಂಗ್​ (Harbhajan Singh) ಮಾತನಾಡಿದ್ದು, ಆಯ್ಕೆ ಸಮಿತಿಯ ನಿರ್ಧಾರಕ್ಕೆ ಕಿಡಿಕಾರಿದ್ದಾರೆ. ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಹರ್ಭಜನ್​, ನಿಜವಾಗಿಯೂ ಆತನ ವಿಚಾರವಾಗಿ ತುಂಬಾ ಬೇಜಾರಾಗಿದೆ. ಆತ ಚೆನ್ನಾಗಿ ಆಡುತ್ತಿದ್ದಾನೆ. ರನ್​ ಗಳಿಸುತ್ತಿದ್ದಾನೆ. ಇದೆಲ್ಲದರ ಹೊರತಾಗಿಯೂ ಆಯ್ಕೆ ಮಾಡದೆ ತಂಡದಿಂದ ಕೈ ಬಿಡಲಾಗಿದೆ.

15 ಮಂದಿಯನ್ನು ಮಾತ್ರ ಆಯ್ಕೆ ಮಾಡಬಹುದು ಎಂಬ ವಿಚಾರ ನನಗೂ ತಿಳಿದಿದೆ. ಆತನ ಸರಾಸರಿಯನ್ನು ಗಮನಿಸಿದರೆ ತಂಡದಲ್ಲಿ ಸ್ಥಾನ ನೀಡಬಹುದಿತ್ತು. ಚಾಂಪಿಯನ್ಸ್ ಟ್ರೋಫಿಗೆ ತಂಡ ಆಯ್ಕೆ ನೋಡುವುದಾದರೆ ಯಜುವೇಂದ್ರ ಚಹಲ್​ರನ್ನು ತಂಡದಿಂದ ಕೈ ಬಿಡಲಾಗಿದೆ. ನಾಲ್ಕು ಸ್ಪಿನ್ನರ್​ಗಳನ್ನು ಆಯ್ಕೆ ಮಾಡಿದ್ದೀರಾ ಅದರಲ್ಲಿ ಇಬ್ಬರು ಎಡಗೈ ಆಟಗಾರರು. ಚಹಾಲ್​ ಒಬ್ಬ ಅತ್ಯುತ್ತಮ ಬೌಲರ್​ ಆತನಿಗೆ ನೀವು ತಂಡದಲ್ಲಿ ಸ್ಥಾನ ಕೊಡಬಹುದಿತ್ತು.

ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿಯುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ಶುಭಮನ್​ ಗಿಲ್​ ಉಪನಾಯಕನಾಗಿರುವುದರಿಂದ ಜೈಸ್ವಾಲ್​ ಆರಂಭಿಕನಾಗಿ ಕಣಕ್ಕಿಳಿಯುವುದಿಲ್ಲ. ಚಾಂಪಿಯನ್ಸ್​ ಟ್ರೋಫಿ ಹಾಗೂ ಇಂಗ್ಲೆಂಡ್​ ವಿರುದ್ಧದ ಸರಣಿ ವಿಚಾರಕ್ಕೆ ಬರುವುದಾದರೆ ಕೆಲವರಿಗೆ ಸ್ಥಾನ ಕೊಡದೆ ಅನ್ಯಾಯ ಮಾಡಲಾಗಿದೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಹರ್ಭಜನ್​ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.