ವೈಭವ್ ಸೂರ್ಯವಂಶಿ ಆಟಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಫಿದಾ
- ಶ್ರೀಲಂಕಾ ವಿರುದ್ಧ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಇತಿಹಾಸ ಬರೆದ ವೈಭವ್ ಸೂರ್ಯವಂಶಿ
- ವಂಡರ್ ಕಿಡ್ ಆಟಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಫಿದಾ
- ಯುವ ಆಟಗಾರನ ತಾಳ್ಮೆಯನ್ನು ಕೊಂಡಾಡಿದ ಮಹೀಂದ್ರಾ ಟ್ವಿಟ್ ವೈರಲ್
ಟ್ವಿಟರ್: ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಈಗ ಎಲ್ಲೇ ನೋಡಿದ್ರೂ ಬರೀ ವಂಡಕ್ ಕಿಡ್ ವೈಭವ್ ಸೂರ್ಯವಂಶಿ ಹೆಸರೇ ಕೇಳಿಬರುತ್ತಿದೆ. ಟೀಕಿಸಿದವರ ಬಾಯಿ ಮುಚ್ಚಿಸುವುದು ಹೇಗೆ ಎನ್ನುವುದನ್ನು ಈ ಯುವ ಆಟಗಾರ ಬ್ಯಾಟ್ ಹಿಡಿದು ತೋರಿಸಿಕೊಟ್ಟಿದ್ದಾನೆ.
ಜೂನ್ 21 ರಂದು ದಂಬುಲಾದ ರಂಗಿರಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ವೈಭವ್ ಆಡಿದ ಬಿರುಗಾಳಿಯ ಇನ್ನಿಂಗ್ಸ್ ಇಡೀ ಕ್ರಿಕೆಟ್ ಲೋಕವನ್ನೇ ಬೆರಗಾಗಿಸಿದೆ.
ಶ್ರೀಲಂಕಾ ಆಟಗಾರರ ನಡುವೆ ನಡೆದಿತ್ತು ದೈಹಿಕ ವಾಗ್ವಾದ!
ಜೂನ್ 15ರಂದು ನಡೆದ ಮೊದಲ ಪಂದ್ಯದಲ್ಲಿ, ನಡೆದಿದ್ದ ಸೂಪರ್ ಓವರ್ ಪಂದ್ಯದಲ್ಲಿ ಭಾರತ ಎ ತಂಡ ಶ್ರೀಲಂಕಾ ಎ ಎದುರು ಸೋತಿತ್ತು. ಗೆದ್ದ ಜೋಶ್‌ನಲ್ಲಿ ಶ್ರೀಲಂಕಾ ಆಟಗಾರರು ಮೈದಾನದಲ್ಲೇ ಅತಿಯಾಗಿ ಸಂಭ್ರಮಿಸಲು ಶುರು ಮಾಡಿದ್ದರು. ಅಷ್ಟೇ ಅಲ್ಲದೇ, ಶ್ರೀಲಂಕಾದ ಫೀಲ್ಡರ್ ವಿಶೆನ್ ಹಲಂಬಗೆ ಭಾರತದ ವೈಭವ್ ಸೂರ್ಯವಂಶಿ ವಿರುದ್ಧ ಕಿಡಿಕಾರಿದ್ದರು.
ಮಾತು ಬೆಳೆದು ಇಬ್ಬರ ನಡುವೆ ಜೋರು ಗಲಾಟೆ ನಡೆದಿತ್ತು. ಪರಿಸ್ಥಿತಿ ಎಷ್ಟು ಕೈಮೀರಿತ್ತೆಂದರೆ, ಇಬ್ಬರೂ ದೈಹಿಕ ವಾಗ್ವಾದಕ್ಕಿಳಿದಿದ್ದರು. ಈ ಕಾರಣಕ್ಕೆ ಮ್ಯಾಚ್ ರೆಫರಿ ಇಬ್ಬರಿಗೂ ಬಿಸಿ ಮುಟ್ಟಿಸಿ, ಪಂದ್ಯದ ಶುಲ್ಕದಲ್ಲಿ ಶೇ. 50 ರಷ್ಟು ದಂಡ ವಿಧಿಸಿದ್ದರು.
