ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ( Yuzvendra Chahal ) ಅವರು ಶನಿವಾರ (ನವೆಂಬರ್ 21) ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗುವ ಮೂಲಕ ತಮ್ಮ ಹೊಸ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಅವರಿಗೆ ಪ್ರಮುಖ ಜವಾಬ್ದಾರಿಯನ್ನೂ ನೀಡಲಾಗಿದ್ದು, ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾದ ಕಾರ್ಯಕಾರಿ ಸಮಿತಿಯ 'ವಿಶೇಷ ಆಹ್ವಾನಿತ ಸದಸ್ಯ'ರನ್ನಾಗಿ ನೇಮಕ ಮಾಡಲಾಗಿದೆ. ಆದರೆ, ಚಾಹಲ್ ಅವರ ಈ ರಾಜಕೀಯ ಪ್ರವೇಶದ ಬೆನ್ನಲ್ಲೇ ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ, "ಚಾಹಲ್‌ಗೆ ಕೊನೆಗೂ ತನ್ನದೇ ಆದ ಶುಗರ್ ಡ್ಯಾಡಿ ಸಿಕ್ಕಂತಿದೆ" ಎಂದು ಲೇವಡಿ ಮಾಡಿದ್ದಾರೆ. ಕಳೆದ ವರ್ಷವಷ್ಟೇ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದಿದ್ದ ಚಾಹಲ್, ನ್ಯಾಯಾಲಯಕ್ಕೆ ಹಾಜರಾಗುವಾಗ 'ಬಿ ಯುವರ್ ಓನ್ ಶುಗರ್ ಡ್ಯಾಡಿ' (Be Your Own Sugar Daddy) ಎಂಬ ಬರಹವುಳ್ಳ ಟೀ-ಶರ್ಟ್ ಧರಿಸಿ ಭಾರಿ ಸುದ್ದಿಯಾಗಿದ್ದರು. ಅದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರಿಯಾಂಕಾ ಚತುರ್ವೇದಿ ಈಗ ರಾಜಕೀಯವಾಗಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ಸೇರ್ಪಡೆಯಾದ ನಂತರ ಯಜುವೇಂದ್ರ ಚಾಹಲ್ ಅವರು ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದು, ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬಿಜೆಪಿ ಕುಟುಂಬದಲ್ಲಿ ನನಗೆ ಸ್ಥಾನ ಮತ್ತು ಗೌರವ ನೀಡಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ, ಗೃಹ ಸಚಿವ ಅಮಿತ್ ಷಾ ಜೀ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಜೀ ಹಾಗೂ ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಅಮರ್‌ಪಾಲ್ ಮೌರ್ಯ ಜೀ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ, ದೆಹಲಿಯಲ್ಲಿ ರಾಜ್ಯಸಭಾ ಸಂಸದ ಹಾಗೂ ಒಬಿಸಿ ಮೋರ್ಚಾ ಅಧ್ಯಕ್ಷ ಅಮರ್‌ಪಾಲ್ ಮೌರ್ಯ ಅವರನ್ನು ಭೇಟಿಯಾದ ಬಳಿಕ ಚಾಹಲ್ ಕಮಲ ಪಾಳಯವನ್ನು ಸೇರಿದ್ದಾರೆ. ನವೆಂಬರ್ 21ರಂದು ಬಿಜೆಪಿ ಬಿಡುಗಡೆ ಮಾಡಿದ ಒಬಿಸಿ ಮೋರ್ಚಾದ ಪದಾಧಿಕಾರಿಗಳ ಪಟ್ಟಿಯಲ್ಲಿ ಚಾಹಲ್ ಹೆಸರನ್ನು ಘೋಷಿಸಲಾಗಿದ್ದು, ಇದೇ ಪಟ್ಟಿಯಲ್ಲಿ ನಿರ್ಭಯಾ ಪ್ರಕರಣದ ವಕೀಲೆ ಸೀಮಾ ಕುಶ್ವಾಹ ಮತ್ತು ಒಡಿಶಾದ ಪ್ರಾಧ್ಯಾಪಕ ಅದ್ವೈತ್ ಚರಣ್ ಗಡನಾಯಕ್ ಅವರ ಹೆಸರುಗಳೂ ಸೇರಿವೆ.
