ದೋಹಾ: ನಿನ್ನೆ (ನ.24) ಕತಾರ್ನ ದೋಹಾ ಕ್ರಿಕೆಟ್ ಮೈದಾನದಲ್ಲಿ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ( Vaibhav Suryavanshi ) ನಡೆಸಿದ ಬಿರುಗಾಳಿಯಂತಹ ಬ್ಯಾಟಿಂಗ್ ಆರ್ಭಟಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತಂಡ ಅಕ್ಷರಶಃ ತತ್ತರಿಸಿ ಹೋಗಿದೆ. ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್-2026ರ ಟೂರ್ನಿಯಲ್ಲಿ ಭಾರತ-ಎ ತಂಡದ ವಿರುದ್ಧ ಎದುರಾದ ಹೀನಾಯ ಸೋಲಿನ ಬಳಿಕ ಯುಎಇ ನಾಯಕ ಬಾಸಿಲ್ ಹಮೀದ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ವೈಭವ್ ಅವರ ಈ ಅಬ್ಬರದ ಆಟವನ್ನು ತಡೆಯುವುದು ಅಸಾಧ್ಯವೆಂದು ಒಪ್ಪಿಕೊಂಡಿರುವ ಬಾಸಿಲ್, ಈ ಸೋಲಿನ ಆಘಾತದಿಂದ ಹೊರಬರಲು ತಮ್ಮ ತಂಡಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ ಎಂದು ಹೇಳಿದ್ದಾರೆ.
ಮಂಗಳವಾರ ದೋಹಾದ ಯೂನಿವರ್ಸಿಟಿ ಆಫ್ ದೋಹಾ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಮೈದಾನದಲ್ಲಿ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ 2026 ಟೂರ್ನಿಯ ಮಹತ್ವದ ಪಂದ್ಯದಲ್ಲಿ ಭಾರತ-ಎ ತಂಡವು ಯುಎಇ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡವು ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಯುಎಇ ಪರ ಹರ್ಪ್ರೀತ್ ಸಿಂಗ್ ಭಾಟಿಯಾ 144 ಎಸೆತಗಳಲ್ಲಿ 130 ರನ್ ಸಿಡಿಸಿ ಭರ್ಜರಿ ಶತಕ ಬಾರಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ನಾಯಕ ಬಾಸಿಲ್ ಹಮೀದ್ ಅಜೇಯ 36 ರನ್ ಗಳಿಸಿದರು. ಭಾರತದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅರ್ಷದ್ ಖಾನ್ ಪ್ರಮುಖ 4 ವಿಕೆಟ್ ಕಬಳಿಸಿ ಯುಎಇ ರನ್ ವೇಗಕ್ಕೆ ಕಡಿವಾಣ ಹಾಕಿದರು.
250 ರನ್ಗಳ ಗುರಿ ಬೆನ್ನಟ್ಟಿದ ಭಾರತ-ಎ ತಂಡಕ್ಕೆ ಯುವ ಆಟಗಾರ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದರು. ಕ್ರೀಸ್ಗೆ ಇಳಿದ ಮೊದಲ ಎಸೆತದಿಂದಲೇ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದ ವೈಭವ್, ಕೇವಲ 53 ಎಸೆತಗಳಲ್ಲಿ ಬರೋಬ್ಬರಿ 204 ರನ್ ಚಚ್ಚುವ ಮೂಲಕ ಎದುರಾಳಿ ಬೌಲರ್ಗಳ ಬೆವರಿಳಿಸಿದರು. ಅವರ ಈ ಐತಿಹಾಸಿಕ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ ಬರೋಬ್ಬರಿ 28 ಭರ್ಜರಿ ಸಿಕ್ಸರ್ಗಳು ಸೇರಿದ್ದವು. ಕೇವಲ 16 ಎಸೆತಗಳಲ್ಲಿ ಅರ್ಧಶತಕ, 28 ಎಸೆತಗಳಲ್ಲಿ ಶತಕ, 40 ಎಸೆತಗಳಲ್ಲಿ 150 ರನ್ ಪೂರೈಸಿದ ವೈಭವ್, ಕೇವಲ 52 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಲಿಸ್ಟ್-ಎ ಕ್ರಿಕೆಟ್ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದರು.
