ಬೆಂಗಳೂರು: ಮುಂಬರುವ ಐಪಿಎಲ್ 14ನೇ ಆವೃತ್ತಿಗೆ 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಹೊಸ ಜೆರ್ಸಿಯನ್ನು ನಾಯಕ ಎಂಎಸ್ ಧೋನಿ ಬುಧವಾರ ಅನಾವರಣಗೊಳಿಸಿದರು. ದೇಶದ ಸೈನಿಕರಿಗೆ ವಿಶೇಷ ಗೌರವ ಸಲ್ಲಿಸುವ ಸಲುವಾಗಿ ಭುಜದ ಮೇಲೆ ಸೇನೆಯ ಬಣ್ಣವನ್ನು ಜೆರ್ಸಿ ಹೊಂದಿರುವುದು ವಿಶೇಷವಾಗಿದೆ.
ಸಿಎಸ್‌ಕೆ ತಂಡ ಐಪಿಎಲ್‌ನಲ್ಲಿ 3 ಬಾರಿಯ ಚಾಂಪಿಯನ್ ಎಂದು ಸಾಂಕೇತಿಕವಾಗಿ ತೋರಿಸುವ ಸಲುವಾಗಿ ಜೆರ್ಸಿಯಲ್ಲಿ ಎದೆಯ ಎಡಭಾಗದಲ್ಲಿರುವ ಸಿಎಸ್‌ಕೆ ಲಾಂಛನದ ಮೇಲೆ 3 ಸ್ಟಾರ್‌ಗಳನ್ನು ಹಾಕಲಾಗಿದೆ. ಸಿಎಸ್‌ಕೆ ತಂಡ 2010, 2011 ಮತ್ತು 2018ರಲ್ಲಿ ಐಪಿಎಲ್ ಚಾಂಪಿಯನ್ ಆಗಿತ್ತು. ಧೋನಿ ಜೆರ್ಸಿ ಅನಾವರಣಗೊಳಿಸುತ್ತಿರುವ ವಿಡಿಯೋವನ್ನು ಸಿಎಸ್‌ಕೆ ತಂಡ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
‘ಸೈನಿಕರ ನಿಸ್ವಾರ್ಥ ಮತ್ತು ಮಹತ್ವದ ಪಾತ್ರದ ಬಗ್ಗೆ ಅರಿವು ಮೂಡಿಸುವುದನ್ನು ನಾವು ದೀರ್ಘಕಾಲದಿಂದ ಬಯಸಿದ್ದೆವು. ಇದೀಗ ಸೈನಿಕರ ಸೇವೆಯ ಬಗ್ಗೆ ಈ ಸೈನ್ಯದ ಬಣ್ಣದ (ಕ್ಯಾಮುಪ್ಲಾಷ್) ಮೂಲಕ ಗೌರವ ಸಲ್ಲಿಸುತ್ತಿದ್ದೇವೆ. ಸೈನಿಕರು ನಿಜವಾದ ಹೀರೋಗಳು’ ಎಂದು ಸಿಎಸ್‌ಕೆ ತಂಡದ ಸಿಇಒ ಕೆಎಸ್ ವಿಶ್ವನಾಥನ್ ತಿಳಿಸಿದ್ದಾರೆ.
ಸಿಎಸ್‌ಕೆ ತಂಡ ಈ ಮುನ್ನ 2019ರಲ್ಲಿ ಸೈನಿಕರ ನಿಧಿಗೆ 2 ಕೋಟಿ ರೂಪಾಯಿ ದೇಣಿಗೆ ನೀಡಿತ್ತು. ಎಂಎಸ್ ಧೋನಿ ಭಾರತೀಯ ಭೂಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಕೂಡ ಆಗಿದ್ದು, 2019ರಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನಲ್ಲಿ ತರಬೇತಿಯನ್ನೂ ಪಡೆದಿದ್ದರು ಮತ್ತು ಕಾಶ್ಮೀರದಲ್ಲಿ ಕೆಲಕಾಲ ಕರ್ತವ್ಯವನ್ನೂ ನಿರ್ವಹಿಸಿದ್ದರು.
2008ರ ಚೊಚ್ಚಲ ಐಪಿಎಲ್ ಆವೃತ್ತಿಯ ಬಳಿಕ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಜೆರ್ಸಿ ಇದೇ ಮೊದಲ ಬಾರಿಗೆ ಮರುವಿನ್ಯಾಸಗೊಂಡಿದೆ. ತಂಡದ ಜೆರ್ಸಿಯಲ್ಲಿ ಈ ಬಾರಿ ಹಲವು ಹೊಸ ಕಂಪನಿಗಳ ಲಾಂಛನ ಸ್ಥಾನ ಪಡೆದಿದ್ದು, ಹೊಸ ಜೆರ್ಸಿಯನ್ನು ಸಿಎಸ್‌ಕೆ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಅಭಿಮಾನಿಗಳು ಖರೀದಿಸಬಹುದಾಗಿದೆ.