Vaibhav Sooryavanshi: ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ಐತಿಹಾಸಿಕ ಅಧ್ಯಾಯ ಬರೆಯಲಾಗಿದೆ. ಬಿಹಾರದ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಮಂಗಳವಾರ ದೋಹಾದಲ್ಲಿ ನಡೆದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಪಂದ್ಯದಲ್ಲಿ ಯುಎಇ (UAE) ವಿರುದ್ಧ ಕೇವಲ 52 ಎಸೆತಗಳಲ್ಲಿ ವಿಶ್ವದಾಖಲೆಯ ದ್ವಿಶತಕ ಸಿಡಿಸಿ ಕ್ರಿಕೆಟ್ ಲೋಕವನ್ನೇ ನಿಬ್ಬೆರಗಾಗಿಸಿದ್ದಾರೆ. ಭಾರತ ಎ ತಂಡದ ಪರ ಕಣಕ್ಕಿಳಿದ ಸೂರ್ಯವಂಶಿ, ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ವಿಶ್ವದಾಖಲೆಗಳನ್ನು ಪುಡಿಗಟ್ಟಿದ್ದಾರೆ.
ಸೀನಿಯರ್ ಭಾರತ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿ ಹೊಂದಿರುವ ವೈಭವ್, ಯುಎಇ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದರು. ಕೇವಲ 28 ಎಸೆತಗಳಲ್ಲಿ 14 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದ ಅವರು, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ವಿಶ್ವದಾಖಲೆ ಬರೆದರು. ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ (29 ಎಸೆತ) ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (31 ಎಸೆತ) ಅವರ ದಾಖಲೆಗಳನ್ನು ವೈಭವ್ ಹಿಂದಿಕ್ಕಿದರು.
ಶತಕದ ಬಳಿಕವೂ ಅಬ್ಬರ ನಿಲ್ಲಿಸದ ಸೂರ್ಯವಂಶಿ, ಕೇವಲ 40 ಎಸೆತಗಳಲ್ಲಿ 150 ರನ್ ಗಡಿ ದಾಟಿ ತಮ್ಮದೇ ಹಳೆಯ ವಿಶ್ವದಾಖಲೆಯನ್ನು (59 ಎಸೆತ) ಮುರಿದರು. ಬಳಿಕ 52ನೇ ಎಸೆತದಲ್ಲಿ ದ್ವಿಶತಕ ಪೂರೈಸುವ ಮೂಲಕ ಸೀನಿಯರ್ ವೃತ್ತಿಪರ ಕ್ರಿಕೆಟ್ (ದೇಶೀಯ ಮತ್ತು ಅಂತಾರಾಷ್ಟ್ರೀಯ) ಇತಿಹಾಸದಲ್ಲೇ ಅತಿ ವೇಗದ ದ್ವಿಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು. 2024ರಲ್ಲಿ ನ್ಯೂಜಿಲೆಂಡ್‌ನ ಚಾಡ್ ಬೋಸ್ (103 ಎಸೆತ) ಬರೆದಿದ್ದ ದಾಖಲೆಯನ್ನು ವೈಭವ್ ಪುಡಿಗಟ್ಟಿದರು. ಒಂದೇ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್ ಸಿಡಿಸುವ ಮೂಲಕ ವೃತ್ತಿಪರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದಾಖಲೆಯನ್ನೂ ತಮ್ಮದಾಗಿಸಿಕೊಂಡರು.
ವೈಭವ್ ಸೂರ್ಯವಂಶಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಹೊಸ ವಿಶ್ವದಾಖಲೆ ನಿರ್ಮಿಸಿದರು. 2024ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ಕ್ಯಾಂಟರ್‌ಬರಿ ಪರ ಒಟಾಗೊ ವಿರುದ್ಧ 103 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದ ನ್ಯೂಜಿಲೆಂಡ್‌ನ ಚಾಡ್ ಬೋಸ್ ಅವರ ದಾಖಲೆಯನ್ನು ವೈಭವ್ ಮುರಿದರು. ಈ ಪಟ್ಟಿಯಲ್ಲಿ ತಮಿಳುನಾಡಿನ ಎನ್. ಜಗದೀಶನ್ (2022ರಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಬೆಂಗಳೂರಿನಲ್ಲಿ 114 ಎಸೆತ) ಮತ್ತು ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ (2026ರಲ್ಲಿ ರಾವಲ್ಪಿಂಡಿಯಲ್ಲಿ ಶ್ರೀಲಂಕಾ ವಿರುದ್ಧ 114 ಎಸೆತ) ನಂತರದ ಸ್ಥಾನಗಳಲ್ಲಿದ್ದಾರೆ.
ಒಂದೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 28 ಸಿಕ್ಸರ್ ಸಿಡಿಸಿದ ವೈಭವ್ ಸೂರ್ಯವಂಶಿ, ವೃತ್ತಿಪರ ಕ್ರಿಕೆಟ್‌ನ ಸಾರ್ವಕಾಲಿಕ ದಾಖಲೆ ಬರೆದರು. 2024ರಲ್ಲಿ ಹೈದರಾಬಾದ್‌ನಲ್ಲಿ ನಡೆದ ರಣಜಿ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಹೈದರಾಬಾದ್‌ನ ತನ್ಮಯ್ ಅಗರ್ವಾಲ್ 26 ಸಿಕ್ಸರ್ ಸಿಡಿಸಿದ್ದರು. ಇನ್ನು 2015ರಲ್ಲಿ ನೇಪಿಯರ್‌ನಲ್ಲಿ ನಡೆದ ಪ್ಲಂಕೆಟ್ ಶೀಲ್ಡ್ ಪಂದ್ಯದಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ವಿರುದ್ಧ ಆಕ್ಲೆಂಡ್‌ನ ಕಾಲಿನ್ ಮುನ್ರೋ 23 ಸಿಕ್ಸರ್ ಹಾಗೂ 2018ರಲ್ಲಿ ಸಿಡ್ನಿಯಲ್ಲಿ ನಡೆದ ಒನ್ ಡೇ ಕಪ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧ ವೆಸ್ಟರ್ನ್ ಆಸ್ಟ್ರೇಲಿಯಾದ ಡಿ'ಆರ್ಸಿ ಶಾರ್ಟ್ 23 ಸಿಕ್ಸರ್ ಬಾರಿಸಿದ್ದರು.
ವೈಭವ್ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕದ ವಿಶ್ವದಾಖಲೆಯನ್ನೂ ತಮ್ಮದಾಗಿಸಿಕೊಂಡರು. 2023ರಲ್ಲಿ ಅಡಿಲೇಡ್‌ನಲ್ಲಿ ತಾಸ್ಮೇನಿಯಾ ವಿರುದ್ಧ ಸೌತ್ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ (29 ಎಸೆತ) ಮತ್ತು 2015ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (31 ಎಸೆತ) ಈ ಹಿಂದಿನ ದಾಖಲೆ ಹೊಂದಿದ್ದರು. 2025ರಲ್ಲಿ ರಾಂಚಿಯಲ್ಲಿ ಅರುಣಾಚಲ ವಿರುದ್ಧ ಬಿಹಾರದ ಸಕಿಬುಲ್ ಗನಿ (32 ಎಸೆತ) ಮತ್ತು ಅಹಮದಾಬಾದ್‌ನಲ್ಲಿ ಕರ್ನಾಟಕ ವಿರುದ್ಧ ಜಾರ್ಖಂಡ್‌ನ ಇಶಾನ್ ಕಿಶನ್ (33 ಎಸೆತ) ವೇಗದ ಶತಕ ಸಿಡಿಸಿದ್ದರು.
ಕೇವಲ 40 ಎಸೆತಗಳಲ್ಲಿ 150 ರನ್ ಗಡಿ ದಾಟಿದ ವೈಭವ್, ತಮ್ಮದೇ ಹಳೆಯ ದಾಖಲೆಯನ್ನು ಮುರಿದರು. 2025ರಲ್ಲಿ ರಾಂಚಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಬಿಹಾರ ಪರ ಆಡುವಾಗ ವೈಭವ್ 59 ಎಸೆತಗಳಲ್ಲಿ 150 ರನ್ ಗಳಿಸಿದ್ದರು. 2015ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಬಿ ಡಿವಿಲಿಯರ್ಸ್ (64 ಎಸೆತ) ಮತ್ತು 2022ರಲ್ಲಿ ಆ್ಯಮ್‌ಸ್ಟೆಲ್ವೀನ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಇಂಗ್ಲೆಂಡ್‌ನ ಜೋಸ್ ಬಟ್ಲರ್ (65 ಎಸೆತ) ನಂತರದ ಸ್ಥಾನಗಳಲ್ಲಿದ್ದಾರೆ(ಏಜೆನ್ಸೀಸ್).