ಈ ಅಮೋಘ ಇನ್ನಿಂಗ್ಸ್ ಮೂಲಕ ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕದ ಹಲವು ಹಳೆಯ ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ. ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್ಗುರ್ಕ್ 29 ಎಸೆತಗಳಲ್ಲಿ ಬಾರಿಸಿದ್ದ ಅತಿ ವೇಗದ ಶತಕ ಹಾಗೂ ಚಾಡ್ ಬೋವ್ಸ್ 103 ಎಸೆತಗಳಲ್ಲಿ ಗಳಿಸಿದ್ದ ಅತಿ ವೇಗದ ದ್ವಿಶತಕದ ವಿಶ್ವದಾಖಲೆಗಳನ್ನು ವೈಭವ್ ಅಳಿಸಿಹಾಕಿದರು. ಅಲ್ಲದೆ, ಭಾರತ-ಎ ತಂಡವು ಕೇವಲ 5 ಓವರ್ಗಳಲ್ಲಿ 100 ರನ್ ಪೂರೈಸಿ ಲಿಸ್ಟ್-ಎ ಕ್ರಿಕೆಟ್ನಲ್ಲಿ ಅತಿ ವೇಗದ ತಂಡದ ಶತಕದ ದಾಖಲೆ ಬರೆಯಲೂ ವೈಭವ್ ಪ್ರಮುಖ ಕಾರಣರಾದರು. ವೈಭವ್ ಔಟಾದಾಗ ಭಾರತ ಗೆಲುವಿನಿಂದ ಕೇವಲ 5 ರನ್ ದೂರವಿತ್ತು, ಬಳಿಕ ರಿಂಕು ಸಿಂಗ್ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಮುಗಿಸಿದರು. ಭಾರತ ಕೇವಲ 14.2 ಓವರ್ಗಳಲ್ಲಿ ಗುರಿ ತಲುಪಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿತು.
ಪಂದ್ಯದ ಬಳಿಕ ಮಾತನಾಡಿದ ಯುಎಇ ನಾಯಕ ಬಾಸಿಲ್ ಹಮೀದ್, ವೈಭವ್ ಬ್ಯಾಟಿಂಗ್ ವೈಖರಿಯನ್ನು ಕಂಡು ಬೆರಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ಇದು ನಮಗೆ ಅತ್ಯಂತ ಕಠಿಣ ಪಂದ್ಯವಾಗಿತ್ತು. ವೈಭವ್ ಈ ರೀತಿ ಆಡಿದರೆ ಅವರನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಈ ಸೋಲು ನಮಗೆ ದೊಡ್ಡ ಆಘಾತವನ್ನುಂಟು ಮಾಡಿದೆ, ಇದರಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಆ ಬಳಿಕವಷ್ಟೇ ನಾವು ಪಂದ್ಯದಲ್ಲಿ ಮಾಡಿದ ತಪ್ಪುಗಳ ಬಗ್ಗೆ ವಿಮರ್ಶೆ ನಡೆಸುತ್ತೇವೆ ಎಂದು ಅವರು ತಿಳಿಸಿದರು. ಇದೇ ವೇಳೆ ತಮ್ಮ ತಂಡದ ಪರ ಶತಕ ಬಾರಿಸಿದ ಹರ್ಪ್ರೀತ್ ಸಿಂಗ್ ಭಾಟಿಯಾ ಅವರ ಆಟವನ್ನು ಶ್ಲಾಘಿಸಿದ ಬಾಸಿಲ್, ಹರ್ಪ್ರೀತ್ ಯುಎಇ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದು, ಈ ಶತಕವು ಮುಂಬರುವ ಸರಣಿಗೆ ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ನೀಡಲಿದೆ ಎಂದರು.
ತಮ್ಮ ತಂಡದ ಭವಿಷ್ಯದ ಯೋಜನೆಗಳ ಬಗ್ಗೆಯೂ ಮಾತನಾಡಿದ ಬಾಸಿಲ್ ಹಮೀದ್, ಯುಎಇ ತಂಡವು ಬಹುತೇಕ ಯುವ ಆಟಗಾರರಿಂದ ಕೂಡಿದ್ದು, ಅನೇಕರು ಇಂತಹ ದೊಡ್ಡ ಮಟ್ಟದ ಟೂರ್ನಿಯಲ್ಲಿ ಮೊದಲ ಬಾರಿಗೆ ಆಡುತ್ತಿದ್ದಾರೆ ಎಂದು ವಿವರಿಸಿದರು. ಯುವ ಆಟಗಾರರು ಒತ್ತಡವನ್ನು ನಿಭಾಯಿಸಿದ ರೀತಿ ತಮಗೆ ಹೆಮ್ಮೆ ತಂದಿದೆ ಎಂದ ಅವರು, ಭಾರತ ಮತ್ತು ಪಾಕಿಸ್ತಾನದಂತಹ ಬಲಿಷ್ಠ ತಂಡಗಳನ್ನು ಸೋಲಿಸಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು. ಈ ಟೂರ್ನಿಯಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿತು, ಮುಂಬರುವ ನೇಪಾಳ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ಬಾಸಿಲ್ ವಿಶ್ವಾಸ ವ್ಯಕ್ತಪಡಿಸಿದರು, (ಏಜೆನ್ಸೀಸ್).