ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ 
ಕ್ರಿಕೆಟ್

ಬಾಲಿವುಡ್ ನಟನ ಜತೆ ಸಾರಾ ತೆಂಡೂಲ್ಕರ್ ಮದುವೆ? ವೈರಲ್​ ಆಗ್ತಿದೆ ನಾದಿನಿ ಸಾನಿಯಾ ಆಡಿದ ಆ ಒಂದು ಮಾತು..! Sara Tendulkar

ಸಾರಾ ಮತ್ತು ರಾಜ್ವೀರ್ ಪರಸ್ಪರ ಪ್ರೀತಿಸುತ್ತಿದ್ದು, ಮುಂದಿನ ವರ್ಷ ಅಂದರೆ 2027ರಲ್ಲಿ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಕ್ರಿಕೆಟ್ ಮತ್ತು ಬಾಲಿವುಡ್ ಅಭಿಮಾನಿಗಳಲ್ಲಿ ಸಾರಾ ಹಾಗೂ ರಾಜ್ವೀರ್ ನಡುವಿನ ಸಂಬಂಧದ ಕುರಿತು ತೀವ್ರ ಕುತೂಹಲ ಹಾಗೂ ಚರ್ಚೆಗಳು ಶುರುವಾಗಿವೆ.

ಮುಂಬೈ: ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ( Sara Tendulkar ) ಅವರ ಮದುವೆ ವಿಚಾರವಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಕಿರಿಯ ಪುತ್ರ ಹಾಗೂ ಯುವ ನಟ ರಾಜ್ವೀರ್ ಡಿಯೋಲ್ ಮತ್ತು ಸಾರಾ ತೆಂಡೂಲ್ಕರ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಸದ್ಯ ಇಂಟರ್‌ನೆಟ್‌ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

ಸಾರಾ ಮತ್ತು ರಾಜ್ವೀರ್ ಪರಸ್ಪರ ಪ್ರೀತಿಸುತ್ತಿದ್ದು, ಮುಂದಿನ ವರ್ಷ ಅಂದರೆ 2027ರಲ್ಲಿ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಕ್ರಿಕೆಟ್ ಮತ್ತು ಬಾಲಿವುಡ್ ಅಭಿಮಾನಿಗಳಲ್ಲಿ ಸಾರಾ ಹಾಗೂ ರಾಜ್ವೀರ್ ನಡುವಿನ ಸಂಬಂಧದ ಕುರಿತು ತೀವ್ರ ಕುತೂಹಲ ಹಾಗೂ ಚರ್ಚೆಗಳು ಶುರುವಾಗಿವೆ.

ಸಾಮಾಜಿಕ ಜಾಲತಾಣಗಳಾದ 'ಎಕ್ಸ್' (X) ಮತ್ತು 'ರೆಡ್ಡಿಟ್' (Reddit) ನಲ್ಲಿ ಹಂಚಿಕೊಳ್ಳಲಾದ ಕೆಲವು ಪೋಸ್ಟ್‌ಗಳು ಈ ಮದುವೆ ವದಂತಿಗಳಿಗೆ ಮೊದಲ ಕಿಡಿ ಹಚ್ಚಿವೆ. ರಾಜ್ವೀರ್ ಡಿಯೋಲ್ ಅವರು ಸಾರಾ ಅವರಿಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ ಎಂಬ ಮಾತುಗಳೂ ಕೆಲವು ಪೋಸ್ಟ್‌ಗಳಲ್ಲಿ ಕೇಳಿಬಂದಿವೆ. ಇದರ ಜತೆಗೆ, ಸಾರಾ ಅವರ ಸಹೋದರ ಅರ್ಜುನ್ ತೆಂಡೂಲ್ಕರ್ ಅವರ ಪತ್ನಿ ಸಾನಿಯಾ ಚಾಂದೋಕ್ ಅವರು ನೀಡಿರುವ ಒಂದು ಹೇಳಿಕೆಯನ್ನು ಸಹ ಈ ಮದುವೆ ಸುದ್ದಿಗೆ ತಳುಕು ಹಾಕಲಾಗುತ್ತಿದೆ. ಈ ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆಯೇ ಹಲವು ಮನರಂಜನಾ ವೆಬ್‌ಸೈಟ್‌ಗಳಲ್ಲೂ ಈ ಕುರಿತು ವರದಿಗಳು ಪ್ರಕಟವಾಗಿವೆ.

