ಹಾವು ಕಚ್ಚಿ 3 ವರ್ಷ ಕಳೆದ್ರೂ ಮಾಯದ ಗಾಯ: ಇಡೀ ಕುಟುಂಬವನ್ನೇ ಬೀದಿಗೆ ತಂದ ಒಂದು ಸಣ್ಣ ನಿರ್ಲಕ್ಷ್ಯ, ಇದೊಂದು ಕಣ್ಣೀರ ಕಥೆ! Snakebite

Snakebite
ಹಾವು ಕಚ್ಚಿ 3 ವರ್ಷ ಕಳೆದ್ರೂ ಮಾಯದ ಗಾಯ: ಇಡೀ ಕುಟುಂಬವನ್ನೇ ಬೀದಿಗೆ ತಂದ ಒಂದು ಸಣ್ಣ ನಿರ್ಲಕ್ಷ್ಯ, ಇದೊಂದು ಕಣ್ಣೀರ ಕಥೆ!
Published on: 

ತಿರುವನಂತಪುರಂ: ಕೇರಳದ ಪ್ರಸಿದ್ಧ ಉರಗ ತಜ್ಞ ವಾವಾ ಸುರೇಶ್ ಅವರು ಇತ್ತೀಚೆಗೆ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಅಡೂರು ವಳಂಜುಕಾಡು ಎಂಬ ಪುಟ್ಟ ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿದ್ದರು. ಹೊರಗಿನಿಂದ ನೋಡಲು ತೀರಾ ಸಾಮಾನ್ಯವಾಗಿ ಕಾಣುವ ಆ ಮನೆಯ ಒಳಗೆ ನರಕಯಾತನೆ ಮತ್ತು ಸಾವನ್ನು ಗೆದ್ದು ಬಂದ ಹೋರಾಟದ ದೊಡ್ಡ ಕಥೆಯೇ ( Snakebite ) ಅಡಗಿತ್ತು.

ಆ ಮನೆಯ ಯಜಮಾನನ ಹೆಸರು ಅನುರಾಗ್ ಆರ್. ಕೃಷ್ಣನ್. ಈತ ಮರ ಕಡಿಯುವ ಕೆಲಸ ಮಾಡುತ್ತಿದ್ದ. ಇವರಿಗೆ ಕುಟುಂಬದಲ್ಲಿ ಪತ್ನಿ, ಮಕ್ಕಳು ಮತ್ತು ದೃಷ್ಟಿ ಕಳೆದುಕೊಂಡ ತಾಯಿ ಇದ್ದಾರೆ. ಕೃಷ್ಣನ್​ ಅವರಿಗೆ ವಿಷಕಾರಿ ಹಾವೊಂದು ಕಚ್ಚಿ ಈಗಾಗಲೇ ಮೂರು ವರ್ಷಗಳೇ ಕಳೆದುಹೋಗಿವೆ. ಸಾಮಾನ್ಯವಾಗಿ ಸರಿಯಾದ ಚಿಕಿತ್ಸೆ ಪಡೆದರೆ ಕೆಲವೇ ದಿನಗಳಲ್ಲಿ ವಾಸಿಯಾಗಬೇಕಿದ್ದ ಹಾವು ಕಚ್ಚಿದ ಗಾಯ, ಮೂರು ವರ್ಷಗಳ ನಂತರವೂ ಇನ್ನೂ ಮಾಯದೆ ಹಸಿಯಾಗಿಯೇ ಉಳಿದಿದೆ. ಪ್ರತಿದಿನವೂ ಅಸಹನೀಯ ನೋವು ಮತ್ತು ನರಕಯಾತನೆಯನ್ನು ಅನುಭವಿಸುತ್ತಾ ಆ ವ್ಯಕ್ತಿ ಜೀವನ ಸಾಗಿಸುತ್ತಿದ್ದಾರೆ.

