ಕ್ರೀಡೆ

ಹಾಲಿ ಚಾಂಪಿಯನ್ಸ್ ಮುಂಬೈ ವಿರುದ್ಧ ಜಮ್ಮು-ಕಾಶ್ಮೀರಕ್ಕೆ ಭರ್ಜರಿ ಜಯ; ಮತ್ತೊಮ್ಮೆ ಮುಖಭಂಗ ಅನುಭವಿಸಿದ Rohit Sharma

ಮುಂಬೈ: ಇಲ್ಲಿನ ಶರದ್​ ಪವಾರ್​ ಕ್ರಿಕೆಟ್​ ಅಕಾಡೆಮಿಯಲ್ಲಿ ಮುಂಬೈ ಹಾಗೂ ಜಮ್ಮು-ಕಾಶ್ಮೀರ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಆತಿಥೇಯರಿಗೆ ಪ್ರವಾಸಿ ತಂಡವು 5 ವಿಕೆಟ್​ಗಳ ಸೋಲುಣಿಸಿದ್ದು, ಹಾಲಿ ಚಾಂಪಿಯನ್ಸ್​ಗೆ ಭಾರೀ ಮುಖಭಂಗವನ್ನುಂಟು ಮಾಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಮುಂಬೈ ತಂಡಕ್ಕೆ ಜಮ್ಮು-ಕಾಶ್ಮೀರದ ಬೌಲರ್​ಗಳು ಆಘಾತ ನೀಡುವಲ್ಲಿ ಯಶಸ್ವಿಯಾದರು. ಮೊದಲ ಇನ್ನಿಂಗ್ಸ್​ನಲ್ಲಿ 12 ರನ್​ಗಳಿಸುವ ವೇಳೆಗೆ ರೋಹಿತ್​ ಶರ್ಮ, ಯಶಸ್ವಿ ಜೈಸ್ವಾಲ್​, ಶಿವಂ ದುಬೆ ಅವರನ್ನು ವಿಕೆಟ್​ಅನ್ನು ಎದುರಾಳಿ ತಂಡದವರು ಕಬಳಿಸಿದರು. ಶಾರ್ದೂಲ್​ ಠಾಕೂರ್​ (51 ರನ್​, 57 ಎಸೆತ, 5 ಬೌಂಡರಿ, 2 ಸಿಕ್ಸರ್​) ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 120 ರನ್​ಗಳಿಗೆ ಆಲೌಟ್​ ಆಯಿತು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಜಮ್ಮು-ಕಾಶ್ಮೀರದ ಪರ ಆರಂಭಿಕ ಶುಭಂ ಖಜುರಿಯಾ (53 ರನ್, 75 ಎಸೆತ, 4 ಬೌಂಡರಿ, 3 ಸಿಕ್ಸರ್​) ಮಧ್ಯಮ ಕ್ರಮಾಂಕದ ಬ್ಯಾಟರ್​ ಅಬಿದ್​ ಮುಷ್ತಾಕ್​ (44 ರನ್​, 37 ಎಸೆತ, 6 ಬೌಂಡರಿ, 2 ಸಿಕ್ಸರ್​) ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 206 ರನ್​ಗಳಿಗೆ ಆಲೌಟ್​ ಆಯಿತು.

86 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​​ ಆರಂಭಿಸಿದ ಮುಂಬೈ ತಂಡಕ್ಕೆ ಮತ್ತೊಮ್ಮೆ ಜಮ್ಮು-ಕಾಶ್ಮೀರದ ಬೌಲರ್​ಗಳು ಮತ್ತೊಮ್ಮೆ  ಆಘಾತ ನೀಡುವಲ್ಲಿ ಯಶಸ್ವಿಯಾದರು. ಶಾರ್ದೂಲ್ ಠಾಕೂರ್​ (119 ರನ್​, 135 ಎಸೆತ, 18 ಬೌಂಡರಿ) ತನುಷ್ ಕೋಟ್ಯಾನ್ (62 ರನ್, 136 ಎಸೆತ, 6 ಬೌಂಡರಿ) ನೆರವಿನಿಂದಾಗಿ 290 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಎದುರಾಳಿಗಳಿಗೆ 207 ರನ್​ಗಳ ಗುರಿಯನ್ನು ಮುಂಬೈ ತಂಡ ನೀಡಿತು.

207 ರನ್​ಗಳ ಗುರಿ ಪಡೆದ ಜಮ್ಮು-ಕಾಶ್ಮೀರ ತಂಡವು 5 ವಿಕೆಟ್​ಗಳು ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿತು. ದೇಶೀಯ ಕ್ರಿಕೆಟ್​ನಲ್ಲಿ ಮುಂಬೈ ವಿರುದ್ಧ ಜಮ್ಮು ಕಾಶ್ಮೀರಕ್ಕೆ ಇದು ಮೊದಲ ಗೆಲುವು ಎಂಬುದು ವಿಶೇಷ. ತಮ್ಮ ಫಾರ್ಮ್​ ನಿರೂಪಿಸಲು 10 ವರ್ಷಗಳ ಬಳಿಕ ರಣಜಿಯಲ್ಲಿ ಕಣಕ್ಕಿಳಿದಿದ್ದ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಮತ್ತೊಮ್ಮೆ ಮುಖಭಂಗವನ್ನು ಅನುಭವಿಸಿದರು.