

ಜೈಪುರ: ರಾಜಸ್ಥಾನದ ವಿಶ್ವಪ್ರಸಿದ್ಧ ಪುಷ್ಕರ್ ಮೇಳದಲ್ಲಿ ಸಾಮಾನ್ಯವಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕುದುರೆಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದೆ, ಆದರೆ ಈ ಬಾರಿ ಎಲ್ಲರ ಕಣ್ಣು ಕುಕ್ಕುತ್ತಿರುವುದು 'ಕಾಲಾ ಬಾದಲ್' ಎಂಬ ದೈತ್ಯ ಕೋಣದ ( Millionaire Buffalo ) ಮೇಲೆ. ಏಕೆಂದರೆ, ಕೇವಲ 20 ತಿಂಗಳ ಪ್ರಾಯದಲ್ಲೇ ಬರೋಬ್ಬರಿ 760 ಕೆ.ಜಿ ತೂಕವಿರುವ ಈ ಕೋಣದ ಮೌಲ್ಯ ಬರೋಬ್ಬರಿ ಒಂದು ಕೋಟಿ ರೂಪಾಯಿ. ಅಚ್ಚರಿಯ ಸಂಗತಿ ಏನೆಂದರೆ, ಇಷ್ಟೊಂದು ದೊಡ್ಡ ಮೊತ್ತದ ಬೇಡಿಕೆ ಬಂದರೂ ಇದರ ಮಾಲೀಕರು ಮಾತ್ರ ಈ ಕೋಣವನ್ನು ಮಾರಾಟ ಮಾಡಲು ಸುತಾರಾಂ ಒಪ್ಪುತ್ತಿಲ್ಲ! ಈ ಕುರಿತಾದ ಒಂದು ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪುಷ್ಕರ್ ಮೇಳದ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ, ಕುದುರೆಗಳ ನಡುವೆ ಮಧ್ಯಪ್ರದೇಶದಿಂದ ಆಗಮಿಸಿರುವ ಮುರ್ರಾ ತಳಿಯ 'ಕಾಲಾ ಬಾದಲ್' ಎಂಬ ದೈತ್ಯ ಕೋಣ ಮಾತ್ರ ಪುಷ್ಕರ್ ಮೇಳದ ಜನಸಾಗರವನ್ನೇ ತನ್ನತ್ತ ಸೆಳೆಯುತ್ತಿದೆ. ಕೇವಲ 20 ತಿಂಗಳ ವಯಸ್ಸಿನಲ್ಲೇ ಸುಮಾರು 760 ಕಿಲೋಗ್ರಾಂ ತೂಕ ಹೊಂದಿರುವ ಈ ಕೋಣದ ಬೆಲೆಯನ್ನು ಅದರ ಮಾಲೀಕ ಶೈಲೇಂದ್ರ ಚೌಧರಿ ಅವರು ಸುಮಾರು ಒಂದು ಕೋಟಿ ರೂಪಾಯಿ ಎಂದು ಅಂದಾಜಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಭಾರೀ ತೂಕ ಮತ್ತು ಕೋಟ್ಯಂತರ ರೂಪಾಯಿ ಬೆಲೆ ಹೊಂದಿದ್ದರೂ, ಮಾಲೀಕರು ಇದನ್ನು ಮಾರಾಟ ಮಾಡಲು ಹಿಂದೇಟು ಹಾಕುತ್ತಿರುವುದರ ಹಿಂದೆ ಒಂದು ವಿಶೇಷ ಕಾರಣವಿದೆ; ಅದುವೇ ಮುರ್ರಾ ತಳಿಯ ವಿಶಿಷ್ಟತೆ ಮತ್ತು ಅದರಿಂದ ಪ್ರತಿ ತಿಂಗಳು ಹರಿದುಬರುವ ಲಕ್ಷಾಂತರ ರೂಪಾಯಿ ಆದಾಯ.
ಪುಷ್ಕರ್ ಮೇಳದಲ್ಲಿ ಕೋಟಿ ಬೆಲೆಬಾಳುವ ಕೋಣಗಳು ಗಮನ ಸೆಳೆಯುತ್ತಿರುವುದು ಇದೇ ಮೊದಲೇನಲ್ಲ, 2023ರಲ್ಲಿ ಹರಿಯಾಣದ ಸಿರ್ಸಾದಿಂದ ಬಂದಿದ್ದ 'ಅನ್ಮೋಲ್' ಎಂಬ ಮುರ್ರಾ ತಳಿಯ ಕೋಣವು ಇಡೀ ದೇಶದ ಗಮನ ಸೆಳೆದಿತ್ತು. ಸುಮಾರು 1,570 ಕೆ.ಜಿ ತೂಕವಿದ್ದ ಅನ್ಮೋಲ್ ಬೆಲೆಯನ್ನು ಅದರ ಮಾಲೀಕರು ಬರೋಬ್ಬರಿ 11 ಕೋಟಿ ರೂಪಾಯಿ ಎಂದು ನಿಗದಿಪಡಿಸಿದ್ದರು. ಅಂದು ಅನೇಕರು ಅದನ್ನು ಖರೀದಿಸಲು ಮುಂದೆ ಬಂದರೂ ಮಾಲೀಕರು ಮಾರಾಟ ಮಾಡಿರಲಿಲ್ಲ, ಏಕೆಂದರೆ ಅನ್ಮೋಲ್ ಸುಮಾರು 150 ಕರುಗಳಿಗೆ ಜನ್ಮ ನೀಡಲು ಕಾರಣವಾಗಿತ್ತು. ಕೋಣವನ್ನು ಒಮ್ಮೆಲೇ ಮಾರಾಟ ಮಾಡುವುದಕ್ಕಿಂತ, ಉತ್ತಮ ತಳಿಯ ಸಂತಾನೋತ್ಪತ್ತಿಗೆ ಬಳಸುವುದರಿಂದ ದೀರ್ಘಾವಧಿಯಲ್ಲಿ ಅತಿ ಹೆಚ್ಚು ಲಾಭ ಗಳಿಸಬಹುದು ಎಂಬುದು ಮಾಲೀಕರ ಲೆಕ್ಕಾಚಾರವಾಗಿದೆ.