Also Read
ಇನ್‌ಫ್ಲುಯೆನ್ಸರ್‌ ಮನೆಗೆ ನುಗ್ಗಿ ನನ್ನನ್ನೇ ಮದ್ವೆಯಾಗು ಅಂತ ಪಟ್ಟು ಹಿಡಿದ ಯುವಕ: ಕುಟುಂಬಸ್ಥರ ಹಲ್ಲೆಗೆ ದುರಂತ ಸಾವು! Social media influencer
Snakebite

ಹಾವು ಕಚ್ಚಿದ ಮೊದಲ ಕೆಲವು ದಿನಗಳಲ್ಲಿ ಅವರ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ, ಬದುಕುಳಿಯುವ ಭರವಸೆಯೇ ಇರಲಿಲ್ಲ. ಪ್ರಾಣ ಉಳಿಸಬೇಕಾದರೆ ಅವರ ಕಾಲನ್ನೇ ಕತ್ತರಿಸಿ ತೆಗೆಯಬೇಕು ಎಂದು ವೈದ್ಯರು ಕೂಡ ಅಂತಿಮ ತೀರ್ಮಾನಕ್ಕೆ ಬಂದಿದ್ದರು. ನಿರಂತರ ಶಸ್ತ್ರಚಿಕಿತ್ಸೆಗಳು, ಔಷಧಿಗಳು ಮತ್ತು ತಡೆಯಲಾಗದ ಭೀಕರ ನೋವಿನಿಂದಾಗಿ ಅವರು ಆಸ್ಪತ್ರೆಯಲ್ಲಿಯೇ ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಹುಚ್ಚರಂತೆ ವರ್ತಿಸಲು ಆರಂಭಿಸಿದ್ದರು. ತೀರಾ ಸಾಮಾನ್ಯ ಕುಟುಂಬದವರಾದ ಇವರು, ಈ ಒಂದು ಹಾವಿನ ಕಡಿತದ ಚಿಕಿತ್ಸೆಗಾಗಿ ಇದುವರೆಗೂ ಬರೋಬ್ಬರಿ ಐದು ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣವನ್ನು ವ್ಯಯಿಸಿದ್ದಾರೆ.

ಕಡಿತ ಹೇಗಾಯಿತು?

ಆ ಒಂದು ಭೀಕರ ಹಾವಿನ ಕಡಿತ ಇಡೀ ಕುಟುಂಬದ ನೆಮ್ಮದಿ ಮತ್ತು ಕೂಡಿಟ್ಟಿದ್ದ ಸಂಪತ್ತನ್ನೆಲ್ಲ ಸಂಪೂರ್ಣವಾಗಿ ನಾಶಮಾಡಿದೆ. ಆದರೆ, ಇಲ್ಲಿರುವ ಅತ್ಯಂತ ಆಘಾತಕಾರಿ ಸಂಗತಿ ಏನೆಂದರೆ, ಇವರಿಗೆ ಕಚ್ಚಿದ್ದು ನಾವು ಅತಿಯಾಗಿ ಭಯಪಡುವ ನಾಗರಹಾವಾಗಲಿ ಅಥವಾ ಕೊಳಕು ಮಂಡಲವಾಗಲಿ ಅಲ್ಲ. ಮೂರು ವರ್ಷಗಳ ಹಿಂದೆ (ಮಾರ್ಚ್ 8 ರಂದು) ಪಳನಿಗೆ ತೆರಳುತ್ತಿದ್ದಾಗ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪಾಲಕ್ಕಾಡ್‌ನಲ್ಲಿ ಟೂರಿಸ್ಟ್ ಬಸ್ ನಿಲ್ಲಿಸಿದಾಗ, ಕತ್ತಲೆಯಲ್ಲಿ ಪೊದೆಯ ಬಳಿ ಮೂತ್ರ ವಿಸರ್ಜನೆಗೆ ಹೋದಾಗ ಕಾಲಿಗೆ ಏನೋ ಕಚ್ಚಿದೆ.