ಆದರೆ, ಈ ಎಲ್ಲಾ ಸುದ್ದಿಗಳಿಗೆ ಇದುವರೆಗೂ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಸಾರಾ ತೆಂಡೂಲ್ಕರ್ ಆಗಲಿ ಅಥವಾ ರಾಜ್ವೀರ್ ಡಿಯೋಲ್ ಆಗಲಿ ತಮ್ಮ ನಡುವಿನ ಸಂಬಂಧ ಅಥವಾ 2027ರ ಮದುವೆ ವದಂತಿಗಳ ಬಗ್ಗೆ ಎಲ್ಲಿಯೂ ತುಟಿಬಿಚ್ಚಿಲ್ಲ. ಅಷ್ಟೇ ಅಲ್ಲದೆ, ಸಚಿನ್ ತೆಂಡೂಲ್ಕರ್ ಕುಟುಂಬವಾಗಲಿ ಅಥವಾ ಸನ್ನಿ ಡಿಯೋಲ್ ಕುಟುಂಬವಾಗಲಿ ಈ ವಿಚಾರವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ, ಸದ್ಯ ಹರಿದಾಡುತ್ತಿರುವ ಈ ಸುದ್ದಿಗಳು ಕೇವಲ ಆಧಾರರಹಿತ ವದಂತಿಗಳಷ್ಟೇ ಎನ್ನಲಾಗುತ್ತಿದೆ.

ಈ ಹಿಂದೆಯೂ ಸಾರಾ ಅವರ ವೈಯಕ್ತಿಕ ಜೀವನದ ಬಗ್ಗೆ ಇಂತಹದ್ದೇ ಸುದ್ದಿಗಳು ಹಬ್ಬಿದ್ದವು. ವಿಶೇಷವಾಗಿ ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಅವರನ್ನು ಸಾರಾ ಪ್ರೀತಿಸುತ್ತಿದ್ದು, ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಜೋರಾಗಿದ್ದವು. ಆದರೆ ಅದಕ್ಕೂ ಯಾವುದೇ ಅಧಿಕೃತ ಪುರಾವೆ ಸಿಕ್ಕಿರಲಿಲ್ಲ.

ಇತ್ತೀಚೆಗೆ ಸಾರಾ ತೆಂಡೂಲ್ಕರ್ ಅವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋವೊಂದು ಈ ಮದುವೆ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಕುಟುಂಬ ಸದಸ್ಯರು ಸಾರಾಗೆ ಹುಟ್ಟುಹಬ್ಬದ ಶುಭಾಶಯ ಕೋರುವ ರೀಲ್ ಅನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ತಾಯಿ ಅಂಜಲಿ, ಸಹೋದರ ಅರ್ಜುನ್, ತಂದೆ ಸಚಿನ್, ಅತ್ತಿಗೆ ಸಾನಿಯಾ ಚಾಂದೋಕ್ ಸೇರಿದಂತೆ ಇತರ ಸಂಬಂಧಿಕರು ಸಾರಾಗೆ ಮುಂಬರುವ ವರ್ಷವು ಶುಭ ತರಲಿ ಎಂದು ಹಾರೈಸಿರುವುದು ಕಂಡುಬಂದಿದೆ.

ಈ ವಿಡಿಯೋದಲ್ಲಿ ಮಗಳಿಗಾಗಿ ಸಚಿನ್ ತೆಂಡೂಲ್ಕರ್ ನೀಡಿದ ಹೃದಯಸ್ಪರ್ಶಿ ಶುಭಾಶಯ ಎಲ್ಲರ ಗಮನ ಸೆಳೆದಿದೆ. "ಈ ವರ್ಷ ಸಾರಾಗೆ ವಿಶೇಷ ವ್ಯಕ್ತಿಯೊಬ್ಬರು ಸಿಗಲಿ" ಎಂದು ಸಚಿನ್ ಹಾರೈಸಿದ್ದಾರೆ. ಬಳಿಕ ಇನ್ನೇನೋ ಹೇಳಲು ಮುಂದಾದ ಸಚಿನ್, ತಕ್ಷಣವೇ ಮಾತು ನಿಲ್ಲಿಸಿ, "ನಾನು ಇದಕ್ಕಿಂತ ಹೆಚ್ಚೇನೂ ಹೇಳುವುದಿಲ್ಲ, ನಾನು ಹೇಳಬೇಕಾದ್ದನ್ನು ಹೇಳಿದ್ದೇನೆ. ನೀನು ಹೀಗೆಯೇ ಪಾಸಿಟಿವ್​ ಆಗಿರು ಮತ್ತು ಇತರರಿಗೂ ನಿನ್ನ ಪಾಸಿಟಿವಿಟಿಯನ್ನು ಹರಡು" ಎಂದು ಹೇಳಿದ್ದರು.

