

ದೋಹಾ: ಭಾರತೀಯ ಕ್ರಿಕೆಟ್ ಲೋಕದ ಉದಯೋನ್ಮುಖ ತಾರೆ, ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ( Vaibhav Sooryavanshi ) ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅಮೋಘ ವಿಶ್ವದಾಖಲೆಯೊಂದನ್ನು ಬರೆದಿದ್ದಾರೆ. ಕತಾರ್‌ನ ದೋಹಾದಲ್ಲಿ ನಡೆಯುತ್ತಿರುವ ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ ಅಕ್ಷರಶಃ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. 250 ರನ್‌ಗಳ ಬೃಹತ್ ಗುರಿ ಬೆನ್ನತ್ತಿರುವ ಭಾರತ 'ಎ' ತಂಡಕ್ಕೆ ಆಸರೆಯಾದ ಸೂರ್ಯವಂಶಿ, ಕೇವಲ 28 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಲಿಸ್ಟ್-ಎ (List A) ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ದೋಹಾದ ಯೂನಿವರ್ಸಿಟಿ ಆಫ್ ದೋಹಾ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಮೈದಾನದಲ್ಲಿ ನಡೆಯುತ್ತಿರುವ ಗ್ರೂಪ್ 'ಬಿ' ಹಂತದ 11ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಕಲೆಹಾಕಿತು.
ಯುಎಇ ಪರ ಅತ್ಯಂತ ತಾಳ್ಮೆಯ ಹಾಗೂ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ಹರ್‌ಪ್ರೀತ್ ಸಿಂಗ್ ಭಾಟಿಯಾ 144 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 130 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ನಾಯಕ ಬಾಸಿಲ್ ಹಮೀದ್ (36*), ಮುಹಮ್ಮದ್ ಶಹದಾದ್ (28) ಮತ್ತು ಎಥಾನ್ ಡಿಸೋಜಾ (25) ಉತ್ತಮ ಸಾಥ್ ನೀಡಿದರು. ಭಾರತ 'ಎ' ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅರ್ಷದ್ ಖಾನ್ 10 ಓವರ್‌ಗಳಲ್ಲಿ 43 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದರು.
250 ರನ್‌ಗಳ ಸವಾಲಿನ ಗುರಿ ಬೆನ್ನತ್ತಿರುವ ಭಾರತ 'ಎ' ತಂಡಕ್ಕೆ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಮೊದಲ ಓವರ್‌ನಿಂದಲೇ ಆರ್ಭಟ ಆರಂಭಿಸಿದರು. ಎದುರಾಳಿ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ಈ 15 ವರ್ಷದ ಪೋರ, ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಅರ್ಧಶತಕದ ಬಳಿಕವೂ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಸೂರ್ಯವಂಶಿ, ಇನ್ನಿಂಗ್ಸ್‌ನ ಏಳನೇ ಓವರ್ ಮುಗಿಯುವಷ್ಟರಲ್ಲೇ ಅಂದರೆ ಕೇವಲ 28 ಎಸೆತಗಳಲ್ಲಿ ಶತಕದ ಗಡಿ ದಾಟಿ ಇತಿಹಾಸ ಸೃಷ್ಟಿಸಿದರು. ಇದರೊಂದಿಗೆ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ (29 ಎಸೆತ) ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (31 ಎಸೆತ) ಅವರಂತಹ ದಿಗ್ಗಜರ ದಾಖಲೆಗಳನ್ನು ವೈಭವ್ ಅಳಿಸಿಹಾಕಿದರು.