ಸದ್ಯ ಯಜುವೇಂದ್ರ ಚಾಹಲ್ ಅವರು ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ, ಅಂತಾರಾಷ್ಟ್ರೀಯ ಏಕದಿನ ಮತ್ತು ಟಿ20 ಕ್ರಿಕೆಟ್‌ಗೆ ಇನ್ನೂ ವಿದಾಯ ಹೇಳಿಲ್ಲ. ದೇಶೀಯ ಟೂರ್ನಿಗಳಲ್ಲಿ ಹರಿಯಾಣ ಪರ ಸೈಯದ್ ಮುಷ್ತಾಕ್ ಅಲಿ ಟಿ20 ತಂಡವನ್ನು ಪ್ರತಿನಿಧಿಸುತ್ತಿರುವ ಅವರು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಕ್ರಿಕೆಟ್ ವೃತ್ತಿಜೀವನದ ನಡುವೆಯೇ ರಾಜಕೀಯದತ್ತ ಮುಖ ಮಾಡಿರುವ ಚಾಹಲ್ ಅವರ ಈ ನಡೆ ಕ್ರೀಡಾ ಮತ್ತು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಪಕ್ಷದಲ್ಲಿ ಚಾಹಲ್ ಅವರ ಮುಂದಿನ ಪಾತ್ರವೇನು ಎಂಬ ಬಗ್ಗೆಯೂ ಈಗ ಚರ್ಚೆಗಳು ಶುರುವಾಗಿವೆ. ಒಬಿಸಿ ಮೋರ್ಚಾದಲ್ಲಿ ಅವರನ್ನು 'ವಿಶೇಷ ಆಹ್ವಾನಿತ' ಸದಸ್ಯರನ್ನಾಗಿ ನೇಮಿಸಲಾಗಿದ್ದು, ಇಂತಹ ಸದಸ್ಯರನ್ನು ಪಕ್ಷದ ಪ್ರಮುಖ ಸಾಂಸ್ಥಿಕ ಸಭೆಗಳು ಮತ್ತು ಚರ್ಚೆಗಳಿಗೆ ವಿಶೇಷವಾಗಿ ಆಹ್ವಾನಿಸಲಾಗುತ್ತದೆ. ಇವರಿಗೆ ನಿರ್ದಿಷ್ಟವಾದ ಅಧಿಕೃತ ಜವಾಬ್ದಾರಿಗಳು ನಿಗದಿಯಾಗಿರುವುದಿಲ್ಲವಾದರೂ, ಪಕ್ಷಕ್ಕೆ ಅಗತ್ಯವಿದ್ದಾಗ ಯಾವುದೇ ಪ್ರಮುಖ ಕೆಲಸವನ್ನು ವಹಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಚಾಹಲ್ ಅವರಿಗೆ ಪಕ್ಷವು ಯಾವ ರೀತಿಯ ಹೊಣೆಗಾರಿಕೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಪಕ್ಷದ ಸಂಘಟನೆಯನ್ನು ಬಲಪಡಿಸುವ ಕಾರ್ಯದಲ್ಲಿ ತೊಡಗಿದೆ. ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಜನಪ್ರಿಯ ಸೆಲೆಬ್ರಿಟಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳನ್ನು ಹೆಚ್ಚಾಗಿ ತೊಡಗಿಸಿಕೊಳ್ಳಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಹೀಗಾಗಿ, ಯುವಜನತೆ ಮತ್ತು ಕ್ರಿಕೆಟ್ ಅಭಿಮಾನಿಗಳಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಯಜುವೇಂದ್ರ ಚಾಹಲ್ ಅವರನ್ನು ಮುಂಬರುವ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಸುವ ಸಾಧ್ಯತೆ ದಟ್ಟವಾಗಿದೆ, (ಏಜೆನ್ಸೀಸ್).