ಕ್ರೀಡೆ

CSK ಬೆನ್ನಿಗೆ ಚೂರಿ ಹಾಕಿದ ಚಾಹರ್​: ಸಹೋದರನ ವಿರುದ್ಧ ಮಾಲತಿ ಚಾಹರ್​ ಮಾರ್ಮಿಕ ಪೋಸ್ಟ್​! Deepak Chahar

Deepak Chahar : ಐಪಿಎಲ್ 2025ನೇ ಆವೃತ್ತಿಯ ಕ್ರೇಜ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೈದಾನದಲ್ಲಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆಯಾಗುತ್ತಿದ್ದು, ನೋಡುಗರ ಮೈರೋಮಾಂಚನವಾಗುತ್ತಿದೆ. ಭಾನುವಾರ (ಮಾರ್ಚ್​ 23) ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯವನ್ನು ಸಿಎಸ್‌ಕೆ ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದೇ ಸಂದರ್ಭದಲ್ಲಿ ದೀಪಕ್ ಚಾಹರ್​ ಮುಂಬೈ ಪರ ಸರ್ವತೋಮುಖ ಪ್ರದರ್ಶನ ನೀಡಿದರು.

ಮೊದಲು ಬ್ಯಾಟಿಂಗ್ ಮಾಡಿದ ಚಾಹರ್​ ಕೇವಲ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 28 ​​ರನ್ ಗಳಿಸಿ ಅಜೇಯರಾಗುಳಿದರು. ಅವರ ಸ್ಟ್ರೈಕ್ ರೇಟ್ 186.67 ಆಗಿತ್ತು. ನಂತರ ಅವರು ಎರಡು ಓವರ್‌ಗಳನ್ನು ಬೌಲಿಂಗ್ ಮಾಡಿ 18 ರನ್‌ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು.

ಈ ಪಂದ್ಯದ ಬೆನ್ನಲ್ಲೇ ಚಾಹರ್​ ಅವರ ಸಹೋದರಿ ಮಾಲತಿ ಚಾಹರ್​ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ದೀಪಕ್ ಚಾಹರ್ ತಮ್ಮ ವೃತ್ತಿಜೀವನದಲ್ಲಿ ಏಳು ವರ್ಷಗಳ ಕಾಲ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಪ್ರತಿನಿಧಿಸಿದ್ದರು. ಈ ಸಮಯದಲ್ಲಿ, ತಮ್ಮ ಸಹೋದರ ತನ್ನ ಹಳೆಯ ತಂಡದ ವಿರುದ್ಧ ಆಡಿದ್ದಕ್ಕಾಗಿ ಹಾಸ್ಯಮಯವಾಗಿ ಮಾಲತಿ ಟ್ರೋಲ್ ಮಾಡಿದರು. ಚಾಹರ್​ನನ್ನು ಬಾಹುಬಲಿ ಸಿನಿಮಾದ ಕಟ್ಟಪ್ಪ ಪಾತ್ರಧಾರಿಗೆ ಮಾಲತಿ ಹೋಲಿಸಿದರು.

ಮುಂಬೈ ಪರ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ದೀಪಕ್ ಚಹಾರ್ ಅವರ ಫೋಟೋಗಳನ್ನು ಮತ್ತು ಬಾಹುಬಲಿ ಸಿನಿಮಾದಲ್ಲಿ ನಾಯಕನ ಬೆನ್ನಿಗೆ ಕಟ್ಟಪ್ಪ ಚೂರಿ ಹಾಕುತ್ತಿರುವ ಫೋಟೋವನ್ನು ಒಟ್ಟಿಗೆ ಸೇರಿಸಿ, ಶೇರ್​ ಮಾಡಿರುವ ಮಾಲತಿ, ನಗುವ ಎಮೋಜಿಯನ್ನು ಸಹ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ದೀಪಕ್ ಚಹಾರ್ 2018ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತಂಡವು ಅವರನ್ನು ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಬಿಡುಗಡೆ ಮಾಡಿತು. ಹರಾಜಿನಲ್ಲಿ ಚಾಹರ್​ಗಾಗಿ ಚೆನ್ನೈ ತೀವ್ರ ಪೈಪೋಟಿ ನಡೆಸಿತು. ಆದಾಗ್ಯೂ, ಮುಂಬೈ ಇಂಡಿಯನ್ಸ್ ದೀಪಕ್ ಚಹಾರ್ ಅವರನ್ನು 9.25 ಕೋಟಿ ರೂಪಾಯಿಗೆ ಖರೀದಿಸಿತು. (ಏಜೆನ್ಸೀಸ್​)