ಧರ್ಮಶಾಲಾ: ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್‌ಗಳಿಂದ ಸೋಲು ಅನುಭವಿಸಿ ಆರಂಭದಲ್ಲೇ ಎಡವಿದ್ದ ಇಂಗ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ ಇಂದು ನಡೆದ ಪಂದ್ಯದಲ್ಲಿ 137 ರನ್ಗಳ ಭಾರೀ ಅಂತರದಿಂದ ಜಯ ದಾಖಲಿಸುವ ಮೂಲಕ ಮತ್ತೆ ಗೆಲುವಿನತ್ತ ಮುಖ ಮಾಡಿದೆ.
ಇಂದು ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಂಗ್ಲ ಪಡೆ, ಡೇವಿಡ್ ಮಲಾನ್ (140 ರನ್, 107 ಎಸೆತ, 16 ಬೌಂಡರಿ, 5 ಸಿಕ್ಸರ್), ಜೋ ರೂಟ್ (82 ರನ್, 68 ಎಸೆತ, 8 ಬೌಂಡರಿ, 1 ಸಿಕ್ಸರ್) ಜಾನಿ ಬೈರ್ಸ್ಟೋ (52 ರನ್, 59 ಎಸೆತ, 8 ಬೌಂಡರಿ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 364 ರನ್ಗಳ ಬೃಹತ್ ಗುರಿಯನ್ನು ದಾಖಲಿಸಿತು.
ಬಾಂಗ್ಲಾಪರ ಮೆಹದಿ ಹಸನ್ 4 ವಿಕೆಟ್ ಕಬಳಿಸಿ ಮಿಂಚಿದರೆ, ಶೋರಿಫುಲ್ ಇಸ್ಲಾಮ್ 3 ಮತ್ತು ತಸ್ಕಿನ್ ಅಹ್ಮದ್ ಹಾಗೂ ನಾಯಕ ಶಕೀಬ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ವಿಕೆಟ್ ಉರುಳಿಸಿದರು ಸಹ ಇಂಗ್ಲೆಂಡ್ ತಂಡದ ರನ್ ವೇಗಕ್ಕೆ ಯಾವುದೇ ಬೌಲರ್ ಸಹ ಕಡಿವಾಣ ಹಾಕಲಿಲ್ಲ.
ಆಂಗ್ಲ ಪಡೆ ನೀಡಿದ ಗುರಿ ಬೆನ್ನತ್ತಿದ ಬಾಂಗ್ಲಾ, 48 ಓವರ್ಗಳಲ್ಲಿ 227 ರನ್ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾ ಪರ ಲಿಟನ್ ದಾಸ್ (76 ರನ್, 66 ಎಸೆತ, 7 ಬೌಂಡರಿ, 2 ಸಿಕ್ಸರ್), ಮುಶ್ಫಿಕರ್ ರಹೀಮ್ (54 ರನ್, 64 ಎಸೆತ, 4 ಬೌಂಡರಿ), ತೌಹಿದ್ ಹೃದಯೋಯ್ (39 ರನ್, 61 ಎಸೆತ, 2 ಬೌಂಡರಿ) ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್ಮೆನ್ಗಳು ಕೂಡ ತಂಡಕ್ಕೆ ನೆರವಾಗಲಿಲ್ಲ.
ಇಂಗ್ಲೆಂಡ್ ಪರ ಮೊನೆಚಾದ ಬೌಲಿಂಗ್ ದಾಳಿ ನಡೆಸಿದ ರೀಸ್ ಟೋಪ್ಲಿ 10 ಓವರ್ಗಳಲ್ಲಿ 1 ಮೇಡನ್ ಎಸೆದು ಕೇವಲ 43 ರನ್ ನೀಡಿ 4 ವಿಕೆಟ್ ಕಬಳಿಸಿದರು. ಕ್ರಿಸ್ ವೋಕ್ಸ್ 2 ವಿಕೆಟ್ ಪಡೆದು ಗಮನ ಸೆಳೆದರು. ಉಳಿದಂತೆ ಸ್ಯಾಮ್ ಕರನ್, ಮಾರ್ಕ್ವುಡ್, ಆದಿಲ್ ರಶೀದ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ತಲಾ ಒಂದೊಂದು ವಿಕೆಟ್ ಪಡೆದರು. (ಏಜೆನ್ಸೀಸ್)