ಚಿಕಿತ್ಸೆಯಲ್ಲಿ ವಿಳಂಬ

ಕಚ್ಚಿದ ತಕ್ಷಣ ಚಿಕಿತ್ಸೆ ಪಡೆಯದೆ ಪಳನಿಗೆ ಪ್ರಯಾಣ ಮುಂದುವರಿಸಿ, ಮರುದಿನ ಬೆಳಗಿನ ಜಾವ ಊರಿಗೆ ಮರಳಿದ್ದಾರೆ. 24 ಗಂಟೆಗಳ ನಂತರ ಕಾಲಿನಲ್ಲಿ ವಿಪರೀತ ಊತ, ತಲೆತಿರುಗುವಿಕೆ ಕಾಣಿಸಿಕೊಂಡು, ಕೆಲಸಕ್ಕೆ ಹೋದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ರಕ್ತ ಪರೀಕ್ಷೆ ಮಾಡಿಸಿದಾಗ ಹಾವು ಕಡಿತ ಎಂದು ದೃಢಪಟ್ಟು ಆ್ಯಂಟಿ-ವೆನಮ್ ಚಿಕಿತ್ಸೆ ನೀಡಲಾಗಿದೆ. ಸುಮಾರು ಒಂದೂವರೆ ತಿಂಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, 5 ರಿಂದ 6 ದಿನ ವೆಂಟಿಲೇಟರ್‌ನಲ್ಲೂ ಇರಬೇಕಾಯಿತು. ಚಿಕಿತ್ಸೆ ಮತ್ತು ತೀವ್ರ ನೋವಿನಿಂದ ಕೆಲಕಾಲ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸಿ, ಆಸ್ಪತ್ರೆಯ ವೈದ್ಯರು-ದಾದಿಯರ ಮೇಲೂ ರೇಗಾಡಿದ್ದರು. ಕೀವು ಮತ್ತು ರಕ್ತ ಸಂಚಾರದ ಸಮಸ್ಯೆಯಿಂದ ಕಾಲು ಕತ್ತರಿಸಬೇಕಾದ ಪರಿಸ್ಥಿತಿಯೂ ಎದುರಾಗಿತ್ತು.

Also Read
ಈ ಕೋಣಕ್ಕೆ 1 ಕೋಟಿ ರೂಪಾಯಿ ಕೊಡಲು ರೆಡಿ ಇದ್ರೂ ಮಾರಾಟ ಮಾಡಲು ಒಪ್ಪದ ಮಾಲೀಕ: ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ! Millionaire Buffalo
Snakebite

ಯಾವ ಹಾವಿನ ಕಡಿತವಿರಬಹುದು?

ನಾಗರಹಾವು (ಕೋಬ್ರಾ) ಅಥವಾ ಸಾಮಾನ್ಯ ಮಂಡಲ (ವೈಪರ್) ಆಗಿದ್ದರೆ ಇಷ್ಟು ಹೊತ್ತಿಗೆ ಪರಿಣಾಮ ಅಥವಾ ಲಕ್ಷಣಗಳು ಬೇರೆಯ ರೀತಿ ಇರುತ್ತಿದ್ದವು. ಇದು ಮಲಬಾರ್ ಪಿಟ್ ವೈಪರ್​ ಹಾವಿನ ಕಡಿತವಾಗಿರಲು ಶೇ. 99.75 ರಷ್ಟು ಸಾಧ್ಯತೆ ಇದೆ ಎಂದು ವಾವಾ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ, ಏಕೆಂದರೆ ಈ ಹಾವಿನ ಕಡಿತದ ನಂತರ ಗಾಯ ಕೊಳೆತು, ಪ್ರತಿ ವರ್ಷವೂ ಮತ್ತೆ ಒಡೆದುಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆರಂಭದಲ್ಲಿ ಚಿಕಿತ್ಸೆಗೆ ತಡವಾದ ಕಾರಣ ಸಣ್ಣ ರಕ್ತನಾಳಗಳಲ್ಲಿ ರಕ್ತ ಸಂಚಾರ ಕುಂಠಿತವಾಗಿ, ಕೊಳೆತ ಮಾಂಸ ಸಂಪೂರ್ಣ ಸ್ವಚ್ಛವಾಗದೆ, ಪ್ರತಿ ವರ್ಷ ನಿರ್ದಿಷ್ಟ ಸಮಯಕ್ಕೆ ತುರಿಕೆಯೊಂದಿಗೆ ಗಾಯ ಮತ್ತೆ ಒಡೆದುಕೊಳ್ಳುತ್ತಿದೆ. ಹಿಂದೆಯೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದರೆ ಗುಣವಾಗುತ್ತಿತ್ತು ಎಂದು ವಾವಾ ಸುರೇಶ್​ ಹೇಳಿದ್ದಾರೆ.