ಮಗಳ ವೈಯಕ್ತಿಕ ಜೀವನದ ಗುಟ್ಟನ್ನು ಬಿಟ್ಟುಕೊಡದೆ ಸಚಿನ್ ಆಡಿದ ಈ ಕುತೂಹಲಕಾರಿ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ತಂದೆಯ ಮಾತು ಕೇಳಿದಾಗ ಸಾರಾ ಮುಖದಲ್ಲಿ ಮೂಡಿದ ಭಾವನೆಗಳನ್ನು ಕಂಡು ನೆಟ್ಟಿಗರು ನಾನಾ ರೀತಿಯ ಊಹಾಪೋಹಗಳನ್ನು ಹರಿಬಿಟ್ಟಿದ್ದಾರೆ.

ಇದೇ ವಿಡಿಯೋದಲ್ಲಿ ಅರ್ಜುನ್ ತೆಂಡೂಲ್ಕರ್ ಅವರ ಪತ್ನಿ ಸಾನಿಯಾ ಚಾಂದೋಕ್ ಆಡಿದ ಮಾತುಗಳು ಸದ್ಯದ ವದಂತಿಗಳಿಗೆ ಪ್ರಮುಖ ಕಾರಣವಾಗಿವೆ. "ಸಾರಾಗೆ ಮುಂಬೈನ ಪೆರ್ರಿ ಕ್ರಾಸ್ ರಸ್ತೆಯಲ್ಲಿ ವಾಸಿಸುವಂತಹ ಸಂಗಾತಿ ಸಿಗಲಿ, ಆಗ ಆಕೆ ಯಾವಾಗಲೂ ನಮ್ಮ ಹತ್ತಿರದಲ್ಲೇ ಇರಬಹುದು" ಎಂದು ಸಾನಿಯಾ ಶುಭ ಹಾರೈಸಿದ್ದರು. ತೆಂಡೂಲ್ಕರ್ ಕುಟುಂಬದ ನಿವಾಸವು ಮುಂಬೈನ ಪೆರ್ರಿ ಕ್ರಾಸ್ ರಸ್ತೆಯಲ್ಲೇ ಇದೆ. ವಿಶೇಷವೆಂದರೆ, ಈ ವರ್ಷದ ಆರಂಭದಲ್ಲಿ ಸಾರಾ ಅವರ ಕಿರಿಯ ಸಹೋದರ ಅರ್ಜುನ್ ಅವರು ಸಾರಾಳ ಆಪ್ತ ಸ್ನೇಹಿತೆಯಾಗಿದ್ದ ಸಾನಿಯಾ ಚಾಂದೋಕ್ ಅವರನ್ನೇ ವಿವಾಹವಾಗಿದ್ದರು. ಅತ್ತಿಗೆಯ ಈ ಆಸೆಯೇ ಈಗ ಬಾಲಿವುಡ್ ನಟನೊಂದಿಗಿನ ಮದುವೆ ವದಂತಿಗೆ ಲಿಂಕ್ ಆಗಿದೆ.

ಇನ್ನು ವದಂತಿಯಲ್ಲಿ ಕೇಳಿಬರುತ್ತಿರುವ ರಾಜ್ವೀರ್ ಡಿಯೋಲ್ ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ ಅವರ ಕಿರಿಯ ಪುತ್ರ ಹಾಗೂ ಖ್ಯಾತ ನಟ ಧರ್ಮೇಂದ್ರ ಅವರ ಮೊಮ್ಮಗ. ರಾಜ್ವೀರ್ ಅವರು 2023ರಲ್ಲಿ ತೆರೆಕಂಡ 'ದೋನೋ' (Dono) ಚಿತ್ರದ ಮೂಲಕ ನಾಯಕ ನಟನಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಮತ್ತೊಂದೆಡೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿಯಾಗಿದ್ದರೂ ಸಾರಾ ತೆಂಡೂಲ್ಕರ್ ಸೈಬರ್ ಲೋಕ ಮತ್ತು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 9 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿರುವ ಸಾರಾ, ಮುಂಬೈನಲ್ಲಿ 'ಪಿಲೇಟ್ಸ್ ಸ್ಟುಡಿಯೋ' (Pilates Studio) ನಡೆಸುತ್ತಿದ್ದಾರೆ ಹಾಗೂ ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಫ್ರಾಂಚೈಸಿಯ ಮಾಲೀಕರಾಗಿಯೂ ಗುರುತಿಸಿಕೊಂಡಿದ್ದಾರೆ, (ಏಜೆನ್ಸೀಸ್​).