ನವದೆಹಲಿ: ಟೀಮ್ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗೌತಮ್ 2023ರವರೆಗೆ ಲಖನೌ ಸೂಪರ್‌ಜೈಂಟ್ಸ್ (ಎಲ್ಎಸ್ಜಿ) ತಂಡದ ಮೆಂಟರ್ ಆಗಿದ್ದರು ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈ ಬಾರಿ ಅವರು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಶಿಫ್ಟ್ ಆಗಿದ್ದಾರೆ. ಕೆಕೆಆರ್ನ ಹೊಸ ಮೆಂಟರ್ ಆಗಿ ಬಂದ ಬಳಿಕ ತಂಡದ ಸಂಯೋಜನೆಯನ್ನೇ ಗೌತಿ ಬದಲಾಯಿಸುವ ಮೂಲಕ ತಂಡ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆಟಗಾರರಲ್ಲಿರುವ ಪ್ರತಿಭೆಯನ್ನು ಹೊರತಂದು ಅವರಿಗೆ ಬೇಕಾದ ಬೆಂಬಲ ನೀಡುವ ಮೂಲಕ ಗಂಭೀರ್ ಕೆಕೆಆರ್ಗೆ ಹೊಸ ಹೀರೋ ಎನಿಸಿಕೊಂಡಿದ್ದಾರೆ. 17 ನೇ ಆವೃತ್ತಿಯಲ್ಲಿ ಕೆಕೆಆರ್ ಕಪ್ ಗೆದ್ದ ಬೆನ್ನಲ್ಲೇ ಅವರು ಟೀಮ್ ಇಂಡಿಯಾ ಕೋಚ್ ಆಗುತ್ತಾರೆ ಎಂಬ ವಿಚಾರ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡಲು ಶುರು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಕ್ರಿಕ್ಬಜ್ಗೆ ಪ್ರತಿಕ್ರಿಯಿಸಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಟೀಮ್ ಇಂಡಿಯಾದ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಹೆಸರು ಬಹುತೇಕ ಅಂತಿಮಗೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ. ಟಿ-20 ವಿಶ್ವಕಪ್ ಬಳಿಕ ಎಲ್ಲದ್ದಕ್ಕೂ ಉತ್ತರ ಸಿಗಲಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ವೇಳೆ ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಆಗಿ ಅಧಿಕಾರ ವಹಿಸಿಕೊಂಡರೆ ಅವರು ಕೆಕೆಆರ್ ಮೆಂಟರ್ ಸ್ಥಾನವನ್ನು ತ್ಯಜಿಸಬೇಕಾಗುತ್ತದೆ.
ಇತ್ತ ಗೌತಮ್ ಗಂಭೀರ್ ಅವರನ್ನು ಕೆಕೆಆರ್ ಮೆಂಟರ್ ಆಗಿ ಉಳಿಸಿಕೊಳ್ಳಲು ಶಾರುಖ್ ಖಾನ್ ಅವರು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದ್ದು, ಅವರಿಗೆ ಬ್ಲಾಂಕ್ ಚೆಕ್ ಆಫರ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಫೈನಲ್ ಮುಗಿದ ಬಳಿಕ ಈ ಬೆಳವಣಿಗೆಗಳು ನಡೆದಿದ್ದು, ಅಂತಿಮವಾಗಿ ಟಿ20 ವಿಶ್ವಕಪ್ ಮುಗಿದ ಬಳಿಕ ಎಲ್ಲದಕ್ಕೂ ತೆರೆ ಬೀಳಲಿದೆ.