ಆನಂದ್ ಮಹೀಂದ್ರಾ ಹೇಳಿದ್ದೇನು?
ವೈಭವ್ ಸೂರ್ಯವಂಶಿಯ ಈ ಅದ್ಭುತ ಆಟ ಕೇವಲ ಕ್ರಿಕೆಟ್ ಮೈದಾನಕ್ಕೆ ಸೀಮಿತವಾಗಲಿಲ್ಲ. ದೇಶದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ (Anand Mahindra on Vaibhav Suryavanshi) ಅವರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ವೈಭವ್‌ನನ್ನು ಹಾಡಿ ಹೊಗಳಿದ್ದಾರೆ.
ವೈಭವ್ ಆಡಿದ ಐತಿಹಾಸಿಕ ಇನ್ನಿಂಗ್ಸ್‌ಗಿಂತಲೂ, ಆತ ಮೈದಾನದಲ್ಲಿ ಒತ್ತಡವನ್ನು ನಿಭಾಯಿಸಿದ ರೀತಿ, ಆತನ ಮಾನಸಿಕ ದೃಢತೆ ಮತ್ತು ತಾಳ್ಮೆ ನನ್ನನ್ನು ತುಂಬಾ ಸೆಳೆಯಿತು, ಎಂದು ಮಹೀಂದ್ರಾ ಬರೆದುಕೊಂಡಿದ್ದಾರೆ.
ಅಲ್ಲದೆ, ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಎದುರಾಗುವ ಕಠಿಣ ಸನ್ನಿವೇಶಗಳನ್ನು ಮತ್ತು ಒತ್ತಡಗಳನ್ನು ಹೇಗೆ ನೈತಿಕತೆಯಿಂದ ಹಾಗೂ ತಾಳ್ಮೆಯಿಂದ ಎದುರಿಸಬೇಕು ಎಂಬುದಕ್ಕೆ ವೈಭವ್ ಸೂರ್ಯವಂಶಿಯೇ ಅತ್ಯುತ್ತಮ ಉದಾಹರಣೆ ಎಂದು ಅವರು ಶ್ಲಾಘಿಸಿದ್ದಾರೆ.
ಬ್ಯಾಟ್‌ನಿಂದ ಸೇಡು ತೀರಿಸಿಕೊಂಡ ಭಾರತದ ಹುಲಿ!
ಮೈದಾನದಲ್ಲಿ ಲಂಕಾ ಆಟಗಾರರು ಎಷ್ಟೇ ಕಾಲು ಕೆರೆದು ಜಗಳಕ್ಕೆ ಬಂದರೂ, ವೈಭವ್ ಮಾತ್ರ ಸೈಲೆಂಟ್ ಆಗಿದ್ದರು. ತನ್ನ ಮೇಲಿನ ಕೋಪವನ್ನೆಲ್ಲಾ ಮನಸ್ಸಿನಲ್ಲೇ ಇಟ್ಟುಕೊಂಡು, ನಿನ್ನೆ ನಡೆದ ಫಿನಾಲೆಯಲ್ಲಿ ಲಂಕಾ ಬೌಲರ್‌ಗಳನ್ನ ಬೆಂಡೆತ್ತಿಬಿಟ್ಟರು.
ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಗಳಿಸಿ, ಒಟ್ಟು 29 ಎಸೆತಗಳಲ್ಲಿ 94 ರನ್ ಬಾರಿಸುವ ಮೂಲಕ ಶ್ರೀಲಂಕಾ ವಿರುದ್ಧ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಜೂನ್ 15ರ ಸೋಲಿಗೆ ಮತ್ತು ಲಂಕಾ ಆಟಗಾರರ ನಡುವಳಿಕೆಗೆ ಸರಿಯಾದ ಧಾಟಿಯಲ್ಲೇ ಸೇಡು ತೀರಿಸಿಕೊಂಡು, ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ, (ಏಜನ್ಸೀಸ್).