ಮುರ್ರಾ ತಳಿಯ ಎಮ್ಮೆಗಳು ಅತಿ ಹೆಚ್ಚು ಹಾಲು ನೀಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವುದರಿಂದ, ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ತಮ್ಮ ಎಮ್ಮೆಗಳಿಗೂ ಇಂತಹದ್ದೇ ಉತ್ತಮ ತಳಿಯ ಕರುಗಳು ಜನಿಸಿ ಭವಿಷ್ಯದಲ್ಲಿ ಹೆಚ್ಚಿನ ಹಾಲು ನೀಡಬೇಕೆಂದು ಬಯಸುತ್ತಾರೆ. ಇದೇ ಕಾರಣಕ್ಕೆ ಮುರ್ರಾ ತಳಿಯ ಕೋಣಗಳ ವೀರ್ಯಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಕೋಣದ ವೀರ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಪರೀಕ್ಷಿಸಿದ ನಂತರ, ಸಣ್ಣ ನಳಿಕೆಗಳಲ್ಲಿ ತುಂಬಿ ಅತಿ ಕಡಿಮೆ ತಾಪಮಾನದಲ್ಲಿ ಶೇಖರಿಸಿಡಲಾಗುತ್ತದೆ. ಬಳಿಕ ದೂರದ ಊರುಗಳಲ್ಲಿರುವ ಎಮ್ಮೆಗಳಿಗೆ ಕೃತಕ ಗರ್ಭಧಾರಣೆ ಮಾಡಲು ಇದನ್ನು ಬಳಸಲಾಗುತ್ತದೆ. ಇದರಿಂದ ಕೋಣಗಳನ್ನು ಬೇರೆಡೆಗೆ ಸಾಗಿಸುವ ಶ್ರಮವಿಲ್ಲದೆಯೇ ತಳಿ ಅಭಿವೃದ್ಧಿಪಡಿಸಲು ಸುಲಭವಾಗುತ್ತದೆ.
ವೀರ್ಯ ಮಾರಾಟದಿಂದಲೇ ಈ ಕೋಣಗಳ ಮಾಲೀಕರಿಗೆ ಪ್ರತಿ ತಿಂಗಳು ಭರ್ಜರಿ ಆದಾಯ ಹರಿದುಬರುತ್ತದೆ. 2023ರಲ್ಲಿ 'ಅನ್ಮೋಲ್' ಕೋಣದ ಮಾಲೀಕರು ತಿಳಿಸಿದಂತೆ, ಅದರ ಒಂದು ಡೋಸ್ ವೀರ್ಯವು ಸುಮಾರು 250 ರೂಪಾಯಿಗೆ ಮಾರಾಟವಾಗುತ್ತಿದ್ದು, ತಿಂಗಳಿಗೆ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು. ತದನಂತರ 2025ರಲ್ಲಿ ಮತ್ತೊಬ್ಬ ಕೋಣದ ಮಾಲೀಕರು ಒಂದು ಟ್ಯೂಬ್ ಅನ್ನು 400 ರೂಪಾಯಿಗೆ ಮಾರಾಟ ಮಾಡಿ ಪ್ರತಿ ತಿಂಗಳು 70,000 ದಿಂದ 80,000 ರೂಪಾಯಿ ಆದಾಯ ಗಳಿಸುತ್ತಿರುವುದಾಗಿ ಹೇಳಿಕೊಂಡಿದ್ದರು.
ಆದಾಯವು ಕೋಣದ ತಳಿ, ವೀರ್ಯದ ಗುಣಮಟ್ಟ ಮತ್ತು ಮಾರುಕಟ್ಟೆಯ ಬೇಡಿಕೆಯನ್ನು ಅವಲಂಬಿಸಿರುವುದರಿಂದ, ಪುಷ್ಕರ್ ಮೇಳದಲ್ಲಿ ಕೋಟ್ಯಂತರ ರೂಪಾಯಿ ಆಫರ್ ಬಂದರೂ ಮಾಲೀಕರು ಇವುಗಳನ್ನು ಮಾರಾಟ ಮಾಡದೆ ನಿರಂತರ ಆದಾಯದ ಮೂಲವಾಗಿ ಉಳಿಸಿಕೊಂಡಿದ್ದಾರೆ, (ಏಜೆನ್ಸೀಸ್).