ಆರ್ಥಿಕ ಸಂಕಷ್ಟ

ಇದುವರೆಗೆ ಚಿಕಿತ್ಸೆಗೆ ಸುಮಾರು 4 ರಿಂದ 5 ಲಕ್ಷ ರೂಪಾಯಿ ಖರ್ಚಾಗಿದ್ದು, ಈಗ ಪ್ರತಿ ತಿಂಗಳು ಔಷಧಿ-ಬಟ್ಟೆಗಾಗಿ ಸುಮಾರು 5,000 ರೂ. ವೆಚ್ಚವಾಗುತ್ತಿದೆ. ಮರ ಕಡಿಯುವ ಕೆಲಸ ಮಾಡಲಾಗದೆ, ಪಕ್ಕದವರ ಸಹಾಯದಿಂದ ಪೊಟ್ಟಣ ಊಟ ಮತ್ತು ಸಣ್ಣಪುಟ್ಟ ವ್ಯಾಪಾರದಿಂದ ಜೀವನ ಸಾಗಿಸುತ್ತಿದ್ದಾರೆ. ವಾವಾ ಸುರೇಶ್ ತಮ್ಮ ತಂಡದ ಕಡೆಯಿಂದ ಪೊಟ್ಟಣ ಊಟದ ವ್ಯಾಪಾರ ಆರಂಭಿಸಲು ನೆರವು ನೀಡುವ ಭರವಸೆ ನೀಡಿದ್ದಾರೆ.

Also Read
ಅಂತ್ಯಕ್ರಿಯೆಗೂ ಬಾರದ ಮಕ್ಕಳು: 4 ದಶಕ ಒಂಟಿಯಾಗಿ ಬದುಕಿ ಅನಾಥಳಂತೆ ಅಂತ್ಯಕಂಡ ತಾಯಿಯ ಮನಕಲಕುವ ಕಥೆ! Elderly Woman
Snakebite

ಸರ್ಕಾರದ ಪರಿಹಾರದ ಮಾಹಿತಿ

ಇನ್ನು ಹಾವು ಕಡಿತದ ಚಿಕಿತ್ಸಾ ವೆಚ್ಚದ ಮರುಪಾವತಿಗೆ ವೈದ್ಯರ ಪ್ರಮಾಣಪತ್ರ ಮತ್ತು ಮೆಡಿಕಲ್ ಬಿಲ್‌ಗಳೊಂದಿಗೆ 6 ತಿಂಗಳ ಒಳಗೆ ಅಕ್ಷಯ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ, ಒಂದು ವರ್ಷ ಕಳೆದರೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಕೃಷ್ಣನ್​ ಅವರಿಗೆ ಪರಿಹಾರ ಸಿಕ್ಕಿಲ್ಲ. ನಿಜಕ್ಕೂ ಇದೊಂದು ದುರ್ದೈವದ ಸಂಗತಿಯೇ ಸರಿ.

ಅಂದಹಾಗೆ, ಬಸ್ ನಿಲ್ಲಿಸಿದಾಗ ತಕ್ಷಣ ಕತ್ತಲೆಯ ಪೊದೆ ಅಥವಾ ಹುಲ್ಲುಗಾವಲಿನೊಳಗೆ ಇಳಿಯಬಾರದು. ಚಾಲಕರೂ ಸುರಕ್ಷಿತ, ಬೆಳಕಿರುವ ಜಾಗದಲ್ಲಿ ವಾಹನ ನಿಲ್ಲಿಸಬೇಕು ಎಂದು ವಾವಾ ಸುರೇಶ್​ ಎಚ್ಚರಿಸಿದ್ದಾರೆ, (ಏಜೆನ್ಸೀಸ್​).