

ದೋಹಾ: ದೋಹಾದ ಯೂನಿವರ್ಸಿಟಿ ಆಫ್ ದೋಹಾ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಮೈದಾನದಲ್ಲಿ ನಡೆದ ಗ್ರೂಪ್ 'ಬಿ' ಹಂತದ 11ನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತಂಡದ ವಿರುದ್ಧ ಭಾರತ ಎ ತಂಡ ಭರ್ಜರಿ ಗೆಲುವನ್ನು ಸಾಧಿಸಿದೆ. ಭಾರತದ ಪರ ವಂಡರ್ ಕಿಡ್ ಖ್ಯಾತಿಯ ವೈಭವ್ ಸೂರ್ಯವಂಶಿ ಕೇವಲ 53 ಎಸೆಗಳಲ್ಲಿ ಭರ್ತಿ 204 ರನ್ ಗಳ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡದ ಪರವಾಗಿ ಹರ್‌ಪ್ರೀತ್ ಸಿಂಗ್ ಭಾಟಿಯಾ 144 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 130 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ನಾಯಕ ಬಾಸಿಲ್ ಹಮೀದ್ (36*), ಮುಹಮ್ಮದ್ ಶಹದಾದ್ (28) ಮತ್ತು ಎಥಾನ್ ಡಿಸೋಜಾ (25) ಉತ್ತಮ ಸಾಥ್ ನೀಡಿದರು. ಭಾರತ 'ಎ' ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅರ್ಷದ್ ಖಾನ್ 10 ಓವರ್‌ಗಳಲ್ಲಿ 43 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದರು. ಮೊದಲ ಇಂನ್ನಿಗ್ಸ್ ಅಂತ್ಯಕ್ಕೆ ಯುಎಇ ತಂಡ ನಿಯಮಿತ ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತು.
250 ರನ್ ಗುರಿ ಬೇದಿಸಲು ಕಣಕ್ಕಿಳಿದ ವೈಭವ್ ಸೂರ್ಯವಂಶಿ ಮೊದಲ ಎಸೆತದಿಂದಲೇ ಭರ್ಜರಿ ಬ್ಯಾಟಿಂಗ್ ಮೂಲಕ ಅರಬ್ ಬೌಲರ್ಗಳನ್ನು ಮನಬಂದಂತೆ ದಂಡಿಸಿ ಕೇವಲ 53 ಎಸೆಗಳಲ್ಲಿ 28 ಸಿಕ್ಸರ್ ಹಾಗೂ 7 ಬೌಂಡರಿಗಳ ಮೂಲಕ 204 ರನ್ಗಳಿಸಿ ಭಾರತಕ್ಕೆ ಸುಲಭದ ಗೆಲುವನ್ನು ದೊರಕಿಸುವಲ್ಲಿ ಪ್ರಧಾನ ಪಾತ್ರ ವಹಿಸಿದರು. ವೈಭವ್ ಸೂರ್ಯವಂಶಿ ಅವರ ಈ ರಣಭೀಕರ ಬ್ಯಾಟಿಂಗ್‌ನಿಂದಾಗಿ ಭಾರತ 'ಎ' ತಂಡವು ಕೇವಲ 5 ಓವರ್‌ಗಳಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಇದು ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದು ದಾಖಲಿಸಿದ ಅತಿ ವೇಗದ ಶತಕವಾಗಿದೆ.
ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದ ದಾಖಲೆಗಳನ್ನು ಪುಡಿಪುಡಿ ಮಾಡುತ್ತಿರುವ ವೈಭವ್ ಅವರ ಈ ಇನ್ನಿಂಗ್ಸ್ ಇಡೀ ಕ್ರಿಕೆಟ್ ಜಗತ್ತಿನ ಪ್ರಶಂಸೆಗೆ ಪಾತ್ರವಾಗಿದೆ. ವೈಭವ್ ಸೂರ್ಯವಂಶಿ ಔಟಾದ ನಂತರ ಬ್ಯಾಟಿಂಗ್ ಮಾಡಿದ ರಿಂಕು ಸಿಂಗ್ ಹಾಗೂ ಕೆ. ಕುಶಾಗ್ರಾ ಕೇವಲ 14.2 ಓವರ್‌ಗಳಲ್ಲಿ ಪಂದ್ಯವನ್ನು ಗೆಲ್ಲುವ ಮೂಲಕ ಸುಲಭ ಜಯವನ್ನು ಗಳಿಸಿದೆ, (ಏಜೆನ್ಸೀಸ್).