Digvesh Rathi : ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡದ ಸ್ಪಿನ್ನರ್ ದಿಗ್ವೇಶ್ ರಾಥಿಗೆ ಮತ್ತೊಂದು ಆಘಾತ ಕಾದಿದೆ. ಐಪಿಎಲ್ 2025ರ ಸೀಸನ್ನಲ್ಲಿ ಈಗಾಗಲೇ ಎರಡು ಬಾರಿ ದಂಡಕ್ಕೆ ಗುರಿಯಾಗಿದ್ದಾರೆ. ಭಾನುವಾರ (ಮೇ 04) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ದಿಗ್ವೇಶ್ ಅವರು ಮತ್ತೊಮ್ಮೆ ನೋಟ್‌ಬುಕ್ ಆಚರಣೆ ಮಾಡಿದರು. ಹೀಗಾಗಿ, ಮೂರನೇ ಬಾರಿಗೆ ದಂಡ ವಿಧಿಸುವ ಸಾಧ್ಯತೆಯಿದೆ.
ಈ ಸೀಸನ್ನಲ್ಲಿ ದಿಗ್ವೇಶ್ ರಾಥಿ ತಮ್ಮ ಬೌಲಿಂಗ್ಗಿಂತ ವಿಕೆಟ್ ನಂತರ ಮಾಡುವ ಸಂಭ್ರಮಾಚರಣೆಯಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಇಲ್ಲಿಯವರೆಗೆ ನೋಟ್ ಬುಕ್ ಆಚರಣೆಗಾಗಿ ಅವರಿಗೆ ಎರಡು ಬಾರಿ ದಂಡ ವಿಧಿಸಲಾಗಿದೆ. ಕೆಲವು ಪಂದ್ಯಗಳಲ್ಲಿ ದಿಗ್ವೇಶ್ ಅವರು ಸಾಮಾನ್ಯವಾಗಿ ಆಚರಿಸಿದರು. ಆದರೆ, ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ನೋಟ್ ಬುಕ್ ಆಚರಣೆಗಳನ್ನು ಮಾಡಿದರು.
ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಆರಂಭಿಕ ಆಟಗಾರ ಪ್ರಭ್ಸಿಮ್ರಾನ್ ಸಿಂಗ್ ಅವರನ್ನು ಔಟ್ ಮಾಡಿದ ನಂತರ ದಿಗ್ವೇಶ್ ತಮ್ಮ ಸಹಿ ಸನ್ನೆಯನ್ನು ಮಾಡಿ ಮತ್ತೆ ನೋಟ್ ಬುಕ್ ಆಚರಣೆ ಮಾಡಿದರು. ಹೀಗಾಗಿ ದಿಗ್ವೇಶ್ ಅವರಿಗೆ ಬಿಸಿಸಿಐ ಮೂರನೇ ಬಾರಿಗೆ ದಂಡ ವಿಧಿಸುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ಮೂಲಗಳು ಹೇಳುತ್ತಿವೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 236 ರನ್ ಗಳಿಸಿತು. ಪಂಜಾಬ್ ಪರ ಪ್ರಭ್ಸಿಮ್ರಾನ್ ಸಿಂಗ್ (9 ರನ್, 48 ಎಸೆತ, 6 ಬೌಂಡರಿ, 7 ಸಿಕ್ಸರ್) ಅದ್ಭುತ ಅರ್ಧಶತಕ ಗಳಿಸಿದರು. ಶ್ರೇಯಸ್ ಅಯ್ಯರ್ (45) ಮತ್ತು ಶಶಾಂಕ್ ಸಿಂಗ್ (ಔಟಾಗದೆ 33) ಉತ್ತಮ ಪ್ರದರ್ಶನ ನೀಡಿದರು. ಲಖನೌ ಬೌಲರ್‌ಗಳಲ್ಲಿ ಆಕಾಶ್ ಮಹಾರಾಜ್ ಸಿಂಗ್ ಮತ್ತು ದಿಗ್ವೇಶ್ ರಾಥಿ ತಲಾ ಎರಡು ವಿಕೆಟ್ ಪಡೆದರೆ, ಪ್ರಿನ್ಸ್ ಯಾದವ್ ಒಂದು ವಿಕೆಟ್ ಪಡೆದರು.
ನಂತರ, ಆಯುಷ್ ಬಡೋನಿ (74) ಮತ್ತು ಅಬ್ದುಲ್ ಸಮದ್ (45) ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 199 ರನ್‌ಗಳಿಗೆ ಸೀಮಿತವಾಯಿತು. ಪಂಜಾಬ್ ಬೌಲರ್‌ಗಳಲ್ಲಿ, ಅರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದರೆ, ಅಜ್ಮತುಲ್ಲಾ ಒಮರ್ ಜಾಯ್ ಎರಡು ವಿಕೆಟ್ ಪಡೆದರು ಮತ್ತು ಮಾರ್ಕೊ ಜಾನ್ಸೆನ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್)