ಕ್ರೀಡೆ

ಮೊದಲ ಪಂದ್ಯಕ್ಕೂ ಮುನ್ನವೇ ಸಿಎಸ್‌ಕೆ ತಂಡಕ್ಕೆ ಶಾಕ್..

ದುಬೈ: ಮೂರು ಬಾರಿ ಚಾಂಪಿಯನ್ ಸಿಎಸ್‌ಕೆ ತಂಡ ಮೊದಲ ಪಂದ್ಯಕ್ಕೂ ಮುನ್ನವೇ ಆಘಾತ ಎದುರಿಸಿದೆ. ಆರಂಭಿಕ ಬ್ಯಾಟ್ಸ್‌ಮನ್ಡು ಫಾಫ್ ಡು ಪ್ಲೆಸಿಸ್ ಹಾಗೂ ಸ್ಯಾಮ್ ಕರ‌್ರನ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ದ.ಆಫ್ರಿಕಾದ ಪ್ಲೆಸಿಸ್ ಹಾಗೂ ಇಂಗ್ಲೆಂಗ್‌ನ ಕರ‌್ರನ್ ಸಿಎಸ್‌ಕೆ ಪರ ಇದುವರೆಗೂ ಕ್ರಮವಾಗಿ ಅತಿಹೆಚ್ಚು ರನ್ ಹಾಗೂ ವಿಕೆಟ್ ಕಬಳಿಸಿದ್ದರು. ಪ್ಲೆಸಿಸ್ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದರೆ, ಕರ‌್ರನ್ ಬುಧವಾರವಷ್ಟೇ ದುಬೈಗೆ ಆಗಮಿಸಿದರು. ಕರ‌್ರನ್ 6 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗುವ ಹಿನ್ನೆಲೆಯಲ್ಲಿ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

* ಐಪಿಎಲ್‌ಗೆ ಮುಜೀಬ್ ಅಲಭ್ಯ ಸಾಧ್ಯತೆ

ವೀಸಾ ಸಮಸ್ಯೆಯಿಂದಾಗಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಐಪಿಎಲ್ ಭಾಗ-2 ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಗಳಿವೆ. 14ನೇ ಆವೃತ್ತಿಯ ಟೂರ್ನಿಯೂ ಭಾನುವಾರ ಆರಂಭಗೊಳ್ಳುತ್ತಿದ್ದು, ಅಫ್ಘಾನಿಸ್ತಾನದ  ಸ್ಪಿನ್ನರ್‌ಗೆ ವೀಸಾ ಸಮಸ್ಯೆಯಿಂದಾಗಿ ಯುಎಇ ತಲುಪುವುದು ಅನುಮಾನ ಮೂಡಿಸಿದೆ. ಕಡೇ ಕ್ಷಣದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೇರ್‌ಸ್ಟೋ ಹಿಂದೆ ಸರಿದ ಆಘಾತದಲ್ಲಿದ್ದ ಸನ್‌ರೈಸರ್ಸ್‌ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ‘ಮುಜೀಬ್ ಯುಎಇಗೆ ಯಾವಾಗ ಬರುವರು ಎಂದು ಇನ್ನು ಖಾತ್ರಿಯಾಗಿಲ್ಲ. ಅವರಿಗೆ ವೀಸಾ ಸಿಗುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ’ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.