ಬೆಂಗಳೂರು: ಸಿಎಸ್ಕೆ ತಂಡದ ಪ್ರಮುಖ ಆಟಗಾರನಾಗಿದ್ದ ಸುರೇಶ್ ರೈನಾ ಅವರಿಗೆ ನಾಯಕ ಎಂಎಸ್ ಧೋನಿ ನಂತರದ ಸ್ಥಾನ ನೀಡಲಾಗಿತ್ತು. ವೈಯಕ್ತಿಕ ಕಾರಣಗಳಿಂದಾಗಿ ತಂಡ ತೊರೆದು ತವರು ಸೇರಿಕೊಂಡಿರುವ ರೈನಾ ವಿರುದ್ಧ ಸೋಮವಾರವಷ್ಟೇ ತಂಡದ ಮಾಲೀಕ ಶ್ರೀನಿವಾಸನ್ ಗುಡುಗಿ, ಬಳಿಕ ಬೆಂಬಲ ನೀಡುವುದಾಗಿ ಉಲ್ಟಾ ಹೊಡೆದಿದ್ದರು. ಕಠಿಣ ಸ್ಥಿತಿಯಲ್ಲಿರುವ ಚಿನ್ನ ತಲಾ ಕುಟುಂಬಕ್ಕೆ ನಮ್ಮ ಬೆಂಬಲ ಎಂದು ತನ್ನ ಅಧಿಕೃತ ಟ್ವಿಟರ್ನಲ್ಲಿ ಟ್ವೀಟ್ ಮಾಡುವ ಮೂಲಕ ರೈನಾಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದೆ.
ಮಂಗಳವಾರವಷ್ಟೇ ತಮ್ಮ ಸಹೋದರ ಸಂಬಂಧಿ ಹತ್ಯೆ ಕುರಿತು ಪ್ರತಿಕ್ರಿಯಿಸಿರುವ ರೈನಾ, ನಮ್ಮ ಕುಟುಂಬಕ್ಕೆ ಏನಾಗಿದೆ ಎಂದು ಸರಣಿ ಟ್ವೀಟ್ ಮಾಡಿದ್ದರು. ಜತೆಗೆ ಘಟನೆ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಪಂಜಾಬ್ ಸಿಎಂ ಹಾಗೂ ಪೊಲೀಸರಿಗೆ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ. ಇದೀಗ ಚೆನ್ನೈ ತಂಡ ಟ್ವೀಟ್ ಮೂಲಕ ರೈನಾಗೆ ಬೆಂಬಲ ಘೋಷಿಸಿದೆ.
2008 ರಿಂದಲೂ ಸಿಎಸ್ಕೆ ತಂಡದ ಭಾಗವಾಗಿರುವ ರೈನಾ, ಉಪ-ನಾಯಕನಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಆಗಸ್ಟ್ 29 ರಂದು ವೈಯಕ್ತಿಕ ಕಾರಣ ನೀಡಿ ರೈನಾ ತಂಡ ತೊರೆದಿದ್ದರು. ಇದು 3 ಬಾರಿ ಚಾಂಪಿಯನ್ ಸಿಎಸ್ಕೆ ತಂಡಕ್ಕೆ ಭಾರಿ ಹಿನ್ನಡೆವುಂಟಾಗಿದೆ. ಮೂರನೇ ಕ್ರಮಾಂಕದಲ್ಲಿ ತಂಡಕ್ಕೆ ಆಧಾರ ಸ್ತಂಭವಾಗಿದ್ದರು ರೈನಾ. ಜತೆಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ (5368) ಗಳಿಸಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಜತೆಗೆ 12 ಐಪಿಎಲ್ನಲ್ಲೂ ಪ್ಲೇ ಆಫ್ ಹಂತಕ್ಕೇರಿದ ಸಾಧನೆ ಮಾಡಿರುವ ಸಿಎಸ್ಕೆ 8 ಬಾರಿ ಫೈನಲ್ ಪ್ರವೇಶಿಸಿದ ದಾಖಲೆ ಹೊಂದಿದೆ.