ವೈಭವ್ ಸೂರ್ಯವಂಶಿ ಅವರ ಈ ರಣಭೀಕರ ಬ್ಯಾಟಿಂಗ್‌ನಿಂದಾಗಿ ಭಾರತ 'ಎ' ತಂಡವು ಕೇವಲ 5 ಓವರ್‌ಗಳಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಇದು ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದು ದಾಖಲಿಸಿದ ಅತಿ ವೇಗದ ಶತಕವಾಗಿದೆ. ಮತ್ತೊಂದೆಡೆ ಇತರ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ 5 ಎಸೆತಗಳಲ್ಲಿ 12 ರನ್ ಗಳಿಸಿ ಇಬ್ರಾರ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದರೆ, ಪ್ರಭ್‌ಸಿಮ್ರನ್ ಸಿಂಗ್ 4 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ಜಾಹಿದ್ ಅಲಿ ಬೌಲಿಂಗ್‌ನಲ್ಲಿ ಔಟಾದರು. ಆದರೆ ಇನ್ನೊಂದು ತುದಿಯಲ್ಲಿ ಸಿಡಿಲಮರಿಯಂತೆ ಅಬ್ಬರಿಸಿದ ಸೂರ್ಯವಂಶಿ, 7.3 ಓವರ್‌ಗಳ ಅಂತ್ಯಕ್ಕೆ 383.87ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 31 ಎಸೆತಗಳಲ್ಲಿ 5 ಬೌಂಡರಿ ಮತ್ತು ಬರೋಬ್ಬರಿ 16 ಗಗನಚುಂಬಿ ಸಿಕ್ಸರ್‌ಗಳೊಂದಿಗೆ ಅಜೇಯ 119 ರನ್ ಚಚ್ಚಿ ಕ್ರೀಸ್‌ನಲ್ಲಿದ್ದಾರೆ.
ಯುಎಇ ಬೌಲರ್‌ಗಳು ಸೂರ್ಯವಂಶಿ ಆರ್ಭಟಕ್ಕೆ ಅಕ್ಷರಶಃ ನಲುಗಿಹೋಗಿದ್ದು, ಬೌಲರ್ ಇಬ್ರಾರ್ ಅಹ್ಮದ್ ಕೇವಲ 3 ಓವರ್‌ಗಳಲ್ಲಿ 71 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಸದ್ಯ ಭಾರತ 'ಎ' ತಂಡವು 7.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದ್ದು, 18.4ರ ರನ್ ರೇಟ್‌ನಲ್ಲಿ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ಕ್ರೀಸ್‌ನಲ್ಲಿ ಶತಕವೀರ ವೈಭವ್ ಸೂರ್ಯವಂಶಿ (119*) ಜತೆಗೆ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ (0*) ಇದ್ದು, ತಂಡದ ಗೆಲುವಿಗೆ ಇನ್ನೂ 112 ರನ್‌ಗಳಷ್ಟೇ ಬೇಕಾಗಿದೆ. ನಾಯಕ ತಿಲಕ್ ವರ್ಮಾ, ಕುಮಾರ್ ಕುಶಾಗ್ರಾ ಸೇರಿದಂತೆ ಬಲಿಷ್ಠ ಬ್ಯಾಟಿಂಗ್ ಪಡೆ ಇನ್ನೂ ಬ್ಯಾಟಿಂಗ್ ಮಾಡಲು ಬಾಕಿಯಿದೆ.
ಈ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನ 'ಎ' ವಿರುದ್ಧ ಸೋಲನುಭವಿಸಿದ್ದ ಭಾರತ 'ಎ' ತಂಡಕ್ಕೆ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ವೈಭವ್ ಸೂರ್ಯವಂಶಿ ಅವರ ಐತಿಹಾಸಿಕ ಇನ್ನಿಂಗ್ಸ್‌ನಿಂದಾಗಿ ಭಾರತ ಕೇವಲ ಗೆಲುವಿನ ಸನಿಹಕ್ಕೆ ಬಂದಿರುವುದಷ್ಟೇ ಅಲ್ಲದೆ, ನೆಟ್ ರನ್ ರೇಟ್ (NRR) ಅನ್ನೂ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುವ ಸುವರ್ಣಾವಕಾಶ ಪಡೆದಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದ ದಾಖಲೆಗಳನ್ನು ಪುಡಿಪುಡಿ ಮಾಡುತ್ತಿರುವ ವೈಭವ್ ಅವರ ಈ ಇನ್ನಿಂಗ್ಸ್ ಇಡೀ ಕ್ರಿಕೆಟ್ ಜಗತ್ತಿನ ಪ್ರಶಂಸೆಗೆ ಪಾತ್ರವಾಗಿದೆ, (ಏಜೆನ್ಸೀಸ್).